ರಷ್ಯಾ ತೈಲ ಖರೀದಿಗೆ ಪ್ರೋತ್ಸಾಹ ನೀಡಿದ್ದೇ ಅಮೆರಿಕ!

0
63

ನವದೆಹಲಿ: ರಷ್ಯಾದಿಂದ ಭಾರತ ತೈಲ ಖರೀದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಮತ್ತೆ ಸುಂಕ ಹೆಚ್ಚಿಸುವ ಬೆದರಿಕೆ ಹಾಕಿದ್ದರೂ ರಷ್ಯಾ ತೈಲ ಖರೀದಿಸಲು ಭಾರತಕ್ಕೆ ಅಮೆರಿಕವೇ ಪ್ರೋತ್ಸಾಹ ನೀಡಿರುವ ಸಂಗತಿ ಈಗ ಬೆಳಕಿಗೆ ಬಂದಿದೆ. ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ನಿಯಂತ್ರಣಕ್ಕೆ ತರುವುದು ಹಾಗೂ ರಷ್ಯಾದಿಂದ ಹೆಚ್ಚು ತೈಲ ಖರೀದಿಸುವ ಮೂಲಕ ಅದರ ಆದಾಯ ಪ್ರಮಾಣ ತಗ್ಗಿಸುವುದು ಅಮೆರಿಕದ ತಂತ್ರದ ಹಿಂದಿನ ಉದ್ದೇಶವಾಗಿತ್ತು.

ರಷ್ಯಾದ ತೈಲ ವಿಚಾರದಲ್ಲಿ ಭಾರತಕ್ಕೆ ಟ್ರಂಪ್ ಆಗಾಗ ಧಮಕಿ ಹಾಕುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಹಿಂದೆ ಅಮೆರಿಕದ ರಾಯಭಾರಿಯಾಗಿದ್ದ ಎರಿಕ್ ಗಾರ್ಸೆಟ್ಟಿಯ ಹಳೆಯ ಹೇಳಿಕೆ ಈಗ ಮತ್ತೆ ಕಾಣಿಸಿಕೊಂಡಿದೆ. ಜಾಗತಿಕ ತೈಲ ದರದಲ್ಲಿ ಸ್ಥಿರತೆ ಉಂಟು ಮಾಡಲು ರಷ್ಯಾದಿಂದ ತೈಲ ಖರೀದಿಸುವುದಕ್ಕೆ ಭಾರತಕ್ಕೆ ಪ್ರೋತ್ಸಾಹ ನೀಡಿದ್ದು ಅಮೆರಿಕ ಎಂದು ಗಾರ್ಸೆಟ್ಟಿ 2024ರಲ್ಲಿ ಬಹಿರಂಗಪಡಿಸಿದ್ದರು.

ಭಾರತದ ಈ ನಡೆ ಅಮೆರಿಕ ನೀತಿಯ ಭಾಗವೂ ಆಗಿತ್ತು ಎಂದೂ ಗಾರ್ಸೆಟ್ಟಿ ಅಂತಾರಾಷ್ಟ್ರೀಯ ವ್ಯವಹಾರದಲ್ಲಿನ ವೈವಿಧ್ಯತೆಯ ಸಮ್ಮೇಳನದಲ್ಲಿ ಹೇಳಿದ್ದರು. ನಮ್ಮ ಅಪೇಕ್ಷೆಯಂತೆ ಅವರು(ಭಾರತ) ರಷ್ಯಾದಿಂದ ತೈಲ ಖರೀದಿಸಿದ್ದರು. ಇದು ಉಲ್ಲಂಘನೆ ಅಥವಾ ಬೇರೆ ಯಾವುದೇ ತಪ್ಪು ಕೂಡಾ ಆಗಿಲ್ಲ. ವಾಸ್ತವವಾಗಿ ಇದು ನೀತಿಯ ಭಾಗವೇ ಆಗಿದೆ. ಒಂದು ಸರಕಾಗಿ ತೈಲ ಬೆಲೆ ಏರಿಕೆಯಾಗಬೇಕೆಂದು ನಾವು ಬಯಸುವುದಿಲ್ಲ. ಅವರು(ಭಾರತ) ಅದನ್ನು ಈಡೇರಿಸಿದರು ಎಂದೂ ಗಾರ್ಸೆಟ್ಟಿ ವಿವರಿಸಿದ್ದರು.

