ಶಿವಮೊಗ್ಗ: ಕರ್ನಾಟಕ ರಾಜ್ಯವನ್ನು ಮುಸ್ಲಿಮರಿಗೆ ಮಾರಿಬಿಡಿ ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅವರ ನಡವಳಿಕೆಗಳೇ ನೆಮ್ಮದಿ ತರುತ್ತಿಲ್ಲ. ಓಲೈಕೆ ರಾಜಕಾರಣ ಎಷ್ಟು ದಿನ? ಮುಸ್ಲಿಮರು ಏನು ಬೇಕಾದರೂ ಈ ರಾಜ್ಯದಲ್ಲಿ ಮಾಡಬಹುದೇ? ನಮ್ಮ ಹಿಂದೂ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗಿದರೂ ಸುಮ್ಮನಿರಬೇಕು, ಪೊಲೀಸ್ ಜೀಪ್‌ಗಳಿಗೆ ಬೆಂಕಿ ಹಚ್ಚಿದರೂ ಸುಮ್ಮನಿರಬೇಕು, ಎಲ್ಲಿಯವರೆಗೂ ಈ ರೀತಿಯ ಆಡಳಿತ? ಅದರಲ್ಲೂ ಹೆಣ್ಣುಮಕ್ಕಳಿಗೆ ಬೆಲೆಯೇ ಇಲ್ಲದಂತಾಗಿದೆ ಎಂದರು.
ಹಾವೇರಿಯ ಸ್ವಾತಿ ಅವರನ್ನು ಹೀನಾಯವಾಗಿ ಲವ್ ಜಿಹಾದ್ ಮೂಲಕ ಬಲೆಗೆ ಬೀಳಿಸಿಕೊಂಡು ಕಾಡಿನಲ್ಲಿ ಕತ್ತು ಹಿಸುಕಿ ಕೊಲೆ ಮಾಡಿ ನದಿಗೆ ಶವ ಎಸೆಯುತ್ತಾರೆ ಎಂದರೆ ಹೇಗೆ ಸಹಿಸಿಕೊಂಡು ಇರಬೇಕು. ಇಡೀ ರಾಜ್ಯವೇ ತಲೆ ತಗ್ಗಿಸುವಂತಹ ವಿಚಾರವಾದರೂ ಕೂಡ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಕನಿಷ್ಠ ಖಂಡನೆಯನ್ನೂ ಕೂಡ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸ್ವಾತಿಯ ಕುಟುಂಬಕ್ಕೆ ಸಾಂತ್ವನ ಹೇಳಲು ರಾಷ್ಟ್ರಭಕ್ತರ ಬಳಗದ ಸದಸ್ಯರು ಮಂಗಳವಾರ ಮಾಸೂರಿಗೆ ಹೋಗುತ್ತಿದ್ದೇವೆ. ಮಾಸೂರಿನ ಬಂದ್ ಕೂಡ ನಡೆಯುತ್ತಿದೆ. ಏನೇ ಮಾಡಿದರೂ ಈ ಮುಸ್ಲಿಂ ಗೂಂಡಾಗಳಿಗೆ ರಾಜ್ಯ ಸರ್ಕಾರದ ಬೆಂಬಲ ಇರುತ್ತದೆ. ರಾಜ್ಯ ಸರ್ಕಾರ ಈಗಲಾದರೂ ಎಚ್ಚತ್ತುಕೊಳ್ಳಬೇಕು. ಇಂತಹ ಘಟನೆಗಳು ನಡೆದಾಗ ಆರೋಪಿಗಳನ್ನು ಗುಂಡಿಟ್ಟು ಕೊಲ್ಲುವಂತಹ ಕಾನೂನನ್ನು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.