ತುಮಕೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ನೆಲಕಚ್ಚುವುದು ನೂರಕ್ಕೆ ನೂರು ಸತ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಕುಣಿಗಲ್‌ನಲ್ಲಿ ಭಾಜಪ ಹಮ್ಮಿಕೊಂಡಿದ್ದ ಜನಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕದಲ್ಲಿ ಅತಿ ಹೆಚ್ಚು ಆಡಳಿತ ಮಾಡಿರುವುದು ಕಾಂಗ್ರೆಸ್ ಸರ್ಕಾರ. ಕೇವಲ ತಮ್ಮ ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ಜನರನ್ನು ದಾರಿತಪ್ಪಿಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ. ಭಾಜಪ ಪರ್ಯಾಯ ಶಕ್ತಿಯಾಗಿ ರೂಪುಗೊಂಡ ಮೇಲೆ ಇಡೀ ಭಾರತದಲ್ಲಿ ಕಾಂಗ್ರೆಸ್ ನೆಲೆಕಳೆದುಕೊಂಡಿದೆ ಎಂದರು.
ಜಾತಿಯ ಆಧಾರದ ಮೇಲೆ ಮತ ಕೇಳುವುದು, ಧರ್ಮವನ್ನು ಒಡೆಯುವ ಕೆಲಸ, ಉಪಜಾತಿಗಳನ್ನು ನಿರ್ಮಿಸುವ ಕೆಲಸ, ಸಾಮಾಜಿಕ ನ್ಯಾಯ, ನಾವು ದೀನದಲಿತರ, ಹಿಂದುಳಿದವರ ಉದ್ಧಾರಕರು ಎಂದು ಹೇಳಿ ಭಾಷಣ ಮಾಡುತ್ತಾರೆ. ನಾವಿಲ್ಲದಿದ್ರೆ ನಿಮಗೆ ರಕ್ಷಣೆ ಇಲ್ಲ ಎನ್ನುತ್ತಾರೆ. ಹಿಂದುಳಿದವರು ಹಿಂದುಳಿದೇ ಇದ್ದಾರೆ. ಆ ಸಮುದಾಯಗಳೆಲ್ಲವೂ ಜಾಗೃತರಾಗಿದ್ದಾರೆ. ಏನು ಮಾಡಿದ್ದೀರಿ ಎಂದು ಪ್ರಶ್ನಿಸುತ್ತಿದ್ದಾರೆ. ಸರ್ಕಾರ ವೆಚ್ಚ ಮಾಡಿರುವ ಅನುದಾನ ನೋಡಿದರೆ, ಅವರ ಬದುಕು ಮೇಲ್ಮಟ್ಟದಲ್ಲಿರಬೇಕಿತ್ತು. ಆರ್ಥಿಕವಾಗಿ, ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮುಂದುವರೆಯಲು ಆಗಲಿಲ್ಲ ಎಂದರು.
2 ಲಕ್ಷ ಕೋಟಿ ಸಾಲ
ರಾಜ್ಯದ ಅಭಿವೃದ್ಧಿ ಕುಂಠಿತವಾಗಿತ್ತು. ಸಿದ್ದರಾಮಯ್ಯ ಆಡಳಿತ ಮಾಡುವಾಗ ಕೋವಿಡ್ ಇರಲಿಲ್ಲ. ಹಣಕಾಸಿನ ಸ್ಥಿತಿ ಗಂಭೀರವಾಗಿತ್ತು. ಆದರೆ 2 ಲಕ್ಷ ಕೋಟಿ ಸಾಲವನ್ನು ಕರ್ನಾಟಕದ ಜನತೆಯ ಮೇಲೆ ಹೇರಿದರು. ಇಷ್ಟು ಸಾಲ ತಂದು ರಾಜ್ಯದ ಅಭಿವೃದ್ಧಿಯಾಗಬೇಕಾಗಿತ್ತು. ಬಿಜೆಪಿ 5 ವರ್ಷಗಳಲ್ಲಿ ಸುಮಾರು 32 ಸಾವಿರ ಕೋಟಿ ಖರ್ಚು ಮಾಡಿ 7 ಲಕ್ಷ ನೀರಾವರಿ ವ್ಯವಸ್ಥೆ ಕಲ್ಪಿಸಿದೆ. ಕಾಂಗ್ರೆಸ್ ಪಕ್ಷ 5 ವರ್ಷಗಳಲ್ಲಿ 54 ಸಾವಿರ ಕೋಟಿ ಖರ್ಚು ಮಾಡಿ ಕೇವಲ 2 ಲಕ್ಷ ಎಕರೆಗೆ ನೀರಾವರಿ ಕಲ್ಪಿಸಿದೆ. ಎಲ್ಲಿ ಹೋಯಿತು ಈ ದುಡ್ಡು. ಯಾರ ಕಿಸೆಗೆ ಹೋಯ್ತು ಈ ದುಡ್ಡು ಎಂದು ಪ್ರಶ್ನಿಸಿದರು.
