ದಾವಣಗೆರೆ: ಉಚಿತ ವಿದ್ಯುತ್ ನೀಡುವುದು ಅಸಾಧ್ಯ ಎಂಬುದು ಗೊತ್ತಿದ್ದರೂ ಕಾಂಗ್ರೆಸ್ ವಾಗ್ದಾನ ನೀಡುವ ಮೂಲಕ ಮತದಾರರನ್ನ ಯಾಮಾರಿಸುವ ಕೆಲಸ ಮಾಡುತ್ತಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ಉಚಿತ ವಿದ್ಯುತ್ ಸೇರಿದಂತೆ ಇತರೆ ಆಶ್ವಾಸನೆಗಳನ್ನೂ ನೀಡುತ್ತಿದ್ದಾರೆ. ಆದರೆ ನಾವು ಆಶ್ವಾಸನೆಗೆ ಸೀಮಿತಗೊಳ್ಳದೆ ಕೃತಿಯಲ್ಲಿ ಮಾಡಿ ತೋರಿಸಿದ್ದೇವೆ ಎಂಬುದಕ್ಕೆ ಈಗಾಗಲೇ ಎಸ್ಸಿ ಎಸ್ಟಿಗಳಿಗೆ ಉಚಿತ ವಿದ್ಯುತ್ ಯೋಜನೆ ಜಾರಿ ಮಾಡಿರುವುದೇ ಸಾಕ್ಷಿ ಎಂದರು.
ಕಾಂಗ್ರೆಸ್ ನವರು ಕೇಜ್ರಿವಾಲ್ ದಾರಿಯಲ್ಲಿ ಹೋಗುತ್ತಿದ್ದಾರೆ. ಅವರು ಹೋಗಲಿ. ಅವರು ಹೇಳುತ್ತಾರೆ ನಾವು ಮಾಡಿ ತೋರಿಸುತ್ತಿದ್ದೇವೆ ಎಂದರು.ಈಗ ಮೀಸಲಾತಿ ನೀಡಿರುವ ವಿಚಾರದಲ್ಲಿ ಗೊಂದಲವಿಲ್ಲ. ಈಗಾಗಲೇ ಒಂದು ಹೆಜ್ಜೆ ಸರ್ಕಾರ ಇಟ್ಟಿದೆ.ಅದು ಯತ್ನಾಳ್ ಅವರಿಗೆ ಅರ್ಥ ಆಗಿಲ್ಲ, ಅಂದರೆ ನಾನೇನು ಮಾಡಲಿ ಎಂದರು. ಬಜೆಟ್ ಪ್ರಕ್ರಿಯೆ ಶುರುವಾಗಿದೆ. ಆ ಬಗ್ಗೆ ಪ್ರಮುಖ ಸಭೆಗಳು ನಡೆಯುತ್ತಿವೆ. ಹಣಕಾಸು ವ್ಯವಸ್ಥೆ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಫೆಬ್ರವರಿ ಎರಡನೇ ವಾರ ಜನಪರ ಬಜೆಟ್ ಮಂಡನೆ ಮಾಡುತ್ತೇವೆ ಎಂದು ಹೇಳಿದರು.


























