ಹುಬ್ಬಳ್ಳಿ: ಇಲ್ಲಿನ ರಾಜನಗರದಲ್ಲಿರುವ ಕೇಂದ್ರೀಯ ವಿದ್ಯಾಲಯ ನಂ. ೧' ರ ಹತ್ತನೆಯ ತರಗತಿ ವಿದ್ಯಾರ್ಥಿನಿ
ಕು. ಕೃಷಿ’ ಸಂಗಮೇಶ ಮೆಣಸಿನಕಾಯಿ ಇದೇ ದಿನಾಂಕ ಮಾರ್ಚ್ ೧೧ರಿಂದ ೧೪ರವರೆಗೆ ಥೈಲ್ಯಾಂಡ್‌ನ ಚಿಯಾಂಗ್ ಮಾಯ್ ಪ್ರಾಂತ್ಯದಲ್ಲಿ ನಡೆಯಲಿರುವ ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ ಅಸ್ಟ್ರೊನೊಮಿ ಕ್ಯಾಂಪ್‌ಗೆ ಆಯ್ಕೆಯಾಗಿದ್ದಾಳೆ.
ನ್ಯಾಷನಲ್ ಅಸ್ಟ್ರೊನೊಮಿ ರೀಸರ್ಚ್ ಇನ್‌ಸ್ಟಿಟ್ಯೂಟ್ ಆಫ್ ಥೈಲ್ಯಾಂಡ್ ಹಾಗೂ ಯುನೆಸ್ಕೊದ ಅಂತಾರಾಷ್ಟ್ರೀಯ ಖಗೋಳ ತರಬೇತಿ ಕೇಂದ್ರಗಳು ಜಂಟಿಯಾಗಿ, ೧೫ ರಿಂದ ೧೯ ವರ್ಷದೊಳಗಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗುತ್ತಿರುವ ಈ ಶಿಬಿರಕ್ಕೆ ವಿಶ್ವದ ನಾನಾ ದೇಶಗಳ ೩೧೬ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಅವರಲ್ಲಿ ಕೇವಲ ೩೦ ವಿದ್ಯಾರ್ಥಿಗಳನ್ನು, ಅವರು ಬರೆದಿರುವ ಖಗೋಳಶಾಸ್ತ್ರದ ನಿಬಂಧದ ಆಧಾರ ಮೇಲೆ ಶಿಬಿರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಎ.ಎ.ಸಿ. ಪ್ರಕಟಣೆ ತಿಳಿಸಿದೆ. ಭಾರತದಿಂದ ಇಬ್ಬರು ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದು, ಅದರಲ್ಲಿ ಕೃಷಿ ಒಬ್ಬಳಾಗಿದ್ದಾಳೆ.
ಚಿಯಾಂಗ್ ಮಾಯ್ ಪ್ರಾಂತ್ಯದ ಮೇರಿಮ್ ಜಿಲ್ಲೆಯ ಪ್ರಿನ್ಸೆಸ್ ಸಿರಿಂಧೋರ್ನ್ ಆಸ್ಟ್ರೊಪಾರ್ಕ್ ಮತ್ತು ಚೊಮ್ ಥಾಂಗ್ ಜಿಲ್ಲೆಯ ಅಸ್ಟ್ರೊನೊಮಿ ಇನ್‌ಫಾರ್ಮೇಶನ್ ಅಂಡ್ ಟ್ರೇನಿಂಗ್ ಸೆಂಟರ್ ಹಾಗೂ ಡೊಯ್ ಇಂಥನಾನ್ ನ್ಯಾಷನಲ್ ಪಾರ್ಕ್‌ನಲ್ಲಿ ನಡೆಯುವ ಈ ಶಿಬಿರದಲ್ಲಿ ವಿದ್ಯಾರ್ಥಿಗಳು ಅಲ್ಲಿನ ಪ್ರಯೋಗಾಲಯಗಳಿಗೆ ಭೇಟಿ ನೀಡಿ, ೪೦ ಮೀಟರ್ ಉದ್ದದ ಥಾಯ್ ನ್ಯಾಷನಲ್ ರೇಡಿಯೊ ಟೆಲಿಸ್ಕೋಪ್ ಮತ್ತು ೨.