ಹಾವೇರಿ: ಸವಣೂರು ತಾಲೂಕಿನ ತೆವರಮೆಳ್ಳಳ್ಳಿ ಗ್ರಾಮದ ಶಿಮ್ಲಾ ಡಾಬಾ ಬಳಿ ಮಂಗಳವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುರಿಗಳನ್ನು ತುಂಬಿದ್ದ ವಾಹನ ಮುಂದಿನ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಮೃತಪಟ್ಟು, ೧೦ಕ್ಕೂ ಹೆಚ್ಚು ಕುರಿಗಳು ಸಾವಿಗೀಡಾಗಿರುವ ಘಟನೆ ನಡೆದಿದೆ.
ರಾಣೆಬೆನ್ನೂರು ತಾಲೂಕಿನ ಕಾಕೋಳ ಗ್ರಾಮದ ಕುರಿ ವ್ಯಾಪಾರಿಗಳಾದ ಮೈಲಾರಪ್ಪ ಕೈದಾಳ(೪೦), ಗುಡ್ಡಪ್ಪ ಕೈದಾಳ(೪೨) ಹಾಗೂ ಚಾಲಕ ಶಿವಕುಮಾರ ಹೊಳೆಪ್ಪನವರ(೨೨) ಮೃತಪಟ್ಟವರು. ಉಳಿದ ನಾಲ್ವರ ಕೈಕಾಲುಗಳಿಗೆ ತೀವ್ರ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಬಾಗಲಕೋಟೆಯಿಂದ ಕುರಿಗಳನ್ನು ಖರೀದಿಸಿ, ವಾಪಸ್ ಕಾಕೋಳಕ್ಕೆ ಹಿಂದಿರುಗುವ ವೇಳೆಯಲ್ಲಿ ಕುರಿ ತುಂಬಿದ್ದ ವಾಹನ ಮುಂಭಾಗದ ವಾಹನಕ್ಕೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಈ ಕುರಿತು ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.