ಪುತ್ತೂರು: ಭೀಕರ ರಸ್ತೆ ಅಪಘಾತ ಸಂಭವಿಸಿ, ಬೈಕ್ ಸವಾರ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಇಲ್ಲಿನ ಹೊರವಲಯ ಮುರ ಎಂಬಲ್ಲಿ ಫೆ. ೪ರ ಮಂಗಳವಾರ ತಡರಾತ್ರಿ ನಡೆದಿದೆ.
ದಿ. ಪುರುಷೋತ್ತಮ ಎಂಬವರ ಪುತ್ರ ಚೇತನ್ ಕೆಮ್ಮಿಂಜೆ (೪೪) ಮೃತಪಟ್ಟವರು. ಇವರು ಖಾಸಗಿ ವಾಹಿನಿಯೊಂದರಲ್ಲಿ ಕ್ಯಾಮೆರಾಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮುರ ಎಂಬಲ್ಲಿ ಬೈಕ್ ಹಾಗೂ ಆಟೋ ರಿಕ್ಷಾ ಮಧ್ಯೆ ಈ ಅಪಘಾತ ಸಂಭವಿಸಿದೆ. ಬೈಕ್‌ನಲ್ಲಿ ಚೇತನ್ ಜತೆಗೆ ಇನ್ನೋರ್ವ ಬಾಲಕ ಕೂಡ ಇದ್ದ.
ಚೇತನ್ ಅವರು ನೆಹರೂ ನಗರದ ಮತಾವುನಲ್ಲಿರುವ ತನ್ನ ಸಂಬಂಧಿಕರ ಮನೆಗೆ ಬಂದಿದ್ದು, ಅಲ್ಲಿಂದ ಬಾಲಕನನ್ನು ಅಂಗಡಿಗೆ ಕರೆದುಕೊಂಡು ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಸವಾರ ಹಾಗೂ ಬಾಲಕ ಇಬ್ಬರು ಡಾಮಾರು ರಸ್ತೆಗೆ ಎಸೆಯಲ್ಪಟ್ಟಿದ್ದು, ಬಾಲಕ ಅಪಾಯದಿಂದ ಪಾರಾಗಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡ ಚೇತನ್ ಅವರನ್ನು ಪುತ್ತೂರು ಆಸ್ಫತ್ರೆಗೆ ಸಾಗಿಸಲಾಯಿತಾದರೂ ಬದುಕಿ ಉಳಿಯಲಿಲ್ಲ. ಬಾಲಕ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.


























