ಬೆಂಗಳೂರು: ನಟಿ ರಮ್ಯಾಗೆ ಅವಹೇಳನಕಾರಿ ಸಂದೇಶ ಕಳಿಸಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರಾಜ್ಯ ಮಹಿಳಾ ಆಯೋಗ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದೆ. ಈ ಮೂಲಕ ರಮ್ಯಾ ಬೆಂಬಲಕ್ಕೆ ಮಹಿಳಾ ಆಯೋಗ ಬಂದಿದೆ.
ನಟಿ ರಮ್ಯಾ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಇತ್ತಿಚೆಗೆ ಸಾಮಾಜಿಕ ಜಾಲತಾಣದಲ್ಲಿ ಜಟಾಪಟಿ ಜೋರಾಗಿದೆ. ಒಂದು ಪೋಸ್ಟ್‌ನಿಂದಾಗಿ ದರ್ಶನ್ ಅಭಿಮಾನಿಗಳು ರಮ್ಯಾ ವಿರುದ್ಧ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.
ಪತ್ರದಲ್ಲಿ ಏನಿದೆ?: ಮಹಿಳಾ ಆಯೋಗ ಮಾಜಿ ಸಂಸದೆ ಹಾಗೂ ನಟಿ ರಮ್ಯಾರವರ ವಿರುದ್ಧ, ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶಗಳನ್ನು ನೀಡಿರುವ ಬಗ್ಗೆ ವರದಿಯಾಗಿರುತ್ತದೆ. ಇದರಿಂದ ಮಹಿಳೆಯ ಸ್ಥಾನಮಾನಕ್ಕೆ ತೊಂದರೆಯಾಗುತ್ತಿದ್ದು, ಈ ಸಂಬಂಧ ರಾಜ್ಯ ಮಹಿಳಾ ಆಯೋಗವು ಇದನ್ನು ಗಂಭೀರವಾಗಿ ಪರಿಗಣಿಸಿರುತ್ತದೆ. ಆದ್ದರಿಂದ ಸದರಿ ಪ್ರಕರಣದ ಬಗ್ಗೆ ನಿಯಮಾನುಸಾರ ಪರಿಶೀಲಿಸಿ, ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿರುವ ಅವಹೇಳನಕಾರಿ ಸಂದೇಶಗಳನ್ನು ಕೂಡಲೇ ಸ್ಥಗಿತಗೊಳಿಸಿ. ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದೆ. ಈ ಪತ್ರವನ್ನು ರಮ್ಯಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಘಟನೆಯ ಹಿನ್ನೆಲೆ: “ಭಾರತದ ಸಾಮಾನ್ಯ ಪ್ರಜೆಗೂ ಸುಪ್ರೀಂ ಕೋರ್ಟ್ ಆಶಾಕಿರಣ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬಹುದು ಎಂದು ನಾನು ನಂಬಿದ್ದೇನೆ” ಎಂದು ನಟಿ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿಕೊಂಡಿದ್ದರು. ಇದರಿಂದಾಗಿ ದರ್ಶನ್ ಅಭಿಮಾನಿಗಳು ರಮ್ಯಾ ವಿರುದ್ಧ ಆಕ್ರೋಶ ಹೊರಹಾಕಲು ಆರಂಭಿಸಿದರು.
