ಎನ್‌ಆರ್‌ಐ ಸೀಟು: ಸುಪ್ರೀಂ ತಾಕೀತು ರಾಷ್ಟ್ರಾದ್ಯಂತ ಅನ್ವಯ

0
19

ವೈದ್ಯಕೀಯ ಕಾಲೇಜುಗಳಲ್ಲಿ ಎನ್‌ಆರ್‌ಐ ಸೀಟುಗಳು ಮನಬಂದಂತೆ ಮಾರಾಟವಾಗುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ತನ್ನ ಚಾಟಿ ಬೀಸಿರುವುದು ಕೇವಲ ಪಂಜಾಬ್‌ಗೆ ಮಾತ್ರ ಅನ್ವಯವಲ್ಲ, ನಮ್ಮ ರಾಜ್ಯದ ಕಾಲೇಜುಗಳಿಗೂ ಎಚ್ಚರಿಕೆಯ ಗಂಟೆ. ರಾಜ್ಯ ಸರ್ಕಾರ ಇದಕ್ಕೆ ಸೂಕ್ತ ಕಾನೂನು ತಿದ್ದುಪಡಿ ತರುವುದು ಸೂಕ್ತ. ಎಲ್ಲ ಕಡೆ ಎನ್‌ಆರ್‌ಐ ಕೋಟಾಗೆ ಅತಿ ಹೆಚ್ಚು ಶಿಕ್ಷಣ ಶುಲ್ಕ ಇದ್ದೇ ಇರುತ್ತದೆ. ಈ ಕೋಟಾ ಸೀಟು ಪಡೆಯಲು ಅನಿವಾಸಿ ಭಾರತೀಯರ ಮಕ್ಕಳು ಮಾತ್ರ ಅರ್ಹರು. ಖಾಸಗಿ ಶಿಕ್ಷಣ ಸಂಸ್ಥೆಗಳು ಈ ಕೋಟಾ ಸೀಟುಗಳನ್ನು ಮಾರಾಟ ಮಾಡುವ ದಂಧೆಗೆ ಇಳಿದಿವೆ. ಪಂಜಾಬ್‌ನಲ್ಲಿ ಅಲ್ಲಿಯ ಸರ್ಕಾರ ಆಗಸ್ಟ್ ೨೦ ರಂದು ಆದೇಶ ಹೊರಡಿಸಿ ಎನ್‌ಆರ್‌ಐ ಕೋಟದಲ್ಲಿ ಅನಿವಾಸಿ ಭಾರತೀಯರ ದೂರದ ನಂಟರೂ ಸೀಟು ಪಡೆದುಕೊಳ್ಳಬಹುದು ಎಂದು ತಿದ್ದುಪಡಿ ತಂದಿತ್ತು. ಇದು ದುರುಪಯೋಗಕ್ಕೆ ಕಾರಣವಾಗಿತ್ತು. ಇದರ ವಿರುದ್ಧ ಪೋಷಕರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಹೈಕೋರ್ಟ್ ಆದೇಶವನ್ನು ರದ್ದುಪಡಿಸಿತು. ಅದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ಅಲ್ಲೂ ತೀರ್ಪು ಸರ್ಕಾರದ ವಿರುದ್ಧವಾಗಿದೆ. ಸುಪ್ರೀಂ ಕೋರ್ಟ್ ಆದೇಶವಾಗಿರುವುದರಿಂದ ಹಿಮಾಚಲ ಪ್ರದೇಶ, ಉತ್ತರ ಪ್ರದೇಶಕ್ಕೂ ಅನ್ವಯವಾಗುತ್ತದೆ. ಅದೇರೀತಿ ಕರ್ನಾಟಕಕ್ಕೂ ಇದು ಅನ್ವಯ ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ.