೪ ಮೀಟರ್ ಉದ್ದದ ಥಾಯ್ ನ್ಯಾಷನಲ್ ಟೆಲಿಸ್ಕೋಪನ್ನು ವೀಕ್ಷಿಸಲಿದ್ದಾರೆ. ಥೈಲ್ಯಾಂಡ್‌ನ ಅತಿ ಎತ್ತರದ ಶಿಖರದಲ್ಲಿ ನಕ್ಷತ್ರ ವೀಕ್ಷಣೆಯಂಥ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ನರಿಟ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸರನ್ ಪೊಷ್ಯಾಚಿಂದ ಅವರು ಕೃಷಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
`ಕೃಷಿ’ ಇದೇ ಶೈಕ್ಷಣಿಕ ವರ್ಷದಲ್ಲಿ ಕೇರಳದ ಎರ್ನಾಕುಲಂನಲ್ಲಿ ನಡೆದ ಕೇಂದ್ರೀಯ ವಿದ್ಯಾಲಯಗಳ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ೩,೦೦೦ ಮೀ. ಮತ್ತು ೧,೫೦೦ ಮೀಟರ್ ಓಟಗಳಲ್ಲಿಯೂ ಬೆಂಗಳೂರು ಪ್ರಾದೇಶಿಕ ವಿಭಾಗವನ್ನು ಪ್ರತಿನಿಧಿಸಿ, ಸಮಾಧಾನಕರ ಬಹುಮಾನ ಪಡೆದಿದ್ದಾಳೆ.
ವಿದ್ಯಾರ್ಥಿನಿಗೆ ಸಚಿವ ಜೋಶಿ, ಸಭಾಪತಿ ಹೊರಟ್ಟಿ ಅಭಿನಂದನೆ
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು `ಕೃಷಿ’ಗೆ ಫೇಸಬುಕ್ ಮತ್ತು ಟ್ವಿಟರ್ ಮೂಲಕ ಅಭಿನಂದನೆ ಸಲ್ಲಿಸಿದ್ದರೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಕರೆ ಮಾಡಿ ಅಭಿನಂದಿಸಿದ್ದಾರೆ.
ವಿದ್ಯಾರ್ಥಿನಿಯ ನುಡಿಗಳು
ಈ ಆಯ್ಕೆಗೆ ಕೇಂದ್ರೀಯ ವಿದ್ಯಾಲಯ ನಂ. ೧ರ ಶಿಕ್ಷಕರು ಏಪ್ರಿಲ್ ೨೦೨೪ರಲ್ಲಿ ಬೆಂಗಳೂರಿನ ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆಗೆ ವಿಜ್ಞಾನ ಪ್ರವಾಸ ಕರೆದೊಯ್ದಿದ್ದರು. ಆ ಸಂದರ್ಭದಲ್ಲಿ ಇಸ್ರೋದ ವಿವಿಧ ವಿಭಾಗಗಳಿಗೆ ಭೇಟಿ ನೀಡಿದ್ದೆವು. ಅದೇ ವೇಳೆ ವಿಜ್ಞಾನಿಗಳಾದ ಪಿ. ವೀರಮುತುವೆಲ್, ನಿಗಾರ್ ಶಾಜಿ, ಪ್ರಶಾಂತ ಬಾಗಲಕೋಟ ಹಾಗೂ ಇತರರ ಜೊತೆ ಸಣ್ಣ ಸಂವಾದ ನಡೆಸಿದ್ದೆ. ಅವರ ಮಾತುಗಳಿಂದ ಅಂತರಿಕ್ಷ ಮತ್ತು ಖಗೋಳಶಾಸ್ತ್ರದಲ್ಲಿ ಹೆಚ್ಚಿನ ಆಸಕ್ತಿ ಉಂಟಾಯಿತು. ಈ ಶಿಬಿರದಲ್ಲಿ ನಾನು ಆಯ್ಕೆಯಾಗಲು ನನ್ನ ಶಾಲೆ, ಪಿ.ಎಂ.ಶ್ರೀ ಅನುದಾನ, ಇಸ್ರೋ ಹಾಗೂ ಅಲ್ಲಿನ ವಿಜ್ಞಾನಿಗಳ ಪ್ರೇರಣೆಯೇ ಕಾರಣ ಎಂದು ಕೃಷಿ ತಿಳಿಸಿದ್ದಾಳೆ.