ಎಚ್‌ಎಸ್‌ಆರ್‌ಪಿ ಪ್ಲೇಟ್: ಗಡುವು ವಿಸ್ತರಣೆ ಇಲ್ಲ

0
8

ಬೆಂಗಳೂರು: ವಾಹನಗಳಿಗೆ ಹೈಸೆಕ್ಯುರಿಟಿ ನಂಬರ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಅಳವಡಿಕೆಗೆ ನೀಡಲಾಗಿರುವ ಗಡುವನ್ನು ಮತ್ತೆ ವಿಸ್ತರಣೆ ಮಾಡುವ ಅವಕಾಶ ಇಲ್ಲ ಎಂದು ಸಾರಿಗೆ ಇಲಾಖೆ ತಿಳಿಸಿದೆ.
ಕಳೆದ ವರ್ಷ ನವೆಂಬರ್ ಮತ್ತು ಈ ಫೆಬ್ರವರಿಯಲ್ಲಿ ಎಚ್‌ಎಸ್‌ಆರ್‌ಪಿ ಪ್ಲೇಟ್ ಅಳವಡಿಕೆಗೆ ಎರಡು ಬಾರಿ ಗಡುವನ್ನು ವಿಸ್ತರಿಸಿದ್ದು ಇನ್ನು ಮುಂದೆ ಅದನ್ನು ವಿಸ್ತರಿಸಲು ಚಿಂತನೆ ನಡೆಸಿಲ್ಲ ಎಂದು ವರದಿಯಾಗಿದೆ.
ಮೇ ೩೧ರ ಮೊದಲು ಎಚ್‌ಎಸ್‌ಆರ್‌ಪಿ ಅಳವಡಿಸಲು ಇಲಾಖೆ ಆದೇಶ ನೀಡಿದ್ದು, ನಂತರವೂ ಅಳವಡಿಸದವರಿಗೆ ದಂಡ ವಿಧಿಸಲಿದೆ. ೨೦೧೯ರ ಏಪ್ರಿಲ್ ೧ಕ್ಕಿಂತ ಮೊದಲು ನೋಂದಣಿಯಾಗಿರುವ ಎಲ್ಲಾ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸುವುದನ್ನು ಕಡ್ಡಾಯಗೊಳಿಸಿ ಸಾರಿಗೆ ಇಲಾಖೆ ಕಳೆದ ವರ್ಷ ಆಗಸ್ಟ್‌ನಲ್ಲಿ ಅಧಿಸೂಚನೆ ಹೊರಡಿಸಿತ್ತು.
ಈವರೆಗೆ ರಾಜ್ಯದಲ್ಲಿ ಕೇವಲ ೩೪ ಲಕ್ಷ ಎಚ್‌ಎಸ್‌ಆರ್‌ಪಿ ನೋಂದಾಯಿಸಲಾಗಿದೆ. ಗಡುವನ್ನು ಎರಡು ಬಾರಿ ವಿಸ್ತರಿಸಿದ್ದರೂ ಸಹ ಕಡಿಮೆ ಪ್ರಮಾಣದಲ್ಲಿ ಎಚ್‌ಎಸ್‌ಆರ್‌ಪಿ ಅಳವಡಿಸಲಾಗಿದೆ. ಫೆಬ್ರವರಿ ವೇಳೆಗೆ ಸುಮಾರು ೧೮ ಲಕ್ಷ ನೊಂದಣಿಯಾಗಿದ್ದರೆ ಏಪ್ರಿಲ್ ವೇಳೆಗೆ ಈ ಸಂಖ್ಯೆ ದುಪ್ಪಟ್ಟಾಗಿದೆ. ಆದರೆ, ಇನ್ನೂ ಹೆಚ್ಚಿನ ಸಂಖ್ಯೆಯ ವಾಹನಗಳು ಎಚ್‌ಎಸ್‌ಆರ್‌ಪಿ ನೋಂದಣಿ ಮಾಡಿಕೊಳ್ಳಬೇಕಾಗಿದೆ ಎಂದು ಸಾರಿಗೆ ಹೆಚ್ಚುವರಿ ಆಯುಕ್ತ ಸಿ. ಮಲ್ಲಿಕಾರ್ಜುನ ತಿಳಿಸಿದ್ದಾರೆ.
ನೀಡಿರುವ ಗಡುವಿನಂತೆ ಮೇ ೩೧ ರವರೆಗೆ ಕಾಯಲಾಗುವುದು. ಎಚ್‌ಎಸ್‌ಆರ್‌ಪಿ ನೋಂದಣಿ ೭೫ ಲಕ್ಷ ದಾಟುವ ನಿರೀಕ್ಷೆಯಿದೆ. ಅದರ ನಂತರ ಗಡುವು ವಿಸ್ತರಿಸಬೇಕೇ ಎಂಬುದನ್ನು ನಾವು ಆಮೇಲೆ ಪರಿಗಣಿಸುತ್ತೇವೆ. ಸದ್ಯ ಜನರು ನಂಬರ್ ಪ್ಲೇಟ್ ಅಳವಡಿಕೆಗೆ ಮುಗಿಬೀಳುತ್ತಿದ್ದಾರೆ ಎಂಬುದು ಈಗಿನ ಅಂಕಿ ಸಂಖ್ಯೆಗಳಿಂದ ತಿಳಿದುಬಂದಿದೆ. ಹೀಗಾಗಿ ಇನ್ನೂ ಸ್ವಲ್ಪ ಸಮಯ ನೀಡಿದರೆ ಎಲ್ಲರೂ ಅದನ್ನು ಪೂರ್ಣಗೊಳಿಸಬಹುದು ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ಈ ಬಗ್ಗೆ ಇನ್ನೂ ಯಾವುದೇ ಚಿಂತನೆ ನಡೆಸಿಲ್ಲ. ಮತ್ತೆ ಅವಧಿ ವಿಸ್ತರಿಸದಂತೆ ಸರ್ಕಾರಕ್ಕೆ ಕೋರಲಾಗುವುದು ಎಂದು ಹೇಳಿದ್ದಾರೆ.

Previous articleಕ್ಷಮೆ ಜಾಹೀರಾತಿನಷ್ಟೇ ದೊಡ್ಡದಾಗಿ ಇರಬೇಕು
Next articleಪಿಕ್ ಪಾಕೆಟ್, ಚೊಂಬು, ಚಿಪ್ಪು ಇತ್ಯಾದಿ…