Tamil Nadu: ಇಂಧನ ಸಾಗಿಸುತ್ತಿದ್ದ ರೈಲಿನಲ್ಲಿ ಬೆಂಕಿ: 8 ರೈಲುಗಳ ಸಂಚಾರ ಸ್ಥಗಿತ

0
49

ಚೆನ್ನೈ: ಇಂಧನ ಸಾಗಿಸುತ್ತಿದ್ದ ಟ್ಯಾಂಕ‌ರ್‌ನಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡ ಘಟನೆ ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಎಗತ್ತೂರು ಪ್ರದೇಶದಲ್ಲಿ ನಡೆದಿದೆ.

ಚೆನ್ನೈನಿಂದ ಬೆಂಗಳೂರಿಗೆ ಇಂಧನ ಸಾಗಿಸುತ್ತಿದ್ದ ಸರಕು ಸಾಗಣೆ ರೈಲಿನ ಬೆಂಕಿ ಕಾಣಿಸಿಕೊಂಡಿದ್ದು, ಚೆನ್ನೈ-ಅರಕ್ಕೋಣಂ ರೈಲು ಮಾರ್ಗದಲ್ಲಿ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಹೀಗಾಗಿ ಕೆಲ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ..

ಬೆಂಗಳೂರು, ಮೈಸೂರು ಹಾಗೂ ಕೊಯಮತ್ತೂರು ನಡುವೆ ಸಂಚರಿಸುವ ವಂದೇ ಭಾರತ್, ಶತಾಬ್ ಎಕ್ಸ್‌ಪ್ರೆಸ್ ಸೇರಿದಂತೆ ಎಂಟು ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ಅಲ್ಲದೇ ಕೆಲ ರೈಲುಗಳನ್ನು ಬೇರೆ ಮಾರ್ಗಕ್ಕೆ ತಿರುಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟು 8 ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ರದ್ದುಗೊಳಿಸಲಾಗಿದ್ದು, 5 ರೈಲುಗಳನ್ನು ಬೇರೆ ಮಾರ್ಗಕ್ಕೆ ಬದಲಾಯಿಸಲಾಗಿದೆ. ಇನ್ನು 8 ರೈಲುಗಳನ್ನು ಅಲ್ಪಾವಧಿಗೆ ತಡೆ ಹಿಡಿಯಲಾಗಿದೆ. ಈ ಘಟನೆಯಿಂದಾಗಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ರೈಲ್ವೆ ಅಧಿಕಾರಿಗಳು ಪರ್ಯಾಯ ವ್ಯವಸ್ಥೆಗಳನ್ನು ಕೈಗೊಂಡಿರುವುದಾಗಿ ತಿಳಿದು ಬಂದಿದೆ.

ಪ್ರಾಥಮಿಕ ವರದಿಗಳ ಪ್ರಕಾರ ರೈಲಿನ ಮೂರು ಬೋಗಿಗಳು ಹಳಿತಪ್ಪಿವೆ. ಈ ವೇಳೆ ಇಂಧನ ಸೋರಿಕೆಯಾಗಿ ರೈಲಿನ ಒಂದು ಟ್ಯಾಂಕರ್‌ಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದು, ಈ ಬೆಂಕಿ ಬೇಗನೆ ಪಕ್ಕದ ಟ್ಯಾಂಕರ್‌ಗಳಿಗೆ ಹರಡಿಕೊಂಡು ದೊಡ್ಡ ಜ್ವಾಲೆಗೆ ಕಾರಣವಾಗಿದೆ. ಇದರಿಂದಾಗಿಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.

ಅಗ್ನಿಶಾಮಕದಳದ ಸಿಬ್ಬಂದಿ ಸೇರಿ ಇತರೆ ತಂಡಗಳು ಬೆಂಕಿ ನಂದಿಸಲು ಕಾರ್ಯಾಚರಣೆ ನಡೆಸಿದ್ದು ರೈಲು ಸಂಚಾರ ಶೀಘ್ರ ಪುನರಾರಂಭ ಮಾಡಲಾಗುತ್ತದೆ ಎಂದು ದಕ್ಷಿಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

Previous articleನ್ಯಾಯ ವಿಳಂಬ: ಜಟಿಲ ಪ್ರಕ್ರಿಯೆ, ಕಠಿಣ ಮನಸ್ಥಿತಿ
Next articleMatru Vandana Yojana: ಮಾತೃ ವಂದನೆ ಹೆಸರಲ್ಲಿ ಗರ್ಭಿಣಿಯರಿಗೆ ಟೋಪಿ!