ಆಸೆ, ಮೋಹಕ್ಕೆ ಮಿತಿ ಇರಲಿ, ಸಂಬಂಧ ಸ್ನೇಹ ತರಲಿ

0
9

ನಿಂತಾಗ, ಕುಳಿತಾಗ, ಪ್ರಯಾಣ ಮಾಡುವಾಗ ತಿನ್ನುತ್ತಲೇ ಇರುತ್ತಾರೆ. ಮಿತಿಮೀರಿ ತಿನ್ನುತ್ತಾರೆ. ಸಿಕ್ಕಿದ್ದರಲ್ಲಾ ತಿನ್ನುತ್ತಾರೆ. ಸಿಕ್ಕಿದ್ದನ್ನೆಲ್ಲಾ ತಿನ್ನುತ್ತಾರೆ. ಆದರೆ, ಮಿತಿಮೀರಿ ತಿನ್ನುವುದರಿಂದ ರೋಗಗಳು ಬರುತ್ತದೆ ಆಯುಷ್ಯ ಕಡಿಮೆಯಾಗುತ್ತದೆ. ಸುಖವು ನಾಶವಾಗುತ್ತದೆ. ಪಾಪವೂ ಬರುತ್ತದೆ. ಜನರೂ ಕೂಡ ತಿಂಡಿಪೋತನೆಂದು ಬೈಯುತ್ತಾರೆ. ಆದ್ದರಿಂದ ತುಂಬಾ ತಿನ್ನಬೇಡ ಎನ್ನುತ್ತದೆ ಮುನುಸ್ಮೃತಿ. ಭಾರತೀಯ ವೈದ್ಯಪದ್ಧತಿಯಾದ ಆಯುರ್ವೇದವೂ ಕೂಡ ಹಿತ ಭುಕ್ ಮಿತ ಭುಕ್ ಎನ್ನುತ್ತದೆ. ಅಂದರೆ ಹಿತವಾಗಿ ತಿನ್ನು ಮಿತವಾಗಿ ತಿನ್ನು ಎಂದು. ಹಿತವಾಗಿ ತಿನ್ನುವದು ಎಂದರೆ ದೇಹಾರೋಗ್ಯಕ್ಕೆ ಹಿತಕರವಾಗುವದನ್ನು ತಿನ್ನುವದು ಎಂದು ಅರ್ಥ. ಹೀಗೆ ಆಹಾರ ಸೇವನೆಯಲ್ಲಿ ಶಿಸ್ತು ತಂದುಕೊಂಡಾಗ ಆರೋಗ್ಯದಲ್ಲಿರಬಹುದು.
ವಿಶ್ವ ಕುಟುಂಬಿಯಾಗು: ನನ್ನ ಮನೆ, ನನ್ನ ಸಂಸಾರ, ನನ್ನ ಸ್ನೇಹಿತ ವರ್ಗ ಹೀಗೆ ಭಾವಿಸುವವರು ಸಣ್ಣ ಮನಸ್ಸಿನವರು. ಇಂಥ ಮನಸ್ಸನ್ನು ಪರಿತ್ಯಾಗ ಮಾಡಬೇಕು. ಎಲ್ಲರನ್ನೂ ಪ್ರೀತಿಸಬೇಕು. ಉದಾರ ಭಾವನೆಯನ್ನು ಹೊಂದಬೇಕು. ಅಂಥ ಉದಾರ ಮನಸ್ಸಿನ ವ್ಯಕ್ತಿಗೆ ಈ ಭೂಮಂಡಲವೇ ತನ್ನ ಕುಟುಂಬವಾಗುತ್ತದೆ. ಇಂದಿನ ದಿನಗಳಲ್ಲಿ ಸಂಕುಚಿತ ಭಾವನೆಗಳಿಂದ ನಾವೆಲ್ಲ. ಸಹಜೀವನವನ್ನೇ ಮರೆಯುತ್ತಿದ್ದೇವೆ. ಯಾರೇ ಇರಲಿ. ಅವರೊಂದಿಗೆ ಸಸ್ನೇಹದಿಂದ ಬದುಕಿದಾಗ ಬದುಕೇ ಸುಂದರಗೊಳ್ಳುವದು.
ಪ್ರತಿಯೊಬ್ಬರು ಆಸೆಯ ಹಿಂದೆ ಬೀಳಬಾರದು: ಆಸೆಯೆಂಬ ಪಿಶಾಚಿ ಹಿಡಿದವನು. ಯಾರೆಂದರೆ ಅವರ ಮುಂದೆ ನಮಸ್ಕರಿಸುತ್ತಾನೆ, ನಿಂದಿಸುತ್ತಾನೆ. ಸ್ತುತಿಸುತ್ತಾನೆ, ಅಳುತ್ತಾನೆ ಮತ್ತು ನಗುತ್ತಾನೆ. ಆಸೆಗೆ ಯಾರು ದಾಸರೋ ಅವರು ಸಕಲ ಲೋಕಕ್ಕೂ ದಾಸರೇ. ಯಾರಿಗೆ ಆಸೆಯೇ ದಾಸಿಯಾಗಿರುತ್ತದೆಯೋ ಅವರಿಗೆ ಲೋಕವೇ ದಾಸವಾಗುತ್ತದೆ.
ಆಶೆಯೆಂಬ ನದಿಯಲ್ಲಿ ಬಯಕೆ ಎಂಬ ನೀರೂ, ದುರಾಸೆಯೆಂಬ ಅಲೆಗಳೂ, ಕಾಮವೆಂಬ ಮೊಸಳೆಗಳೂ, ಶಂಕೆಯೆಂಬ ಹಕ್ಕಿಗಳೂ ಇವೆ. ಧೈರ್ಯವೆಂಬ ಮರವನ್ನು ಉರುಳಿಸುತ್ತದೆ. ಮೋಹವೆಂಬ ಸುಳಿಯಿಂದ ದಾಟುವುದೇ ಕಷ್ಟವಾಗಿದೆ. ಚಿಂತೆಯೆಂಬ ಕಡಿದಾದ ದಡದಿಂದ ತುಂಬಾ ಅಪಾಯಕರವಾಗಿದೆ. ಯೋಗಿಗಳಲ್ಲಿ ಶ್ರೇಷ್ಠರಾದವರು, ಸ್ವಚ್ಛವಾದ ಮನಸ್ಸಿನಿಂದ ಆ ನದಿಯನ್ನು ದಾಟಿ ಆನಂದವನ್ನು ಅನುಭವಿಸುತ್ತಾರೆ ಎನ್ನುತ್ತದೆ ವೈರಾಗ್ಯಶತಕ.

Previous articleಮೋದಿ ಆರ್‌ಎಸ್ಎಸ್‌ನ ಗುಂಗಿನಲ್ಲಿದ್ದಾರೆ
Next articleಅವನು ಬಿಜೆಪಿಯವನು, ಏನ್ ಬೇಕಾದ್ರೂ ಹೇಳ್ತಾನೆ…