ಅನ್ನಭಾಗ್ಯದಲ್ಲಿಯೂ ಕನ್ನ
ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ. ಭ್ರಷ್ಟಾಚಾರ ಮುಚ್ಚಿಹಾಕಲು ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿ ಎಸಿಬಿಯನ್ನು ತಂದರು. ಸುಮಾರು 50 ಪ್ರಕರಣಗಳಿಗೂ ಹೆಚ್ಚು ಮುಖ್ಯಮಂತ್ರಿಗಳು ಹಾಗೂ ಅವರ ಮಂತ್ರಿಮಂಡಲದವರ ಮೇಲೆ ಆರೋಪ ಹಾಗೂ ದೂರು ಇತ್ತು. ದಾಖಲೆ ಸಮೇತ ಇರುವ ಎಲ್ಲಾ ದೂರುಗಳ ಮೇಲೆ ಬಿ ವರದಿಯನ್ನು ಸಲ್ಲಿಸಲಾಯಿತು. ಆ ಪ್ರಕರಣಗಳೇ ಸಾಕ್ಷಿ ಇವರ ಭ್ರಷ್ಟಾಚಾರಕ್ಕೆ. ಲೋಕಾಯುಕ್ತ ಮುಚ್ಚಿದ್ದೇ ಸಾಕ್ಷಿ ಎಂದರು. ಸಣ್ಣ ನೀರಾವರಿ ಯೋಜನೆಯಡಿ ಕೊಪ್ಪಳದಲ್ಲಿ ಕೆಲಸ ಮಾಡದೇ ಬಿಲ್ ಪಾವತಿಯಾಗಿದೆ. ಬಿಡಿಎ ಜಮೀನು ಬಿಟ್ಟುಕೊಡುವರೀತಿ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಬಡವರಿಗೆ ನೀಡುವ ದಿಂಬು ಹಾಸಿಗೆಯಲ್ಲೂ ಭ್ರಷ್ಟಾಚಾರ ಮಾಡಿದ್ದಾರೆ. ಈ ರಾಜ್ಯದಲ್ಲಿ ರೇಷನ್ ಕೊಡಲು ಪ್ರಾರಂಭವಾಗಿ 30- 40 ವರ್ಷಗಳ ಹಿಂದೆ ಪ್ರಾರಂಭವಾಯಿತ. ರಾಮಕೃಷ್ಣ ಹೆಗಡೆಯವರು 2 ರೂ.ಗಳಿಗೆ ಅಕ್ಕಿ ನೀಡಿದರು. ನಾವು 30 ಕೆಜಿ ಅಕ್ಕಿಯನ್ನು 3 ರೂ.ಗಳಿಗೆ ನೀಡಿದ್ದೇವೆ ಇವರು ಬಂದು ಅದಕ್ಕೆ 7 ಕೆಜಿಗೆ ನಂತರ 4 ಕೆಜಿಗೆ ಇಳಿಸಿದರು ಚುನಾವಣೆ ಬಂದಾಗ ಪುನ: 7 ಕೆಜಿ ಮಾಡಿದರು. ಈ ರೀತಿ ಜನರನ್ನು ಯಾಮಾರಿಸುತ್ತಾ ಅನ್ನಭಾಗ್ಯದಲ್ಲಿಯೂ ಕನ್ನ ಹಾಕಿದ್ದಾರೆ ಎಂದರು.
