ಇಸ್ರೇಲ್‌ ಮೂಲದ ಖ್ಯಾತ ಡಿಜೆ ಸಜಂಕಾ ಕಾರ್ಯಕ್ರಮ ರದ್ದು

0
27

ಮಂಗಳೂರು: ಮಂಗಳೂರಿನಲ್ಲಿ ಹಿಂದೂ ಸಂಘಟನೆಗಳ ವಿರೋಧ ಹಿನ್ನೆಲೆಯಲ್ಲಿ ಪ್ರಖ್ಯಾತ ಸಂಗೀತಗಾರನ ಡಿಜೆ ಕಾರ್ಯಕ್ರಮವನ್ನು ಕೊನೆಕ್ಷಣದಲ್ಲಿ ರದ್ದುಗೊಳಿಸಿದ ಘಟನೆ ನಡೆದಿದೆ.
ಮಂಗಳೂರು ಪೊಲೀಸ್ ಇಲಾಖೆ ಅನುಮತಿ ನಿರಾಕರಣೆ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ನಡೆಯಬೇಕಾಗಿದ್ದ ಇಸ್ರೇಲ್‌ ಮೂಲದ ಸಜಂಕಾ ಸಂಗೀತಗಾರನ ಡಿಜೆ ಕಾರ್ಯಕ್ರಮ ರದ್ದುಗೊಂಡಿದೆ.
ಮಂಗಳೂರಿನ ಬೋಳಾರದ ಸಿಟಿ ಬೀಚ್‌ನಲ್ಲಿ ಶುಕ್ರವಾರ ಸಜಂಕಾ ಡಿಜೆ ಕಾರ್ಯಕ್ರಮ ಏರ್ಪಾಡಾಗಿತ್ತು. ಡಿಜೆ ಕುಣಿತದಲ್ಲಿ ಹಿಂದೂ ದೇವರ ಅವಹೇಳನ ಮಾಡುತ್ತಾರೆ ಎಂದು ಹಿಂದು ಸಂಘಟನೆಗಳು ಆಕ್ಷೇಪವೆತ್ತಿದ್ದವು. ಕಾರ್ಯಕ್ರಮವನ್ನು ತಡೆಯುವುದಾಗಿ ಬಜರಂಗದಳ, ಹಿಂದೂ ಜಾಗರಣಾ ವೇದಿಕೆ ಸಂಘಟನೆಗಳು ಎಚ್ಚರಿಕೆ ನೀಡಿದ್ದವು. ಅಲ್ಲದೆ ಮಂಗಳೂರು ಪೊಲೀಸರಿಗೂ ಕಾರ್ಯಕ್ರಮಕ್ಕೆ ಅನುಮತಿ ನೀಡದಂತೆ ಮನವಿ ಮಾಡಿದ್ದವು.
ಈ ಕಾರ್ಯಕ್ರಮ ಪಾಶ್ಚಾತ್ಯ ಸಂಸ್ಕೃತಿಯಿಂದ ಕೂಡಿದೆ. ಕಾರ್ಯಕ್ರಮದಲ್ಲಿ ಭಾರೀ ಪ್ರಮಾಣದ ಡ್ರಗ್ ಪೂರೈಕೆ ಬಗ್ಗೆ ಬಜರಂಗದಳ ಅನುಮಾನ ವ್ಯಕ್ತಪಡಿಸಿತ್ತು. ಅಶ್ಲೀಲವಾಗಿ ಕುಣಿಯುವ ಡಿಜೆ ಪಾರ್ಟಿಯಲ್ಲಿ ಸಜಂಕಾ ಹಿಂದು ದೇವರ ಅವಹೇಳನ ಮಾಡುತ್ತಾನೆ ಎಂದು ಆರೋಪಿಸಿತ್ತು. ಮೃತ್ಯುಂಜಯ ಮಹಾಮಂತ್ರ, ರಾಮತಾರಕ ಮಂತ್ರ, ವಿಷ್ಣು ಸಹಸ್ರನಾಮ, ಗಾಯತ್ರಿ ಮಂತ್ರ, ದುರ್ಗಾ ಸಪ್ತತಿ ಮಂತ್ರ ಸೇರಿದಂತೆ ಶ್ಲೋಕ, ಮಂತ್ರಗಳನ್ನು ಮತ್ತು ದೇವರ ಹಾಡುಗಳನ್ನು ಆತ ವಿಚಿತ್ರವಾಗಿ ವಿಡಂಬನೆ ಮಾಡುತ್ತಾನೆ. ಡಿಜೆ ಮೂಲಕ ಹಾಡುಗಳನ್ನು ಹಾಕಿ ಧರ್ಮ ವಿರೋಧಿ ಕೃತ್ಯ, ಧರ್ಮ ನಿಂದನೆ ನಡೆಸುತ್ತಾನೆ ಎಂದು ಹಿಂದು ಸಂಘಟನೆಗಳು ಆರೋಪಿಸಿದ್ದವು.
ಈತನ ಮಂಗಳೂರಿನ ಸಜಂಕಾ ಲೈವ್ ಕಾರ್ಯಕ್ರಮದ ಟಿಕೆಟ್ ಸೋಲ್ಡ್ ಔಟ್ ಆಗಿತ್ತು. ಕಾರ್ಯಕ್ರಮದ ಬಹುತೇಕ ಸಿದ್ಧತೆಗಳು ಪೂರ್ಣಗೊಂಡಿದ್ದವು. ಸಜಂಕಾ ಕೂಡ ಮಂಗಳೂರಿಗೆ ಆಗಮಿಸಿದ್ದರು. ಆದರೆ ಸಂಜೆ ವೇಳೆ ಹಿಂದು ಸಂಘಟನೆಗಳ ಪ್ರತಿಭಟನೆ ಎಚ್ಚರಿಕೆ ಹಿನ್ನೆಲೆ ಕಾರ್ಯಕ್ರಮವನ್ನು ರದ್ದುಗೊಳಿಸಿರುವುದಾಗಿ ನಗರ ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್‌ವಾಲ್‌ ತಿಳಿಸಿದ್ದಾರೆ.

Previous articleಸರ್ಕಾರಿ ನೌಕರರ ಸಂಘಕ್ಕೆ ಅಧ್ಯಕ್ಷರಾಗಿ ಷಡಾಕ್ಷರಿ ಪುನರಾಯ್ಕೆ
Next articleಅಮೆಚೂರ್‌ ಕಬಡ್ಡಿ ಅಸೋಸಿಯೇಶನ್‌ ಆಡಳಿತಾಧಿಕಾರಿ ನೇಮಕಕ್ಕೆ ಒತ್ತಾಯ