ಕರ್ನಾಟಕ, ತಮಿಳುನಾಡು ಮತ್ತು ಮಹಾರಾಷ್ಟçದಲ್ಲೇ ಅತಿ ಹೆಚ್ಚು ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿವೆ. ಪಂಜಾಬ್‌ನಲ್ಲಿ ಎನ್‌ಆರ್‌ಐ ಕೋಟಾಗೆ ಶಿಕ್ಷಣ ಶುಲ್ಕ ೫೦ ಲಕ್ಷ ರೂ. ಇದೆ. ಸಾಮಾನ್ಯವಾಗಿ ಇದನ್ನು ಡಾಲರ್ ಮೂಲಕ ಪಾವತಿಸುತ್ತಾರೆ. ಅಲ್ಲಿ ಒಟ್ಟು ೧೭೭ ಸೀಟುಗಳಿವೆ. ಹಿಮಾಚಲ ಪ್ರದೇಶದಲ್ಲಿ ೪೩ ಸೀಟುಗಳಿದ್ದು ೧೬.೬೫ ಲಕ್ಷ ರೂ. ಇದೆ. ಕರ್ನಾಟಕದಲ್ಲಿ ಶೇ.೧೫ ರಷ್ಟು ಸೀಟು ಎನ್‌ಆರ್‌ಐಗೆ ಮೀಸಲು. ಇದರ ಶುಲ್ಕ ೨೫.೧೨ ಲಕ್ಷರೂಗಳಿಂದ ೪೫.೧೨ ಲಕ್ಷ ರೂವರೆಗೆ ಇದೆ. ಈ ಸೀಟುಗಳನ್ನು ಮಾರಾಟ ಮಾಡುವ ಮೂಲಕ ಶಿಕ್ಷಣ ಸಂಸ್ಥೆಗಳು ಹಣ ಮಾಡುತ್ತಿವೆ. ಹೆಸರಿಗೆ ಮಾತ್ರ ಎನ್‌ಆರ್‌ಐ ಸೀಟು. ಅದು ಅವರಿಗೆ ಹೋಗುತ್ತದೆ ಎಂದು ಹೇಳಲು ಬರುವುದಿಲ್ಲ. ಎಲ್ಲ ರಾಜ್ಯಗಳಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳು ಪ್ರಬಲ ರಾಜಕಾರಣಿಗಳ ಕೈಯಲ್ಲಿರುವುದರಿಂದ ನಿಯಮಗಳು ಕಾಗದದಲ್ಲೇ ಉಳಿಯುವುದು ಸಹಜ. ಸಿಇಟಿ ಮೂಲಕ ಸೀಟು ಪಡೆದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವುದು ಅನಿವಾರ್ಯ. ಅದರಲ್ಲೂ ಎನ್‌ಆರ್‌ಐ ವಿದ್ಯಾರ್ಥಿಗಳು ಎಲ್ಲದ್ದಕ್ಕೂ ಅತಿ ಹೆಚ್ಚು ಹಣ ನೀಡುವ ಪರಿಸ್ಥಿತಿ ಬಂದಿದೆ. ಕರ್ನಾಟಕದಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ವೈದ್ಯಕೀಯ ಸೀಟುಗಳು ಮತ್ತು ಶಿಕ್ಷಣ ಶುಲ್ಕ ನಿಯಂತ್ರಿಸಲು ಪ್ರತ್ಯೇಕ ಸಮಿತಿಗಳು ಇವೆ. ಇವುಗಳ ತೀರ್ಮಾನಗಳಿಗೆ ಬಿಡಿಗಾಸು ಬೆಲೆ ಇಲ್ಲ. ರಾಜ್ಯ ಸರ್ಕಾರ ಈ ಸಮಿತಿಗಳನ್ನು ರಚಿಸಿ ಅವುಗಳ ಶಿಫಾರಸುಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ.
