ನವದೆಹಲಿ: ಪ್ರಸಕ್ತ ಸಾಲಿನ ಸಂಸತ್ ಮುಂಗಾರು ಅಧಿವೇಶನ ಇದೇ ಜುಲೈ 21ರಿಂದ ಆರಂಭವಾಗಲಿದ್ದು ಆಗಸ್ಟ್ 21ರಂದು ನಡೆಯಲಿದೆ. ಈ ಕುರಿತಂತೆ ಕೇಂದ್ರ ಸರ್ಕಾರ ಜುಲೈ 19ರಂದು ಸರ್ವಪಕ್ಷಗಳ ಸಭೆ ಕರೆದಿದೆ ಎಂದು ಕೇಂದ್ರ ಸಂಸದೀಯ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.
ಅಧಿವೇಶನದ ಮೊದಲ ದಿನ ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದೆ. ಅಧಿವೇಶನದಲ್ಲಿ ಹಲವು ಮಸೂದೆಗಳ ಮಂಡನೆಗೆ ಸರ್ಕಾರ ಯೋಜಿಸಿದೆ, ಆಪರೇಷನ್ ಸಿಂಧೂರ್ ಬಳಿಕ ನಡೆಯುತ್ತಿರುವ ಮೊದಲ ಮುಂಗಾರು ಅಧಿವೇಶನ ಇದಾಗಿದೆ.
ಕೇಂದ್ರ ಸರ್ಕಾರ ಮಣಿಪುರ ಸರಕು ಮತ್ತು ಸೇವಾ ತೆರಿಗೆ ತಿದ್ದುಪಡಿ ಮಸೂದೆ, ಸಾರ್ವಜನಿಕ ಟ್ರಸ್ಟ್ ನಿಬಂಧನೆಗಳ ತಿದ್ದುಪಡಿ ಮಸೂದೆ, ಭಾರತೀಯ ನಿರ್ವಹಣಾ ಸಂಸ್ಥೆ ತಿದ್ದುಪಡಿ ಮಸೂದೆ, ತೆರಿಗೆ ಕಾನೂನುಗಳು ತಿದ್ದುಪಡಿ ಮಸೂದೆ ಸೇರಿದಂತೆ ಒಟ್ಟು 21 ದಿನಗಳ ಕಾಲ ನಡೆಯುವ ಕಲಾಪದಲ್ಲಿ 8 ಮಸೂದೆಗಳು ಮಂಡನೆಯಾಗುವ ನಿರೀಕ್ಷೆ ಇದೆ.
ಪಹಲ್ಗಾಮ್ ಉಗ್ರರ ದಾಳಿಯ ನಂತರ ವಿಶೇಷ ಅಧಿವೇಶನ ಕರೆಯುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದರು. ಆದರೆ, ವಿಶೇಷ ಅಧಿವೇಶನಕ್ಕೆ ಸರ್ಕಾರ ಮುಂದಾಗಿರಲಿಲ್ಲ. ಪಹಲ್ಗಾಮ್ ಭಯೋತ್ಪಾದಕ ದಾಳಿ ಹಾಗೂ ಇದಕ್ಕೆ ಭಾರತದ ಪ್ರತ್ಯುತ್ತರ ಸೇರಿದಂತೆ ಹಲವು ವಿಚಾರಗಳು ಅಧಿವೇಶನದಲ್ಲಿ ಚರ್ಚೆಗೆ ಬರುವ ನಿರೀಕ್ಷೆ ಇದೆ.
ದೇಶದ ಜ್ವಲಂತ ಸಮಸ್ಯೆಗಳನ್ನು ಮುಂದಿಟ್ಡುಕೊಂಡು ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದ ಪಕ್ಷಗಳು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಜ್ಜಾಗಿದ್ದು, ಬಿಹಾರದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕುರಿತಂತೆ, ಬಿಹಾರದ ಮತದಾರರ ಪರಷ್ಕರಣೆ ಸೇರಿ ವಿವಿಧ ವಿಷಯಗಳಲ್ಲಿ ಆಡಳಿತ ಮತ್ತು ಪ್ರತಿ ಪಕ್ಷಗಳ ನಡುವೆ ಕದನಕ್ಕೆ ವೇದಿಕೆಯಾಗುವ ಸಾಧ್ಯತೆ ಇದೆ. ಮಣಿಪುರದಲ್ಲಿ ಹೇರಲಾಗಿರುವ ರಾಷ್ಟ್ರಪತಿ ಆಡಳಿತ ವಿಸ್ತರಣೆ ಕುರಿತು ನಿರ್ಣಯ ಕೈಗೊಳ್ಳುವ ಸಾಧ್ಯತೆಯೂ ಇದೆ.
ಬಿಹಾರ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿರುವುದರ ಕುರಿತಂತೆ ಹಾಗೂ ಪರಮಾಣು ಇಂಧನ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶವನ್ನು ಸುಗಮಗೊಳಿಸುವ ಕಾನೂನು ಸೇರಿದಂತೆ ಪ್ರಮುಖ ಶಾಸನಗಳನ್ನು ತರುವ ಸರ್ಕಾರದ ಯೋಜನೆಗಳ ಮಧ್ಯೆ ಅಧಿವೇಶನವನ್ನು ಒಂದು ವಾರ ವಿಸ್ತರಿಸಲಾಗಿದೆ.
ಕಾಂಗ್ರೆಸ್ ಸಂಸದೀಯ ಕಾರ್ಯತಂತ್ರ ಕುರಿತು ಸೋನಿಯಾ ಗಾಂಧಿ ಅವರು ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಇತರರು ಭಾಗವಹಿಸುವ ನಿರೀಕ್ಷೆಯಿದೆ.