ಉಗ್ರರ ದಾಳಿ ಸಮರ್ಥಿಸುವವರು ಮನುಷ್ಯರೇ ಅಲ್ಲ

ಚಿಕ್ಕಮಗಳೂರು: ಕಾಶ್ಮೀರದ ಪಹಲ್ಗಾಮ್ ಉಗ್ರ ದಾಳಿಯಲ್ಲಿ ಮೃತಪಟ್ಟಿರುವ 26 ಜನರ ಕುಟುಂಬಗಳಿಗೆ ಶೃಂಗೇರಿ ಮಠದಿಂದ ತಲಾ ಎರಡು ಲಕ್ಷ ರೂ. ಪರಿಹಾರ ನೀಡುವುದಾಗಿ ಶೃಂಗೇರಿ ಶಾರದಾ ಪೀಠದ ಕಿರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಘೋಷಣೆ ಮಾಡಿದ್ದಾರೆ.
ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಶೃಂಗೇರಿ ಮಠದ ಕಿರಿಯ ಶ್ರೀಗಳು, ಉಗ್ರರ ದಾಳಿಯಲ್ಲಿ ಮೃತರಾದ 26 ಜನರಿಗೆ ಸಂತಾಪ ಸೂಚಿಸುತ್ತೇವೆ. ಜೊತೆಗೆ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಶಾರದಾ ತಾಯಿಯ ಪ್ರಸಾದದಂತೆ ನೀಡಲು ನಿರ್ಧಾರ ಮಾಡಿದ್ದೇವೆ. ಇದರಿಂದ ಅವರ ಜೀವನದಲ್ಲಿ ಹೊಸ ಜೀವನ ಆರಂಭವಾಗಲಿ ಎಂದು ಬಯಸುತ್ತೇವೆ ಎಂದು ತಿಳಿಸಿದ್ದಾರೆ.
ಪಹಲ್ಗಾಮ್ ಘಟನೆಯನ್ನು ಎಲ್ಲರೂ ಖಂಡಿಸಬೇಕು. ಹಿಂದುಗಳನ್ನು ಗುರುತಿಸಿ ಉಗ್ರರು ಹತ್ಯೆ ಮಾಡಿದ್ದಾರೆ. ಈ ಘಟನೆ ತುಂಬಾ ದುಃಖದ ವಿಚಾರ. ಇಂಥ ಘಟನೆಯನ್ನು ಇಡೀ ವಿಶ್ವದಲ್ಲಿ ಯಾರೂ ಸಮರ್ಥನೆ ಮಾಡಿಕೊಳ್ಳುವುದಿಲ್ಲ. ಒಂದು ವೇಳೆ ಇಂತಹ ಘಟನೆಯನ್ನು ಸಮರ್ಥನೆ ಮಾಡುವವರು ಮನುಷ್ಯರೇ ಅಲ್ಲ ಎಂದು ಹೇಳಿದ್ದಾರೆ.
ಅಕ್ಷಯ ತೃತೀಯ ದಿನದಂದು ಯಾವುದೇ ಕಾರ್ಯ ಆರಂಭಿಸಿದರೂ ಎಲ್ಲವೂ ಸಿದ್ಧಿಯಾಗುತ್ತದೆ ಎಂಬ ವಿಶ್ವಾಸ ಹಿಂದಿನಿಂದಲೂ ಇದೆ. ಹೀಗಾಗಿ ರಾಷ್ಟ್ರ ರಕ್ಷಣೆ ಕಾರ್ಯವನ್ನು ಆರಂಭಿಸಲಿ ಎಂದು ಸಲಹೆ ನೀಡಿದ್ದಾರೆ.
ಪಹಲ್ಗಾಮ್ ಉಗ್ರ ದಾಳಿಯನ್ನು ಮುಂದಿಟ್ಟುಕೊಂಡು ಯಾರೂ ರಾಜಕೀಯ ಮಾಡಬಾರದು. ಇದು ರಾಜಕೀಯ ಮಾಡುವ ಸಮಯವೂ ಅಲ್ಲ ಎಂದು ಶೃಂಗೇರಿ ಕಿರಿಯ ಶ್ರೀಗಳು ತಿಳಿ ಹೇಳಿದ್ದಾರೆ.