ತುಮಕೂರು ಜಿಲ್ಲೆಯಲ್ಲಿ ಭಾಜಪ ಗಾಳಿ
ಹೈದರಾಬಾದ್ ಕರ್ನಾಟಕ, ಮಧ್ಯ ಕರ್ನಾಟಕ, ಮುಂಬೈ ಕರ್ನಾಟಕ ಭಾಗದಲ್ಲಿ ಜನಸಂಕಲ್ಪ ಯಾತ್ರೆಯನ್ನು ಪೂರೈಸಿ ತುಮಕೂರಿಗೆ ಬಂದಿದ್ದೇವೆ. ಹೋದಲ್ಲೆಲ್ಲಾ ಇದೇ ರೀತಿ ಜನಬೆಂಬಲ ಮತ್ತು ಜನರ ಪ್ರೀತಿ ನಿರೀಕ್ಷೆ ಮೀರಿ ದೊರೆಯುತ್ತಿದೆ. ಅದಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಗಳು ಕಾರಣ ಹಾಗೂ ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರ ರೂಪಿಸಿರುವ ಕಾರ್ಯಕ್ರಮಗಳಿಗೆ ಜನ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಭಾಜಪ ಗಾಳಿ ಬೀಸುತ್ತಿದೆ. ಕಳೆದ ಬಾರಿ ನಾವು ಕುಣಿಗಲ್, ತುಮಕೂರು ಗ್ರಾಮಾಂತರ, ಕೊರಟಗೆರೆ, ಮಧುಗಿರಿಗಳಲ್ಲಿ ಅಲ್ಪಮತಗಳ ಅಂತರದಿಂದ ಸೋತಿದ್ದೇವೆ. ಆದರೆ ಈ ಬಾರಿ ಈ ಎಲ್ಲಾ ಕ್ಷೇತ್ರಗಳನ್ನು ಭಾಜಪ ಅಭೂತಪೂರ್ವ ಅಂತರದಿಂದ ಗೆಲ್ಲಲಿದೆ. ಇದನ್ನು ಬರೆದಿಟ್ಟುಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಆರಗ ಜ್ಞಾನೇಂದ್ರ, ಜೆ.ಸಿ. ಮಾಧುಸ್ವಾಮಿ, ಕೆ. ಗೋಪಾಲಯ್ಯ, ಬಿ.ಸಿ. ನಾಗೇಶ್, ಶಾಸಕರಾದ ಜ್ಯೋತಿ ಗಣೇಶ್ , ಡಾ. ರಾಜೇಶ್ ಗೌಡ, ಮಸಾಲೆ ಜಯರಾಮ್, ವಿಧಾನ ಪರಿಷತ್ ಸದಸ್ಯರಾದ ಸಿ.ಪಿ. ಯೋಗೇಶ್ವರ್, ರವಿಕುಮಾರ್, ವೈ.ಎ. ನಾರಾಯಣಸ್ವಾಮಿ, ಕೆ.ಎಸ್. ನವೀನ್, ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವತ್ಥ್ ನಾರಾಯಣ, ಪಿಎಲ್‌ಡಿ ಬ್ಯಾಂಕ್ ರಾಜ್ಯಾಧ್ಯಕ್ಷ ಕೃಷ್ಣಕುಮಾರ್, ಮಾಜಿ ಸಂಸದ ಮುದ್ದ ಹನುಮೇಗೌಡ ಹಾಜರಿದ್ದರು.























