ಇಡೀ ಭಾರತವೇ ನನ್ನ ಕುಟುಂಬ

0
15

ನವದೆಹಲಿ: ಬಿಹಾರದ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಅವರ ಕುಟುಂಬ ರಾಜಕೀಯ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾಡಿರುವ ವಾಗ್ದಾಳಿ ಹೊಸ ರಾಜಕೀಯ ಬೆಳವಣಿಗೆಗೆ ಕಾರಣವಾಗಿದೆ. ಪ್ರಧಾನಿ ಮೋದಿಗೆ ಅವರದೇ ಆದ ಕುಟುಂಬ ಇಲ್ಲದಿರುವುದರಿಂದ ನಾವೇನು ಮಾಡಲು ಸಾಧ್ಯ'ಎಂದು ಲಾಲೂ ಪ್ರಸಾದ್ ಪ್ರಶ್ನಿಸುವ ಮೂಲಕ ಹೊಸ ವಿವಾದ ಹುಟ್ಟಿಹಾಕಿದ್ದಾರೆ. ಹೀಗಾಗಿ ಇಡೀ ಭಾರತವೇ ನನ್ನ ಕುಟುಂಬ ಎಂದು ಪ್ರಧಾನಿ ಮೋದಿಯವರು ಲಾಲೂಗೆ ತಿರುಗೇಟು ನೀಡಿದ್ದಾರೆ. ಇದೇ ವೇಳೆ ಬಿಜೆಪಿ ನಾಯಕರು ತಮ್ಮ ಸಾಮಾಜಿಕ ಜಾಲತಾಣದ ಬಯೋಸ್‌ನಲ್ಲಿ ಮೋದಿ ಕಾ ಪರಿವಾರ್ ಎಂದು ಸೇರಿಸಿಕೊಂಡಿದ್ದಾರೆ.
೧೪೦ ಕೋಟಿ ಜನರು ನನ್ನ ಕುಟುಂಬ
ತೆಲಂಗಾಣದಲ್ಲಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ,ಈ ದೇಶದ ೧೪೦ ಕೋಟಿ ಜನರು ನನ್ನ ಕುಟುಂಬ. ನನ್ನ ದೇಶವೇ ನನ್ನ ಕುಟುಂಬ’ ಎಂದು ಹೇಳಿಕೊಂಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ ಮತ್ತು ಬಿಜೆಪಿಯ ಇತರ ಸಚಿವರು ಹಾಗೂ ನಾಯಕರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮೋದಿ ಕಾ ಪರಿವಾರ್ ಎಂದು ಸೇರಿಸಿಕೊಳ್ಳುವ ಮೂಲಕ ಪ್ರಧಾನಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಂಪೂರ್ಣ ದೇಶವೇ ಮೋದಿಯ ಕುಟುಂಬ ಎಂದು ಬಿಜೆಪಿ ನಾಯಕರೂ ಲಾಲೂ ಪ್ರಸಾದ್ ಮೇಲೆ ವಾಗ್ದಾಳಿ ಮಾಡಿದ್ದಾರೆ.
ಮೋದಿ ಪಾಲಿಗೆ ಸೈನಿಕರೇ ಕುಟುಂಬ
`ಪ್ರಧಾನಿ ನರೇಂದ್ರ ಮೋದಿ ಪಾಲಿಗೆ ಇಡೀ ದೇಶವೇ ಅವರ ಕುಟುಂಬ. ನರೇಂದ್ರ ಮೋದಿ ಪ್ರಧಾನಿಯಾದಂದಿನಿಂದ ಗಡಿಯಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸುತ್ತಿದ್ದಾರೆ. ಈ ಸೈನಿಕರೇ ಅವರ ಕುಟುಂಬ. ದೇಶಕ್ಕಾಗಿ ತಮ್ಮನ್ನು ಸಮರ್ಪಿಸಿಕೊಳ್ಳಲು ಅವರು ತಮ್ಮ ಕುಟುಂಬ ತೊರೆದ ಕ್ಷಣದಲ್ಲಿ ಇಡೀ ದೇಶವೇ ತಮ್ಮ ಕುಟುಂಬ ಎಂದು ಪ್ರತಿಜ್ಞೆ ಮಾಡಿಕೊಂಡಿದ್ದರು’ ಎಂದು ಬಿಜೆಪಿ ಸಂಸದ ಸುಧಾಂಶು ತ್ರಿವೇದಿ ಹೇಳಿದ್ದಾರೆ.

Previous articleದೇಗುಲಗಳಲ್ಲಿ ಭಕ್ತರಿಗೆ ಸೌಲಭ್ಯ ಕಲ್ಪಿಸಲು ಆದೇಶ
Next articleಪಾಳು ಬಿದ್ದ ಬಹುವೆಚ್ಚದ ಪ್ರವಾಸಿ ಮಂದಿರ..