ನರಸಿಂಹ ರಾವ್
ಬೆಂಗಳೂರು: ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಅನುಪಾತದ ಅಡಿಯಲ್ಲಿ ಮಾಡಬೇಕಾದ ಪ್ರಾಥಮಿಕ ಮತ್ತು ಪ್ರೌಢಶಾಲಾ ಹೆಚ್ಚುವರಿ ಶಿಕ್ಷಕರ ವರ್ಗಾವಣೆಗೆ ಮತ್ತೆ ಬ್ರೇಕ್ ಬಿದ್ದಿದೆ. ಮೂವತ್ತು ಮಕ್ಕಳಿಗೆ ಓರ್ವ ಶಿಕ್ಷಕ ಇರಬೇಕು ಎಂಬ ನಿಯಮ ಇದೆ. ಪಟ್ಟಣದ ಅನೇಕ ಶಾಲೆಗಳಲ್ಲಿ 20 ಮಕ್ಕಳಿಗೆ ಓರ್ವ ಶಿಕ್ಷಕರಿದ್ದರೂ, ಗ್ರಾಮೀಣ ಪ್ರದೇಶಗಳಲ್ಲಿ ಈ ನಿಯಮ ಪೂರ್ತಿಯಾಗಿಲ್ಲ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ.
ಪಟ್ಟಣ ಪ್ರದೇಶಗಳ ಶಾಲೆಗಳಲ್ಲಿ ಇರುವ ಹೆಚ್ಚುವರಿ ಶಿಕ್ಷಕರನ್ನು ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ವರ್ಗಾವಣೆ ಮಾಡುವ ಪ್ರಕ್ರಿಯೆ ಹೆಚ್ಚುವರಿ ಶಿಕ್ಷಕರ ವರ್ಗಾವಣೆಗೆ ಇನ್ನೂ ಮಹೂರ್ತ ಕೂಡಿಬಂದಿಲ್ಲ. ಪ್ರತಿ ಎರಡು ವರ್ಷಕ್ಕೊಮ್ಮೆ ಈ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ನಡೆಯುತ್ತಿದ್ದು ಈ ಬಾರಿ ಕಳೆದ ಮೇ 29ರಂದು ವರ್ಗಾವಣೆ ಆರಂಭವಾಗಿ ಜುಲೈ 15 ಕ್ಕೆ ಎಲ್ಲ ಪ್ರಕ್ರಿಯೆಗಳು ಮುಗಿದು ಶಿಕ್ಷಕರು ನಿಯೋಜಿತ ಶಾಲೆಗಳಿಗೆ ಹಾಜರಾಗಬೇಕಿತ್ತು. ಆದರೆ ಕಳೆದ ಎರಡು ವಾರಗಳಿಂದ ವರ್ಗಾವಣೆಯ ಯಾವುದೇ ಪ್ರಕ್ರಿಯೆ ನಡೆಯದೇ ಇರುವುದು ವರ್ಗಾವಣೆ ಆಕಾಂಕ್ಷಿ ಶಿಕ್ಷಕರಿಗೆ ಬೇಸರ ತರಿಸಿದೆ.
ರಾಜ್ಯದಲ್ಲಿ ವಿದ್ಯಾರ್ಥಿ-ಶಿಕ್ಷಕರ ಅನುಪಾತಕ್ಕೆ ಹೋಲಿಸಿದರೆ 15 ಸಾವಿರಕ್ಕೂ ಹೆಚ್ಚುವರಿ ಶಿಕ್ಷಕರು ಇದ್ದಾರೆ. ರಾಜ್ಯದ ಎಲ್ಲ ಶಾಲೆಗಳಲ್ಲಿ ಸುಮಾರು 51 ಸಾವಿರ ಶಿಕ್ಷಕರ ಕೊರತೆ ಇದೆ. ಹೆಚ್ಚುವರಿ ಶಿಕ್ಷಕರನ್ನು ಕೊರತೆ ಇರುವ ಶಾಲೆಗಳಿಗೆ ಕಳುಹಿಸಬೇಕು ಎಂದು ಇಲಾಖೆ ಮನಸ್ಸು ಮಾಡಿತ್ತಾದರೂ ಅದಕ್ಕೆ ನೂರೆಂಟು ಅಡ್ಡಿ ಆತಂಕಗಳು ಬಂದೊದಗಿವೆ.
