ಆಲೆಮನೆಗೆ ಬೆಂಕಿ: ಹಸು, ಕರು, ಮೇಕೆ ಸಜೀವ ದಹನ

0
19

ಪಾಂಡವಪುರ : ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಆಲೆಮನೆಯೊಂದು ಹೊತ್ತಿ ಉರಿದು ಬೆಲೆ ಬಾಳುವ ನಾಟಿ ಹಸು, ಕರು, ಮೇಕೆ ಸಾವನ್ನಪ್ಪಿ, ಟ್ರಾಕ್ಟರ್ ಸುಟ್ಟು ಕರಕಲಾಗಿ ಸುಮಾರು 10ಲಕ್ಷ ರೂ. ನಷ್ಟ ಸಂಭವಿಸಿರುವ ಘಟನೆ ತಾಲೂಕಿನ ದೇವೇಗೌಡನಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿ ಡಿ.ಧನಂಜಯ (ಬಾಲು) ಹಾಗೂ ಡಿ.ಉಮೇಶ್ ಎಂಬುವರಿಗೆ ಸೇರಿದ ಆಲೆಮನೆ ಬೆಂಕಿಗಾಹುತಿಯಾಗಿದೆ.
ದೇವೇಗೌಡನಕೊಪ್ಪಲು ಹೊರವಲಯದಲ್ಲಿರುವ ಆಲೆಮನೆಗೆ ಸೋಮವಾರ ಬೆಳಗಿನ ಜಾವ ಸುಮಾರು 3.30ರ ಸಮಯದಲ್ಲಿ ಬೆಂಕಿ ಆವರಿಸಿ ಒಂದು ನಾಟಿ ಹಸು, ಎರಡು ನಾಟಿ ಕರುಗಳು ಹಾಗೂ ಮೇಕೆಯೊಂದು ಸಾವನ್ನಪ್ಪಿವೆ. ಆಲೆಮನೆ ಬಳಿ ನಿಲ್ಲಿಸಿದ ಟ್ರಾಕ್ಟರ್ ಬೆಂಕಿಗಾಹುತಿಯಾಗಿದೆ. ಮನೆ ಕಟ್ಟುವ ಸಲುವಾಗಿ ಆಲೆಮನೆಯೊಳಗೆ ಜೋಡಿಸಿಟ್ಟಿದ್ದ 3ಲಕ್ಷ ರೂ.ಬೆಲೆ ಬಾಳುವ ತೇಗದ ಮರಗಳು ಕೂಡ ಬೆಂಕಿಗಾಹುತಿಯಾಗಿವೆ. ಮೊದಲಿಗೆ ಕಬ್ಬಿನ ರಚ್ಚಿಗೆ ಬೆಂಕಿ ಬಿದ್ದಿದೆ. ನಂತರ ಬೆಂಕಿ ಆಲೆಮನೆಗೆ ವ್ಯಾಪಿಸಿ ಧಗ ಧಗೆನೆ ಹೊತ್ತಿ ಉರಿದಿದೆ. ತಕ್ಷಣವೇ ಕಾರ್ಮಿಕರು ಬೆಂಕಿ ನಂದಿಸುವ ಪ್ರಯತ್ನ ನಡೆಸಿದರು. ಅಲ್ಲದೇ ಅಗ್ನಿಶಾಮಕ ದಳದ ಸಿಬ್ಬಂದಿ ವರ್ಗದವರು ಬೆಂಕಿ ನಂದಿಸಲು ಪ್ರಯತ್ನಿಸಿದರಾದರೂ ಅಷ್ಟರಲ್ಲಿ ಸಂಪೂರ್ಣ ಬೆಂಕಿ ಆಲೆಮನೆಗೆ ವ್ಯಾಪಿಸಿದ್ದರಿಂದ 10ಲಕ್ಷ ರೂ. ನಷ್ಟವಾಗಿದೆ.
ಶಾಸಕ ಭೇಟಿ, ಪರಿಶೀಲನೆ : ಘಟನಾ ಸ್ಥಳಕ್ಕೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಯಲ್ಲಿ ಒಂದು ನಾಟಿ ಹಸು ಹಾಗೂ ಎರಡು ನಾಟಿ ಕರುಗಳು ಸಾವನ್ನಪ್ಪಿದ್ದರ ಬಗ್ಗೆ ಬೇಸರ ವ್ಯಕ್ತಪಡಿಸಿದರಲ್ಲದೇ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಸೂಕ್ತ ಪರಿಹಾರ ಕೊಡಿಸುವುದಾಗಿ ಆಲೆಮನೆಯ ಮಾಲೀಕರಾದ ಧನಂಜಯ ಹಾಗೂ ಉಮೇಶ್ ಅವರಿಗೆ ಭರವಸೆ ನೀಡಿದರು.
ಅಧಿಕಾರಿಗಳ ಭೇಟಿ : ಘಟನಾ ಸ್ಥಳಕ್ಕೆ ತಹಸೀಲ್ದಾರ್ ಎಸ್.ಸಂತೋಷ್, ಪೊಲೀಸ್ ಇನ್ಸ್ ಪೆಕ್ಟರ್ ಎಚ್.ಆರ್.ತ್ಯಾಗರಾಜು, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಹಿಮಾಚಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಘಟನೆ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleನೂರು ದಿನಗಳಲ್ಲಿ ಎಡವಿದ್ದೇ ಹೆಚ್ಚು
Next articleಕಾಂಗ್ರೆಸ್ ಪಕ್ಷ ಸೇರಲ್ಲ