ಬೆಳಗಾವಿ: ಚಲಿಸುತ್ತಿದ್ದ ಕಾರಿನ ಮೇಲೆ ಕಬ್ಬು ತುಂಬಿದ ಟ್ರ್ಯಾಕ್ಟರ್ ಪಲ್ಟಿಯಾಗಿ ಯುವಕ ಸಾವನ್ನಪ್ಪಿರುವ ಘಟನೆ ಇಲ್ಲಿನ ಸುವರ್ಣಸೌಧದ ಬಳಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಟ್ರಾಕ್ಟರ್ ಪಕ್ಕದಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದಿದೆ. ಕಾರಿನಲ್ಲಿದ್ದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತ ಯುವಕನನ್ನು ಹುಬ್ಬಳ್ಳಿ ಮೂಲದ ಗಿರೀಶ್ ಕುಲಕರ್ಣಿ(೨೪) ಎಂದು ಗುರುತಿಸಲಾಗಿದೆ. ಪ್ರಥಮ್ ಹಾಗೂ ಇನ್ನೋರ್ವ ಗಿರೀಶ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೂವರು ಸ್ನೇಹಿತರು ಹುಟ್ಟುಹಬ್ಬ ಆಚರಣೆ ಮುಗಿಸಿ ಕಾರಿನಲ್ಲಿ ಹುಬ್ಬಳ್ಳಿಗೆ ವಾಪಾಸ್ ಆಗುತ್ತಿದ್ದರು. ಈ ವೇಳೆ ಈ ಅಪಘಾತ ಸಂಭವಿಸಿದೆ. ಹಿರೇಬಾಗೇವಾಡಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.