ಕಾರವಾರದಲ್ಲಿ ಮಾಜಿ ನಗರಸಭಾ ಸದಸ್ಯನ ಹತ್ಯೆ: ಹಣದ ವ್ಯವಹಾರಕ್ಕೆ ನಡೆದ ಗಲಾಟೆಯಲ್ಲಿ ಕೊಲೆ

ಕಾರವಾರ: ಕಾರವಾರವಾರದಲ್ಲಿ ಬೆಳ್ಳಂ ಬೆಳಿಗ್ಗೆ ರೌಡಿಶೀಟರ್ ಭೀಕರ ಹತ್ಯೆಯಾಗಿದೆ. ಸಂತೆ ಮಾರುಕಟ್ಟೆಯಲ್ಲಿಯೇ ಹಣದ ವ್ಯವಹಾರ ಸಂಬಂಧ ಇಬ್ಬರು ವ್ಯಕ್ತಿಗಳೊಂದಿಗೆ ನಡೆದ ಜಗಳದಲ್ಲಿ ಆರೋಪಿಗಳು ಚಾಕುವಿನಿಂದ ಚುಚ್ಚಿ ಭರ್ಬರವಾಗಿ ಕೊಲೆ ಮಾಡಲಾಗಿದೆ.
ಕಾರವಾರ ಪದ್ಮನಾಭನಗರದ ನಗರಸಭಾ ಮಾಜಿ ಸದಸ್ಯ ಸತೀಶ್ ಕೊಳಂಕರ್ (೬೫) ಹತ್ಯೆಯಾದ ವ್ಯಕ್ತಿ. ಮುಂಜಾನೆ ವಾಂಕಿಂಗ್ ಬಂದ ವೇಳೆ ನಗರದ ಅಂಬೇಡ್ಕರ್ ಸರ್ಕಲ್ ಬಳಿ ಸತೀಶ್ ಕೊಳಂಕರ್ ಬೈಕ್ ಅಡ್ಡಗಟ್ಟಿದ ಇಬ್ಬರು ಆರೋಪಿಗಳು ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಜಗಳತೆಗದಿದ್ದಾರೆ ಎನ್ನಲಾಗಿದೆ. ಜಗಳ ವಿಕೋಪಕ್ಕೆ ತೆರಳಿ ಮೊದಲೇ ತಂದಿದ್ದ ಚಾಕುವಿನಿಂ ಸತೀಶ್ ಕೊಳಂಕರ್ ಎದೆಭಾಗಕ್ಕೆ ಚುಚ್ಚಿ ಬಳಿಕ ಅಲ್ಲಿಂದ ಪರಾರಿಯಾಗಿದ್ದರು. ರಕ್ತದ ಮಡುವಿನಲ್ಲಿ ಬಿದ್ದದ್ದ ಸತೀಶ್ ಕೊಳಂಕರ್ ಅವರನ್ನು ಬಳಿಕ‌ ಕ್ರೀಮ್ಸ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಲು ಪ್ರಯತ್ನಿಸಿದ್ದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದರು ಎನ್ನಲಾಗಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಮೃತನ ಮಗಳಾದ ಪೂರ್ಣಿಮಾ ಕೊಳಂಕರ್, ಒಂದು ವಾರದ ಹಿಂದೆ ತಂದೆಯೊಂದಿಗೆ ಏಳೆಂಟು ಜನರು ಜಗಳವಾಡಿ ಹಲ್ಲೆ ಮಾಡಿದ್ದರು. ಇಂದು ಮುಂಜಾನೆ ವಾಕಿಂಗ್ ತೆರಳಿದಾಗ ಚಾಕುವಿನಿಂದ ಹಲ್ಲೆಯಾಗಿರುವ ಬಗ್ಗೆ ಯಾರೋ‌ ಕರೆ ಮಾಡಿ ತಿಳಿಸಿದ್ದರು. ನಮ್ಮ ತಂದೆಯ ಮೇಲೆ ಹಲ್ಲೆ ಮಾಡಿದವರನ್ನೂ ಕೂಡಲೇ ಪೊಲೀಸರು ಬಂಧಿಸಬೇಕು ಎಂದು ಆಗ್ರಹಿಸಿದರು.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ನಗರದ ಮಾರುಕಟ್ಟೆ ಪ್ರದೇಶದಲ್ಲಿ ಮುಂಜಾನೆ ಮಾಜಿ ನಗರಸಭಾ ಸದಸ್ಯ ಹಾಗೂ ರೌಡಿಶೀಟರ್ ಸತೀಶ್ ಕೊಳಂಕರ್ ಕೊಲೆ ಮಾಡಲಾಗಿದೆ. ರೌಡಿಶೀಟರ್ ಆಗಿರುವ ಈತನ‌ ಮೇಲೆ 9 ಪ್ರಕರಣಗಳಿದೆ. ಅಲ್ಲದೆ ಕುಟುಂಬದವರ ಮೇಲೂ ಹಣ ವಂಚನೆ ಪ್ರಕರಣಗಳು ದಾಖಲಾಗಿವೆ. ಆರೋಪಿಗಳಿಂದ ಈತ ಎರಡು ಲಕ್ಷ ಹಣವನ್ನು ಸಾಲ ಪಡೆದಿದ್ದ. ಆರೋಪಿಗಳು ಮರಳಿ ಕೇಳಿದರೂ ನೀಡಿರಲಿಲ್ಲ. ಕೆಲವು ದಿನದ ಹಿಂದ ಕಾರವಾರದ ಪ್ರೀಮಿಯರ್ ಹೋಟಲ್ ನಲ್ಲಿ ದುಡ್ಡನ್ನು ವಾಪಾಸ್ ಕೊಡುವಂತೆ ಗಲಾಟೆ ಆಗಿತ್ತು.‌ ಇಂದು ಬೆಳಗ್ಗೆ ಹಣ ವಾಪಾಸ್ ಕೇಳಿದ್ದಾರೆ. ಈ ವಿಷಯಕ್ಕೆ ನಡೆದ ಗಲಾಟೆಯಲ್ಲಿ ಆರೋಪಿಗಳು ಮೊದಲೇ ತಂದಿದ್ದ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ. ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಡಿವೈ ಎಸ್ಪಿ ಗಿರೀಶ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ. ಆರೋಪಿಗಳ ಗುರುತು ಪತ್ತೆಯಾಗಿದ್ದು ಬಂಧನಕ್ಕೆ ತಂಡ ಕಾರ್ಯಪ್ರವೃತ್ತವಾಗಿದೆ ಎಂದು ಮಾಹಿತಿ ನೀಡಿದರು.
ಇನ್ನು ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.