ಪಟ್ಟಣದಲ್ಲಿರುವ ಶಿಕ್ಷಕರು ಗ್ರಾಮೀಣ ಪ್ರದೇಶಗಳಿಗೆ ಹೋಗಬೇಕು ಎನ್ನುವ ವಲಯವಾರು ವರ್ಗಾವಣೆಯಲ್ಲೂ ಸಹ ಗೊಂದಲಗಳು ಉಂಟಾಗಿ ನ್ಯಾಯಾಲಯದ ಮೊರೆ ಹೋಗಿರುವ ಉದಾಹರಣೆಗಳೂ ಇವೆ. ಹೆಚ್ಚುವರಿ ಶಿಕ್ಷಕರ ವರ್ಗಾವಣೆಯೇನೂ ಕಡ್ಡಾಯ ವರ್ಗಾವಣೆ ಅಲ್ಲ. ಹೀಗಾಗಿ ಈ ವರ್ಗಾವಣೆ ನಡೆಯುವುದೇ ಅನುಮಾನ ಎಂದು ಕೆಲ ಶಿಕ್ಷಕರು ಹೇಳುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಸಂಖ್ಯೆ ಹೆಚ್ಚಾಗಿದೆ. ಮಕ್ಕಳ ಸಂಖ್ಯೆಗನುಗುಣವಾಗಿ ಶಿಕ್ಷಕರು ಇಲ್ಲ. ಬಹುತೇಕ ಕಡೆ ಒಬ್ಬರೇ ಶಿಕ್ಷಕರು 50 ಮಕ್ಕಳಿಗೆ ಪಾಠ ಹೇಳಬೇಕಾದ ಪರಿಸ್ಥಿತಿ ಬಂದಿದೆ. ದೊಡ್ಡ ಪಟ್ಟಣಗಳ ಹಲವು ಶಾಲೆಗಳಲ್ಲಿ 20 ಮಕ್ಕಳಿಗೆ ಓರ್ವ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇಷ್ಟೊತ್ತಿಗಾಗಲೇ ಹೆಚ್ಚುವರಿ ಶಿಕ್ಷಕರು ವರ್ಗಾವಣೆಗೊಂಡು ನಿಯೋಜಿತ ಶಾಲೆಗಳಿಗೆ ತೆರಳಬೇಕಿತ್ತು. ಆದರೆ ಈ ವರೆಗೂ ಆಗಿಲ್ಲ. ಆಗುವ ಯಾವ ಲಕ್ಷಣಗಳೂ ಇಲ್ಲ. ಹೀಗಾದರೆ ನಮ್ಮ ಮಕ್ಕಳಿಗೆ ಹೇಗೆ ಗುಣಮಟ್ಟದ ಶಿಕ್ಷಣ ಕೊಡಲು ಸಾಧ್ಯ? ಈ ಕುರಿತು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುವ ಅಗತ್ಯ ಇದೆ ಎಂದು ಗ್ರಾಮೀಣ ಪ್ರದೇಶದ ಪೋಷಕರು ಹೇಳುತ್ತಾರೆ.
ಪ್ರಕ್ರಿಯೆ ಮುಗಿಸಿ ಅನುಮತಿ ನೀಡುತ್ತೇವೆ: ಈಗಾಗಲೇ 20 ಸಾವಿರ ಶಿಕ್ಷಕರ ನೇಮಕಾತಿ ಅನುಮತಿಗಾಗಿ ಹಣಕಾಸು ಇಲಾಖೆಗೆ ಸಲ್ಲಿಸಲಾಗಿದೆ. ಆದರೆ ನೀವು ಮೊದಲು ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಪೂರ್ಣಗೊಳಿಸಿ ನಂತರ ನೇಮಕಾತಿಗೆ ಅನುಮತಿ ಕೊಡಲಾಗುತ್ತದೆ ಎಂದು ಹಣಕಾಸು ಇಲಾಖೆ ಹೇಳುತ್ತಿದೆ.
ಅತಿಥಿ ಶಿಕ್ಷಕರ ಎದೆಯಲ್ಲಿ ಡವಡವ: ರಾಜ್ಯದಲ್ಲಿ 51 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಅವರನ್ನು ಎಲ್ಲೆಡೆ ನಿಯೋಜನೆಯನ್ನೂ ಮಾಡಲಾಗಿದೆ. ಒಂದು ವೇಳೆ 15 ಸಾವಿರ ಹೆಚ್ಚುವರಿ ಶಿಕ್ಷಕರನ್ನು ವರ್ಗಾವಣೆ ಮಾಡಿದರೆ ಅವರು ಅತಿಥಿ ಶಿಕ್ಷಕರ ಸ್ಥಾನಕ್ಕೆ ಹೋಗಬೇಕು. ಆಗ ನಮ್ಮ ಪಾಡೇನು ಎನ್ನುವುದು ಅತಿಥಿ ಶಿಕ್ಷಕರ ಆತಂಕಕ್ಕೆ ಕಾರಣವಾಗಿದೆ.