ರಸ್ತೆಗಿಳಿದ ದಾವಣಗೆರೆ ಡಿಸಿ: ಬೈಕ್ ಸವಾರರ ಮೇಲೆ ಬಿತ್ತು ಕೇಸ್!

ಒನ್ ವೇನಲ್ಲಿ ಬೈಕ್‌ನಲ್ಲಿ ಬರುತ್ತಿದ್ದ ಸವಾರನಿಗೆ ‘ಹೀಗೆ ಬರಬಾರದು’ ಎಂದು ಹೇಳಿದ್ದ ದಾವಣಗೆರೆ ಜಿಲ್ಲಾಧಿಕಾರಿಗಳಿಗೆ ಬೈಕ್ ಸವಾರ “ಕೇಳೋದಕ್ಕೆ ನೀನ್ಯಾರು?” ಎಂದು ಹೇಳಿದ್ದ ಘಟನೆ ನಡೆದಿತ್ತು. ಜಿಲ್ಲಾಧಿಕಾರಿಗಳ ಸೂಚನೆಯಂತೆ ಬೈಕ್ ಸವಾರನನ್ನು ಪತ್ತೆ ಹಚ್ಚಿದ್ದ ಪೊಲೀಸರು 2 ಸಾವಿರ ರೂ.ದಂಡವನ್ನು ಹಾಕಿದ್ದರು.

ಈಗ ಜಿಲ್ಲಾಧಿಕಾರಿ ಜಿ. ಎಂ. ಗಂಗಾಧರಸ್ವಾಮಿ ಸಂಚಾರ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಬಗ್ಗೆ ಅರಿವು ಮೂಡಿಸಲು, ಅಪಘಾತ ಪ್ರಮಾಣವನ್ನು ತಗ್ಗಿಸಲು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಮಂಗಳವಾರ ರಸ್ತೆಗಿಳಿದ ಅವರು ಸಂಚಾರಿ ನಿಯಮ ಉಲ್ಲಂಘನೆ ಮಾಡುತ್ತಿದ್ದ 30ಕ್ಕೂ ಹೆಚ್ ಬೈಕ್‌ಗಳನ್ನು ವಶಕ್ಕೆ ಪಡೆದು ಸಂಚಾರಿ ದಕ್ಷಿಣ ವಲಯ ಠಾಣೆಗೆ ಹಸ್ತಾಂತರ ಮಾಡಿದರು.

ಜಿಲ್ಲಾಧಿಕಾರಿಗಳು ಸಂಚಾರಿ ಪೊಲೀಸರ ಜೊತೆ ಬೆಳಗ್ಗೆ 6 ರಿಂದ ಮಧ್ಯಾಹ್ನದ 12ರ ತನಕ ಡೆಂಟಲ್ ಕಾಲೇಜು ರಸ್ತೆ, ಬಾಯ್ಸ್ ಹಾಸ್ಟೆಲ್, ಕ್ರೀಡಾ ನಿಲಯ, ಎಂಸಿಸಿ ‘ಬಿ’ ಬ್ಲಾಕ್, ಶಾಮನೂರು ವರ್ತುಲ ರಸ್ತೆಯಲ್ಲಿ ಕಾರ್ಯಾಚರಣೆ ಕೈಗೊಂಡರು. ವಾಹನ ಸವಾರರಿಗೆ ನಿಯಮ ಪಾಲನೆ ಮಾಡುವ ಕುರಿತು ಅರಿವು ಮೂಡಿಸಿದರು.

ಜಿಲ್ಲಾಧಿಕಾರಿ ಜಿ. ಎಂ. ಗಂಗಾಧರಸ್ವಾಮಿ ಅವರ ವಿಶೇಷ ಕಾರ್ಯಾಚರಣೆಯ ವೇಳೆ ಕೆಲವು ಕಾಲೇಜು ವಿದ್ಯಾರ್ಥಿಗಳು ನಂಬರ್ ಪ್ಲೇಟ್ ಇಲ್ಲದ ಬೈಕ್ ಓಡಿಸುತ್ತಿರುವುದು ಪತ್ತೆಯಾಯಿತು. ಡಿಎಲ್‌ ಇದ್ದರೂ ಸಹ ನಂಬರ್ ಪ್ಲೇಟ್ ಇಲ್ಲದ ಬೈಕ್‌ಗಳನ್ನು ಪತ್ತೆಹಚ್ಚಿ ಅವುಗಳನ್ನು ವಶಕ್ಕೆ ಪಡೆಯಲಾಗಿದೆ.

ಸಂಚಾರಿ ನಿಯಮದ ಕುರಿತು ಅರಿವು ಮೂಡಿಸಿ ನಂಬರ್ ಪ್ಲೇಟ್ ಇಲ್ಲದ ವಾಹನ ಚಲಾಯಿಸುವುದು ಮೋಟಾರ್ ವಾಹನ ಕಾಯಿದೆಯ ಸೆಕ್ಷನ್ 177ರ ಉಲ್ಲಂಘನೆಯಾಗಿದ್,ದು ದಂಡನೆಗೆ ಅವಕಾಶವಿದೆ ಎಂದು ವಿವರಣೆ ಕೊಡಲಾಯಿತು.

ವಾಹನಗಳಿಗೆ ಕಾನೂನು ಬದ್ದತೆ, ಗುರುತು ಮತ್ತು ಭದ್ರತೆಗೆಗಾಗಿ ಮತ್ತು ಸಂಚಾರಿ ನಿಯಮಗಳ ಉಲ್ಲಂಘನೆ ಪತ್ತೆ, ಕಳ್ಳತನ ಪತ್ತೆ ಮಾಡಲು ಪ್ರತಿ ವಾಹನ ನಂಬರ್ ಪ್ಲೇಟ್ ಹೊಂದಿರಬೇಕು. ನಂಬರ್ ಪ್ಲೇಟ್ ಅಳವಡಿಕೆ ಕಾನೂನುಬದ್ದವಾಗಿದೆ. ನಂಬರ್ ಪ್ಲೇಟ್ ಇಲ್ಲದ ವಾಹನಗಳ ಮಾಲೀಕರಿಗೆ ಕೋರ್ಟ್‌ ಮೂಲಕ ನೋಟಿಸ್ ನೀಡಲು ಡಿಸಿ ಸೂಚನೆ ಕೊಟ್ಟರು.

ಜೂನ್‌ 20ರಂದು ಜಿಲ್ಲಾಧಿಕಾರಿ ಜಿ. ಎಂ. ಗಂಗಾಧರಸ್ವಾಮಿ ಅವರಿಗೆ ಎಸ್. ನಿಜಲಿಂಗಪ್ಪ ಬಡಾವಣೆಯ ಬಳಿಕ ಒನ್‌ ವೇನಲ್ಲಿ ಬಂದ ಬೈಕ್ ಸವಾರ ಏಕವಚನದಲ್ಲಿಯೇ ಅವಾಜ್ ಹಾಕಿದ್ದ. ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದರು.

ಬೈಕ್ ಸವಾರನನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದರು. ನಗರದಲ್ಲಿ ವಾಹನ ಸವಾರರಿಗೆ ಸಂಚಾರಿ ನಿಯಮ ಪಾಲನೆ ಕುರಿತು ಮತ್ತು ಅಪಘಾತಗಳನ್ನು ತಡೆಗಟ್ಟಲು ವಿಶೇಷ ಕಾರ್ಯಾಚರಣೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ಕೊಟ್ಟಿದ್ದರು.