ಮಂಡ್ಯ: ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ಸರ್ಕಾರದ ವಿರುದ್ಧ ಕನ್ನಡ ಸಂಘಟನೆಗಳ ಒಕ್ಕೂಟ ಕರೆ ನೀಡಿದ್ದ ಕರ್ನಾಟಕ ಬಂದ್ ಬೆಂಬಲಿಸಿ ಚಿತ್ರನಟ ದರ್ಶನ್ ಅಭಿಮಾನಿಗಳು, ರಾಜಸ್ಥಾನ ಸಮಾಜ, ಮಂಗಳಮುಖಿಯರು,ಎಸ್ ಡಿ ಪಿ ಐ ಹಾಗೂ ವಿಶ್ವಕರ್ಮ ಸಮಾಜ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಪಟಿಸಿದರು.
ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕಿನಿಂದ ದರ್ಶನ್ ಸೇನಾ ಸಮಿತಿ ಆಶ್ರಯದಲ್ಲಿ ಮೆರವಣಿಗೆ ಹೊರಟ ದರ್ಶನ್ ತೂಗುದೀಪ್ ಅಭಿಮಾನಿಗಳು ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಸಾಗಿ ನಾವು ಎಂದೆಂದಿಗೂ ರೈತಪರ ಎಂದರು
ಕೇಂದ್ರ- ರಾಜ್ಯ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ವಿರುದ್ಧ ಧಿಕ್ಕಾರದ ಘೋಷಣೆ ಜೊತೆಗೆ ಗೋವಿಂದ ಗೋವಿಂದ ಕೆ ಆರ್ ಎಸ್ ನಲ್ಲಿ ನೀರೆಲ್ಲ ಖಾಲಿ ಗೋವಿಂದ, ನಿಲ್ಲಿಸಿ ನಿಲ್ಲಿಸಿ ತಮಿಳುನಾಡಿಗೆ ಹರಿಯುತ್ತಿರುವ ನೀರು ನಿಲ್ಲಿಸಿ ಎಂದು ಕೂಗಿದರು.
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ನಿರಂತರ ಅನ್ಯಾಯ ವಿರೋಧಿಸಿ ರಾಜಸ್ಥಾನ ಸಮಾಜದ ಸದಸ್ಯರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಪೇಟೆ ಬೀದಿಯಿಂದ ಮೆರವಣಿಗೆ ಹೊರಟು ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಆಳುವ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶಿಸಿದರು.
ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ತಕ್ಷಣ ನಿಲ್ಲಿಸಬೇಕು, ಬೇಸಾಯಕ್ಕೆ ನೀರಿಲ್ಲದಂತಾಗಿದ್ದು, ಮುಂದಿನ ದಿನಗಳಲ್ಲಿ ಕುಡಿಯಲು ಸಹ ನೀರು ಸಿಗದಂತಾಗಲಿದೆ, ನಾವೆಲ್ಲರೂ ಕಾವೇರಿ ನೀರು ಕುಡಿದು ಬದುಕುತ್ತಿದ್ದೇವೆ, ಕಾವೇರಿ ವಿಚಾರದಲ್ಲಿ ನ್ಯಾಯ ಸಿಗುವವರೆಗೂ ಹೋರಾಡುತ್ತೇವೆ ಎಂದರು.
ಮಂಗಳಮುಖಿಯರು ಕಾವೇರಿ ಹೋರಾಟ ಬೆಂಬಲಿಸಿ ಪ್ರತಿಭಟನೆ ನಡೆಸಿದರು.
ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಕಾವೇರಿ ಹೋರಾಟಗಾರರ ಜೊತೆ ಸೇರಿದ ಮಂಗಳಮುಖಿಯರು ಖಾಲಿ ಬಿಂದಿಗೆ ಪ್ರದರ್ಶಿಸಿ ರೈತರಿಗೆ ಆಗಿರುವ ಅನ್ಯಾಯ ಖಂಡಿಸಿದರು.
ಎಸ್ ಡಿ ಪಿ ಐ ಕಾರ್ಯಕರ್ತರು ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿ ಹಲವು ತಾಸು ಪ್ರತಿಭಟನೆ ನಡೆಸಿದರು.
ಕಾವೇರಿ ನಮ್ಮದು,ರೈತರಿಗೆ ಆಗುತ್ತಿರುವ ಅನ್ಯಾಯ ಸರ್ಕಾರ ಮಾಡುತ್ತಿರುವ ದ್ರೋಹವಾಗಿದೆ ಎಂದು ಕಿಡಿಕಾರಿದರು.
ಮಂಡ್ಯ ಜಿಲ್ಲಾ ವಿಶ್ವಕರ್ಮ ಸಮಾಜದ ಆಶ್ರಯದಲ್ಲಿ ಚಿನ್ನದ ಅಂಗಡಿಯ ಕೆಲಸಗಾರರು ಪೇಟೆ ಬೀದಿಯಿಂದ ಬೈಕ್ ಜಾತ ನಡೆಸಿ ಕಾವೇರಿ ಹೋರಾಟ ಬೆಂಬಲಿಸಿದರು.
ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ನಾಮ ತಮಿಳುನಾಡಿಗೆ ಲಡ್ಡು ಸಿಹಿ ಎಂದು ಆಕ್ರೋಶಿಸಿಕೇಂದ್ರ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.