ಗಾರ್ಸೆಟ್ಟಿ ಹೇಳಿಕೆ ವಿವಾದ ಸೃಷ್ಟಿಸಿದ ಸಂದರ್ಭದಲ್ಲಿ ರಷ್ಯಾದಿಂದ ಕಚ್ಚಾ ತೈಲ ಆಮದು ನಿಲ್ಲಿಸುವಂತೆ ಭಾರತಕ್ಕೆ ಅಮೆರಿಕ ತಾಕೀತು ಮಾಡಿರಲಿಲ್ಲ ಎಂದು ಅಮೆರಿಕದ ಖಜಾನೆ ಇಲಾಖೆಯೂ ಸ್ಪಷ್ಟನೆಯನ್ನೂ ನೀಡಿತ್ತು. ಭಾರತ ರಷ್ಯಾ ತೈಲ ಖರೀದಿಗೆ ಪ್ರೋತ್ಸಾಹಿಸಿರುವುದಕ್ಕೆ ಗಾರ್ಸೆಟ್ಟಿಯ ಇದೊಂದು ಹೇಳಿಕೆ ನಿದರ್ಶನವಲ್ಲ. 2022ರ ನವೆಂಬರ್‌ನಲ್ಲಿ ಅಂದಿನ ಅಮೆರಿಕ ಖಜಾನೆ ಕಾರ್ಯದರ್ಶಿ ಜಾನೆಟ್ ಯೆಲ್ಲೆನ್ ಕೂಡಾ ಭಾರತ ಯಥೋಚಿತವಾಗಿ ರಷ್ಯಾದಿಂದ ತೈಲ ಖರೀದಿಸುವುದಕ್ಕೆ ಅಮೆರಿಕ ಸಂತೋಷಪಡುತ್ತದೆ ಎಂದಿದ್ದರು.

ಅಮೆರಿಕ-ರಷ್ಯಾ ಅಣ್ವಸ್ತ್ರ ಒಪ್ಪಂದ ರದ್ದು: ಅಮೆರಿಕ ಜೊತೆಗಿನ ದಶಕಗಳಷ್ಟು ಹಳೆಯದಾದ ಪರಮಾಣು ಕ್ಷಿಪಣಿ ಒಪ್ಪಂದವನ್ನು ಕೊನೆಗೊಳಿಸುವುದಾಗಿ ರಷ್ಯಾ ಸೋಮವಾರ ಘೋಷಿಸಿದ್ದು, ಶೀತಲ ಸಮರದ ಶೈಲಿಯ ಶಸ್ತ್ರಾಸ್ತ್ರ ಪೈಪೋಟಿ ಮತ್ತೆ ಆರಂಭವಾಗುವ ಭೀತಿ ಹೆಚ್ಚಿಸಿದೆ.

1987 ರಲ್ಲಿ ಸಹಿ ಹಾಕಲಾದ ಮಧ್ಯಂತರ ಶ್ರೇಣಿಯ ಪರಮಾಣು ಒಪ್ಪಂದವು ವಿಶ್ವದ ಪ್ರಮುಖ ಮಿಲಿಟರಿ ಶಕ್ತಿಗಳ ನಡುವೆ ಅಲ್ಪ ಮತ್ತು ಮಧ್ಯಮ-ಶ್ರೇಣಿಯ ಕ್ಷಿಪಣಿಗಳ ನಿಯೋಜನೆಯ ಮೇಲೆ ನಿಷೇಧ ಹೇರಿತ್ತು. ರಷ್ಯಾದ ಮಾಜಿ ಅಧ್ಯಕ್ಷ ಮತ್ತು ಪ್ರಸ್ತುತ ರಷ್ಯಾದ ಭದ್ರತಾ ಮಂಡಳಿಯ ಉಪಾಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಅವರು ಬೆದರಿಕೆ ಹಾಕಿದ್ದರು. ಅದಾದ ನಂತರ ಟ್ರಂಪ್ ಎರಡು ಪರಮಾಣು ಜಲಾಂತರ್ಗಾಮಿ ನೌಕೆಗಳನ್ನು ಮರುಸ್ಥಾಪಿಸಲು ಆದೇಶಿಸಿದ್ದರು.

