ಕರ್ನಾಟಕದಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಳ

0
32

ದಾವಣಗೆರೆ: ದೇಶದಲ್ಲಿ ಒಂದು ಸಾವಿರ ತಾಯಂದಿರಲ್ಲಿ 7 ಬಾಲ ತಾಯಂದಿರು ಪತ್ತೆಯಾದರೆ, ಕರ್ನಾಟಕದಲ್ಲಿ ಇದರ ಸಂಖ್ಯೆ ಹೆಚ್ಚಾಗಿಯೇ ಇದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಡಾ. ಅರ್ಚನಾ ಮಜುಂದಾರ್ ಆತಂಕ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಚಿಗಟೇರಿ ಆಸ್ಪತ್ರೆ ಆವರಣದಲ್ಲಿರುವ ಸಖಿ ಒನ್ ಸ್ಟಾಪ್ ಸೆಂಟರ್‌ಗೆ ಸೋಮವಾರ ಸಂಜೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಈ ಭಾಗದಲ್ಲಿ ಫೋಕ್ಸೋ ಪ್ರಕರಣದ ಜತೆಗೆ ಬಾಲಕಿಯರು ಗರ್ಭಿಣಿ ಆಗುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿದೆ. ಆದ್ದರಿಂದ ಇಲ್ಲಿನ ಸಿಬ್ಬಂದಿ ಆಶಾ ಸೇರಿ ಇತರೆ ಕಾರ್ಯಕರ್ತರನ್ನು ಬಳಕೆ ಮಾಡಿಕೊಂಡು ಬಾಲ್ಯವಿವಾಹ, ಹದಿಹರಿಯದಲ್ಲಿ ಗರ್ಭಿಣಿ ಆಗುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕೆಂದು ಕಿವಿಮಾತು ಹೇಳಿದರು.
ಪಠ್ಯ ಸೇರಿಸಲು ಪಿಎಂಗೆ ಪತ್ರ:
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಬಾಲ್ಯ ವಿವಾಹ ಮತ್ತು ಬಾಲ್ಯದಲ್ಲಿ ಗರ್ಭ ಧರಿಸಿರುವುದರಿಂದ ಆ ಮಗುವಿನ ಮೇಲೆ ಆಗುವ ದುಷ್ಪರಿಣಾಮ ಹಾಗೂ 18 ವರ್ಷದ ಮೇಲ್ಪಟ್ಟು ಮದುವೆ ಆಗುವುದರಿಂದ ಏನು ಪ್ರಯೋಜನವಾಗಲಿದೆ ಎಂಬುದನ್ನು ಪಠ್ಯದಲ್ಲಿ ಸೇರಿಸುವಂತೆ ಆಯೋಗದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ಪುರುಷರಷ್ಟೇ ಮಹಿಳೆಯರಿಗೂ ಅಧಿಕಾರ ಇದ್ದರೂ ಮನೆಯಿಂದ ಹೊರ ಬಿದ್ದರೆ ನಮ್ಮನ್ನು ಸಾಕುವವರು ಯಾರು?, ಎಲ್ಲಿ ವಾಸವಿರಬೇಕೆಂಬ ಕಾರಣದಿಂದ ಎಷ್ಟೇ ದೌರ್ಜನ್ಯ ನಡೆದರೂ ಮಹಿಳೆಯರು ಸಹಿಸಿಕೊಂಡು ಇರುತ್ತಿದ್ದಾರೆ. ಹೀಗೆ ದೌರ್ಜನ್ಯ ಒಳಗಾಗುವ ಸಂತ್ರಸ್ತೆಯರಿಗಾಗಿಯೇ ಈ ಸಖಿ ಒನ್ ಸ್ಟಾಪ್ ಸೆಂಟರ್ ಸ್ಥಾಪಿಸಲಾಗಿದೆ. ಇದು ನೋಂದ ಮಹಿಳೆಯರ ಆಪ್ತ ಸಮಾಲೋಚನೆ ನಡೆಸಿ, ತರಬೇತಿ ನೀಡಿ, ಸ್ವಾವಲಂಬಿಯಾಗಿಸಿ ಪುನರ್ವಸತಿ ಕಲ್ಪಿಸುತ್ತಿದೆ. ಹಾಗಾಗಿ, ದೌರ್ಜನ್ಯಕ್ಕೆ ಒಳಗಾಗುವ ಸಂತ್ರಸ್ತೆಯರು ಈ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಯ ಅಧೀಕ್ಷಕ ಡಾ.ನಾಗೇಂದ್ರಪ್ಪ, ಆರ್‌ಸಿಎಚ್ ರೇಣುಕಾರಾಧ್ಯ, ಪೊಲೀಸರು, ವೈದ್ಯರು, ಸಖಿ ಒನ್ ಸ್ಟಾಪ್ ಸೆಂಟರ್‌ನ ಸಿಬ್ಬಂದಿ ಹಾಜರಿದ್ದರು.

Previous articleತಾವರೆಕೆರೆಯಲ್ಲಿ ತಾಲಿಬಾನ್ ಮಾದರಿ ಪ್ರಕರಣ: ಆಯೋಗದಿಂದ ಸುಮೋಟೋ ಕೇಸ್
Next articleಕಾಂಗ್ರೆಸ್​ ಯೋಜನೆಗಳು ಅಜರಾಮರ: ಮತದಾರನೇ ಈಶ್ವರ