ಕರ್ನಾಟಕದಲ್ಲಿ ಒಟ್ಟು ೧೦೯೯೫ ಎಂಬಿಬಿಎಸ್, ೫೨೬೭ ಪಿಜಿ ಸೀಟುಗಳಿವೆ. ಒಟ್ಟು ೨೧೪ ಕಾಲೇಜುಗಳಿದ್ದು ಇದರಲ್ಲಿ ೧೭೨ ಖಾಸಗಿ ೩೮ ಸರ್ಕಾರಿ ಕಾಲೇಜುಗಳಿವೆ. ಪ್ರತಿ ಕಾಲೇಜಿಗೂ ಒಂದು ಆಸ್ಪತ್ರೆ ಇರಲೇಬೇಕು ಎಂಬ ನಿಯಮವಿದೆ. ಆದರೂ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದ್ದೇ ಇದೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಬಹುತೇಕ ಹೊರ ರಾಜ್ಯಗಳ ವಿದ್ಯಾರ್ಥಿಗಳ ಪ್ರವೇಶ ಪಡೆಯುತ್ತಿದ್ದಾರೆ. ಅದರಲ್ಲಿ ಎನ್‌ಆರ್‌ಐ ಕೋಟಾದವರೂ ಇದ್ದಾರೆ. ಅವರು ಇಲ್ಲಿ ಕಡ್ಡಾಯ ಸೇವೆ ಎಂಬ ನಿಯಮ ಇದ್ದರೂ ಅದನ್ನು ಪಾಲಿಸುವುದಿಲ್ಲ. ಹೀಗಾಗಿ ಎನ್‌ಆರ್‌ಐನಿಂದ ಹಿಡಿದು ಬಹುತೇಕ ಆಡಳಿತ ವರ್ಗದ ಸೀಟು ಪಡೆದವರು ಹಳ್ಳಿಗಳಲ್ಲಿ ಸೇವೆ ಸಲ್ಲಿಸುವುದೇ ಇಲ್ಲ. ಹೀಗಾಗಿ ಎನ್‌ಆರ್‌ಐ ಕೋಟದಲ್ಲಿ ಬೇರೆಯವರು ಸೀಟು ಪಡೆಯುವುದಕ್ಕೆ ಸುಪ್ರೀಂ ಆದೇಶ ಅಡ್ಡಿಯಾಗಲಿದೆ.
ವೈದ್ಯಕೀಯ ಕಾಲೇಜುಗಳ ಸಂಖ್ಯೆ ಹೆಚ್ಚಿಸಿದ ಮೂಲ ಉದ್ದೇಶವೇ ಗ್ರಾಮೀಣ ಜನರಿಗೆ ಉತ್ತಮ ವೈದ್ಯಕೀಯ ಸೇವೆ ಸಿಗಲಿ ಎಂಬುದಾಗಿತ್ತು. ಆದರೆ ಆ ಉದ್ದೇಶ ಈಡೇರುತ್ತಿಲ್ಲ. ಇದಕ್ಕೆ ನ್ಯಾಯಾಲಯವೇ ತನ್ನ ಚಾಟಿಯನ್ನು ಮತ್ತೊಮ್ಮೆ ಬೀಸುವ ಅಗತ್ಯವಿದೆ. ನ್ಯಾಯಾಲಯದ ಆದೇಶದಿಂದ ಶಿಕ್ಷಣ ಶುಲ್ಕಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿದೆ. ಅಲ್ಲದೆ ಬಡವರಲ್ಲಿ ಪ್ರತಿಭಾವಂತರೂ ವೈದ್ಯಕೀಯ ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ಅದರೊಂದಿಗೆ ಗ್ರಾಮೀಣ ಸೇವೆಯನ್ನೂ ಪರಿಣಾಮಕಾರಿಯಾಗಿ ಜಾರಿಗೆ ತರುವ ಅಗತ್ಯವಿದೆ. ಎನ್‌ಆರ್‌ಐ ಕೋಟ ನಮ್ಮವರ ಮಕ್ಕಳಿಗೇ ಮೀಸಲಾಗಬೇಕು. ಅದರಲ್ಲಿ ಸಾಮಾಜಿಕ ಹೊಣೆಗಾರಿಕೆಯೂ ಇದೆ. ಕರ್ನಾಟಕ ವೈದ್ಯಕೀಯ ಶಿಕ್ಷಣ ನೀಡುವುದರಲ್ಲಿ ಎಲ್ಲ ರೀತಿಯಲ್ಲಿ ಮಾದರಿಯಾಗಬೇಕು. ಶಿಕ್ಷಣದಲ್ಲಿ ಸಮಾನ ಅವಕಾಶ ಸಂವಿಧಾನದ ಹಕ್ಕು ಎಂಬುದನ್ನು ಮರೆಯಬಾರದು.

Previous articleಮಹತ್ವದ ಸಚಿವ ಸಂಪುಟ ಸಭೆ ಇಂದು
Next articleಕಮಲೇಶ್ವರ ನಾಟ್ಯ ಸಂಘದ ವತಿಯಿಂದ ಮತ್ತೊಮ್ಮೆ ಆಪರೇಷನ್