ಬಳಿಕ ದರ್ಶನ ಅಭಿಮಾನಿಗಳ ವಿರುದ್ಧ ನಟಿ ರಮ್ಯಾ ಕೂಡ ಕಿಡಿಕಾರಿದ್ದಾರೆ. ದರ್ಶನ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಅಶ್ಲೀಲ ಸಂದೇಶಗಳನ್ನು ಉಲ್ಲೇಖಿಸಿ ನಟಿ ರಮ್ಯಾ ಕಿಡಿಕಾರಿದ್ದಾರೆ. ರೇಣುಕಾಸ್ವಾಮಿ ಮೇಸೆಜ್‌ಗಳಿಗೂ ಡಿ ಬಾಸ್ ಕೆಲ ಅಭಿಮಾನಿಗಳಿಗೂ ವ್ಯತ್ಯಾಸವಿಲ್ಲ. ಸ್ತ್ರೀ ವಿರೋಧಿ ಮನಸ್ಥಿತಿಯನ್ನು ಹೊಂದಿದ್ದಾರೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಅಲ್ಲದೇ ರೇಣುಕಾಸ್ವಾಮಿ ಕುಟುಂಬಕ್ಕೆ ಯಾಕೆ ನ್ಯಾಯ ಸಿಗಬೇಕು ಎನ್ನುವುದಕ್ಕೆ ನಿಮ್ಮ ಕಮೆಂಟ್ಸ್‌ಗಳೇ ಸಾಕ್ಷಿ. ಮಹಿಳೆಯರ ಬಗ್ಗೆ ಇಂಥ ಕೀಳು ಮನಸ್ಥಿತಿ ಹೊಂದಿರುವುದರಿಂದಲೇ ಅವರ ಮೇಲೆ, ದೌರ್ಜನ್ಯ, ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ಹೆಚ್ಚುತ್ತಿವೆ ಎಂದು ಮತ್ತೊಂದು ಪೋಸ್ಟ್‌ನಲ್ಲಿಯೂ ಹಂಚಿಕೊಂಡಿದ್ದಾರೆ. ಸದ್ಯ ಅಶ್ಲೀಲ ಸಂದೇಶಗಳಿಂದಾಗಿ ಕಾನೂನು ಸಮರಕ್ಕೆ ರಮ್ಯಾ ಸಿದ್ಧವಾಗಿದ್ದು ಸೈಬರ್ ಕ್ರೈಂಗೆ ದೂರು ನೀಡಲು ಸಜ್ಜಾಗಿದ್ದಾರೆ.
ಇದೆಲ್ಲರ ಮಧ್ಯೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಇನ್‌ಸ್ಟಾಗ್ರಾಮ್ ಪೋಸ್ಟ್ ಕೂಡ ವೈರಲ್ ಆಗುತ್ತಿದೆ. ಪರೋಕ್ಷವಾಗಿ ರಮ್ಯಾ ಅವರನ್ನು ಉದ್ದೇಶಿಸಿಯೇ ವಿಜಯಲಕ್ಷ್ಮಿ ಈ ಪೋಸ್ಟ್ ಹಾಕಿದ್ದಾರೆ ಎನ್ನುವ ಚರ್ಚೆ ಕೂಡ ಶುರುವಾಗಿದೆ. “ಮೂರ್ಖನನ್ನು ಅವನ ಮಾತಿನಿಂದ ಗುರುತಿಸಲಾಗುತ್ತದೆ.. ಅದೇ ರೀತಿ ಬುದ್ಧಿವಂತನನ್ನು ಮೌನದಿಂದ ಗುರುತಿಸಲಾಗುತ್ತದೆ” ಎಂದು ಬುದ್ಧನ ಮಾತನ್ನು ವಿಜಯಲಕ್ಷ್ಮಿ ದರ್ಶನ್ ಅವರು ಪೋಸ್ಟ್ ಮಾಡಿದ್ದಾರೆ.
ಈ ನಡುವೆ ಕನ್ನಡ ಚಿತ್ರರಂಗದ ಮತ್ತೋರ್ವ ನಟಿ ರಕ್ಷಿತಾ ಕೂಡ ದರ್ಶನ್ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶದ ಮೂಲಕ ಕಿವಿಮಾತು ಹೇಳಿದ್ದು, ‘ನೀವು ಜನರ ಮಾನಸಿಕ ಸ್ಥಿತಿಗತಿಯನ್ನು ನೋಡೋಕೆ ಸಾಧ್ಯವಿಲ್ಲ, ದಯವಿಟ್ಟು ದಯೆಯಿಂದಿರಿ (ಸಹನೆಯಿಂದಿರಿ)’ ಎಂದು ಪೋಸ್ಟ್ ಹಾಕಿದ್ದಾರೆ.