ದಾವಣಗೆರೆ: ಅಕ್ರಮ ಮಣ್ಣು ಮತ್ತು ಮರಳು ಗಣಿಗಾರಿಕೆ ನಡೆಸಲು ಬಿಡುವುದಿಲ್ಲ. ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ದೃಷ್ಟಿಯಿಂದ ಮಣ್ಣ ಮತ್ತು ಮರಳು ಗಣಿಗಾರಿಕೆ ನಡೆಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಅನುಮತಿ ಪಡೆದು ಗಣಿಗಾರಿಕೆ ನಡೆಸಲು ಅವಕಾಶವಿದೆ. ಆದರೆ ಅನುಮತಿ ಇಲ್ಲದೆ ಅಕ್ರಮ ಮರಳು ಗಣಿಗಾರಿಕೆ ನಡೆಸುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುವಂತೆ ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ಪತ್ರಕರ್ತರ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯೆ ನೀಡಿದರು. ಅಧಿಕೃತವಾಗಿ ಮರಳು ಗಣಿಗಾರಿಕೆ ನಡೆಸಲು ಸರ್ಕಾರ ಅವಕಾಶ ನೀಡಿದೆ. ಮರಳಿನ ಲಭ್ಯತೆ ಎಲ್ಲಿದೆ, ಅಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಅನುಮತಿ ಪಡೆದು ಮರಳು ಗಣಿಗಾರಿಕೆ ನಡೆಸಬಹುದು. ಆದರೆ ಯಾವುದೇ ಅನುಮತಿ ಪಡೆಯದೇ ಸರ್ಕಾರ ಅಥವಾ ಇಲಾಖೆ
ಕಣ್ತಪ್ಪಿಸಿ ಅನಧಿಕೃತವಾಗಿ ಮರಳು ಗಣಿಗಾರಿಕೆ ನಡೆಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಅಕ್ರಮ ಮರಳು ಗಣಿಗಾರಿಕೆ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿವೆ. ಅಲ್ಲದೇ ಪತ್ರಿಕೆಗಳಲ್ಲಿಯೂ ಕೂಡ ಪ್ರಕಟಣೆ ಆಗುತ್ತಿವೆ. ಇದನ್ನು ಆಧರಿಸಿ ಈಗಾಗಲೇ ಅಕ್ರಮ ಮರಳು ಗಣಿಗಾರಿಕೆ ನಡೆಸುವ ಸ್ಥಳಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಅವರು ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಮುಂದೆ ಕೂಡ ಇದೇ ರೀತಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ. ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.