ಇದಕ್ಕೆ ಪ್ರತಿಕ್ರಿಯೆಯಾಗಿ ರಷ್ಯಾ ಈ ಕ್ರಮಕ್ಕೆ ಮುಂದಾಗಿದೆ. ಜುಲೈ ಆರಂಭದಲ್ಲಿ ಉಕ್ರೇನ್ ಜೊತೆ ಶಾಂತಿ ಒಪ್ಪಂದ ಮಾಡಿಕೊಳ್ಳಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಟ್ರಂಪ್ 50 ದಿನಗಳ ಗಡುವು ನೀಡಿದರು. ಇದಕ್ಕೆ ಮೆಡ್ವೆಡೆವ್ ಜುಲೈ 15 ರಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಸಂದರ್ಭದಲ್ಲಿ ರಷ್ಯಾ ಲಕ್ಷ್ಯ ವಹಿಸಲಿಲ್ಲ ಎಂದು ಪ್ರತಿಕ್ರಿಯಿಸಿದರು. ಈ ಬಗ್ಗೆ ಜುಲೈ 31 ರಂದು ಟ್ರೂತ್ ಸೋಷಿಯಲ್‌ನಲ್ಲಿ ಟ್ರಂಪ್ ಪ್ರತಿಕ್ರಿಯಿಸಿ, ತಾನು ಇನ್ನೂ ಅಧ್ಯಕ್ಷನೆಂದು ಭಾವಿಸುವ ರಷ್ಯಾದ ವಿಫಲ ಮಾಜಿ ಅಧ್ಯಕ್ಷ ಮೆಡ್ವೆಡೆವ್‌ಗೆ ನನ್ನ ಮಾತುಗಳನ್ನು ಗಮನಿಸಲು ಹೇಳಿ. ಮೆಡ್ವೆಡೆವ್ ತುಂಬಾ ಅಪಾಯಕಾರಿ ಪ್ರದೇಶವನ್ನು ಪ್ರವೇಶಿಸುತ್ತಿದ್ದಾನೆ ಎಂದು ಬರೆದಿದ್ದರು.

ಆ ಬಳಿಕ ಮೆಡ್ವೆಡೆವ್ ದಿ ಡೆಡ್ ಹ್ಯಾಂಡ್ ಎಂದು ಕರೆಯಲ್ಪಡುವ ಶೀತಲ ಸಮರದ ಯುಗದ ಸೋವಿಯತ್ ಪರಮಾಣು ಸಾಮರ್ಥ್ಯವನ್ನು ಬಳಸುವ ಪರೋಕ್ಷ ಬೆದರಿಕೆಯನ್ನು ಹಾಕಿದರು. ಈ ಪ್ರಚೋದನಕಾರಿ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಟ್ರಂಪ್, ಜಲಾಂತರ್ಗಾಮಿ ನೌಕೆಗಳನ್ನು ನಿಯೋಜಿಸಲು ಆದೇಶ ನೀಡಿದರು.

Previous articleKSRTC; ದಾವಣಗೆರೆಯಿಂದ ವಿವಿಧ ತಾಣಕ್ಕೆ ಟೂರ್ ಪ್ಯಾಕೇಜ್
Next articleICC Rankings: ಸಿರಾಜ್, ಜೈಸ್ವಾಲ್‌ಗೆ ಬಡ್ತಿ, ಟಾಪ್ 10ನಿಂದ ಗಿಲ್​ ಔಟ್

LEAVE A REPLY

Please enter your comment!
Please enter your name here