ಅಪಘಾತದಲ್ಲಿ ನಾಲ್ವರು ಸಾವು: ಸ್ಥಳಕ್ಕೆ ಡಿಐಜಿಪಿ ಬೋರಲಿಂಗಯ್ಯ ಭೇಟಿ

ಮಂಡ್ಯ: ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ನ ತೂಬಿನಕೆರೆ ಎಕ್ಸಿಟ್ ಬಳಿ ಇಂದು ಕೆಎಸ್ಆರ್‌ಟಿಸಿ ಐರಾವತ ಬಸ್‌ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ನಾಲ್ವರು ಮೃತಪಟ್ಟಿದ್ದು, ಸ್ಥಳಕ್ಕೆ ದಕ್ಷಿಣ ವಲಯ ಪೊಲೀಸ್ ಉಪ ಮಹಾನಿರೀಕ್ಷಕ ಡಾ. ಎಂ.ಬಿ.ಬೋರಲಿಂಗಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಪಘಾತದಲ್ಲಿ ಬೆಂಗಳೂರಿನವರಾದ ನಿವೃತ್ತ ಎಇ ಸತ್ಯಾನಂದ ರಾಜೇ ಅರಸ್, ನಿಶ್ಚಿತಾ, ಸುವೇಧಿನಿ ರಾಣಿ ಹಾಗೂ ಚಂದ್ರು ಎಂಬ ನಾಲ್ವರು ಸಾವಿಗೀಡಾಗಿದ್ದರು. ಬೆಂಗಳೂರಿನಿಂದ ಮೈಸೂರಿಗೆ ತೆರಳುವಾಗ ಟೋಲ್ ತಪ್ಪಿಸಲು ಕಾರು ಸರ್ವಿಸ್ ರಸ್ತೆಗೆ ಇಳಿಯುವ ಸಂದರ್ಭದಲ್ಲಿ ಹಿಂಬದಿಯಿಂದ ಕೆಎಸ್‌ಆರ್‌ಟಿಸಿ ಓಲ್ವಾ ಬಸ್‌ ಟಾಟಾ ಪಂಚ್ ಕಾರಿಗೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿತ್ತು.
ಈ ಹಿನ್ನೆಲೆಯಲ್ಲಿ ಡಿಐಜಿಪಿ ಅವರು ಭೇಟಿ ನೀಡಿ ಪರಿಶೀಲಿಸಿ, ಅಪಘಾತ ನಡೆದ ಸ್ಥಳದಲ್ಲಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಸೂಕ್ತ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಜರಿದ್ದರು.