ಸಂಪಾದಕೀಯ: ಟ್ರಂಪ್ ಸುಂಕ ಸಮರ ಭಾರತಕ್ಕೆ ತಲೆನೋವು

0
53

ಕೊನೆಗೂ ಟ್ರಂಪ್ ಭಾರತದ ಮೇಲೆ ಶೇ. 25ರಷ್ಟು ಸುಂಕ ವಿಧಿಸಿರುವುದಲ್ಲದೆ ದಂಡವನ್ನೂ ಹಾಕುವುದಾಗಿ ಬೆದರಿಕೆವೊಡ್ಡಿದ್ದಾರೆ. ಆಗಸ್ಟ್ 1 ರಿಂದ ಇದು ಜಾರಿಗೆ ಬರಲಿದೆ. ಮೋದಿ-ಟ್ರಂಪ್ ಸ್ನೇಹ ಉಪಯೋಗಕ್ಕೆ ಬಂದಂತೆ ಕಂಡು ಬಂದಿಲ್ಲ. ಟ್ರಂಪ್ ವ್ಯಾಪಾರದ ವಿಷಯದಲ್ಲಿ ಬಹಳಕಟ್ಟುನಿಟ್ಟು. ಯಾವುದಕ್ಕೂ ಬಗ್ಗುವುದಿಲ್ಲ. ಭಾರತ ಈ ಅವಧಿಯಲ್ಲೇ ವ್ಯಾಪಾರ ಒಪ್ಪಂದಗಳನ್ನು ಕುದುರಿಸಿಕೊಳ್ಳಬೇಕಿತ್ತು. ಈಗಲೂ ಕಾಲ ಮಿಂಚಿಲ್ಲ. ಮಾತುಕತೆಯ ಬಾಗಿಲು ಮುಚ್ಚಿಹೋಗಿಲ್ಲ.

ಅಮೆರಿಕ ಕೂಡ ಭಾರತದ ಮಾರುಕಟ್ಟೆಯನ್ನು ಕಳೆದುಕೊಳ್ಳಲು ಇಚ್ಛಿಸುವುದಿಲ್ಲ. ಟ್ರಂಪ್ ಕೋಪ ಇರುವುದು ರಷ್ಯಾ ಮೇಲೆ. ಭಾರತ ಕಚ್ಚಾತೈಲವನ್ನು ಹೆಚ್ಚಾಗಿ ರಷ್ಯಾದಿಂದ ಖರೀದಿ ಮಾಡುತ್ತದೆ. ಅಲ್ಲದೆ ಸೇನೆಗೆ ಬೇಕಾದ ಸಾಮಗ್ರಿಗಳನ್ನು ರಷ್ಯಾದಿಂದ ಪಡೆಯುತ್ತಿದೆ. ಇದಕ್ಕೆ ಕಾರಣವೂ ಇದೆ. ಅಮೆರಿಕಕ್ಕೆ ಹೋಲಿಸಿದಾಗ ಸಾಮಗ್ರಿಗಳ ದರ ಕಡಿಮೆ. ಅಲ್ಲದೆ ರಷ್ಯಾ ತೈಲ ಕೂಡ ಕಡಿಮೆ ದರದಲ್ಲಿ ಲಭಿಸಿದೆ.

ಅಮೆರಿಕ ಮತ್ತು ನ್ಯಾಟೋ ದೇಶಗಳು ರಷ್ಯಾ ಮೇಲೆ ಆರ್ಥಿಕ ದಿಗ್ಬಂಧನ ಮುಂದುವರಿಸಿದೆ. ಭಾರತ ಮಾತ್ರ ರಷ್ಯಾದೊಂದಿಗೆ ವ್ಯಾಪಾರ ಸಂಬಂಧವನ್ನು ಕಡಿದುಕೊಂಡಿಲ್ಲ. ಇದು ಟ್ರಂಪ್ ಕಣ್ಣು ಕೆಂಪಗಾಗಿಸಿದೆ. ಅಲ್ಲದೆ ಬ್ರಿಕ್ ಸಂಸ್ಥೆಯಲ್ಲಿ ಭಾರತ ಇರುವುದು ಅಮೆರಿಕಕ್ಕೆ ಬೇಕಿಲ್ಲ. ಇದು ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ರಾಜಕೀಯ ತಾಕಲಾಟ. ಇದರಿಂದ ಅಮೆರಿಕ ಸುಂಕವನ್ನು ಹೆಚ್ಚಿಸುವ ಮೂಲಕ ರಷ್ಯಾದೊಂದಿಗೆ ಬೇರೆ ದೇಶಗಳು ಸಂಬಂಧ ಕಡಿತಗೊಳಿಸಬೇಕೆಂದು ಬಯಸುತ್ತಿದೆ. ಆದರೆ ಇದು ಟ್ರಂಪ್ ತಿಳಿದುಕೊಂಡಷ್ಟು ಸರಳವಾಗಿಲ್ಲ.

ಅಮೆರಿಕ ಈಗ ವಿಧಿಸಿರುವ ಸುಂಕ ಜಾರಿಗೆ ಬಂದಲ್ಲಿ ಭಾರತದ ಒಟ್ಟಾರೆ ಜಿಡಿಪಿಯಲ್ಲಿ ಶೇ. 2.2 ರಷ್ಟು ಕಡಿತಗೊಳ್ಳುವ ಅಪಾಯವಿದೆ. ಭಾರತ ಅಮೆರಿಕದೊಂದಿಗೆ ಒಟ್ಟು 87 ಬಿಲಿಯನ್ ಡಾಲರ್ ವ್ಯಾಪಾರ ಹೊಂದಿದೆ. ಇದರಲ್ಲಿ ಪ್ರಮುಖ ಔಷಧ ಉದ್ಯಮ. ಸನ್ ಫಾರ್ಮಾ ಮತ್ತು ಸಿಪ್ಲಾ ಕಂಪನಿ ಅಮೆರಿಕದೊಂದಿಗೆ ಹೆಚ್ಚು ವ್ಯಾಪಾರ ಸಂಬಂಧ ಹೊಂದಿದೆ. ಚೀನಾಗಿಂತ ಹೆಚ್ಚು ಭಾರತದ ಐಫೋನ್‌ಗಳು ಅಮೆರಿಕಕ್ಕೆ ಹೋಗುತ್ತಿದೆ. ವಜ್ರ ಮತ್ತು ಆಭರಣಗಳು ವಾರ್ಷಿಕ 10 ಬಿಲಿಯನ್ ಡಾಲರ್ ಮಾರುಕಟ್ಟೆ ಹೊಂದಿವೆ. ಸಿದ್ಧ ಉಡುಪು, ಜವಳಿ ಉದ್ಯಮದ ಮೇಲೆ ಪ್ರಭಾವ ಆಗಲಿದೆ. ರಷ್ಯಾ ತೈಲದ ಮೇಲೆ ಕಣ್ಣು ಬಿದ್ದಿರುವುದರಿಂದ ರಿಲಯನ್ಸ್ ಮತ್ತು ಐಒಸಿಗೆ ಸಮಸ್ಯೆ ಆಗಲಿದೆ.

ಇದಕ್ಕೆ ಪರಿಹಾರ ಎಂದರೆ ಕೂಡಲೇ ಅಮೆರಿಕದೊಂದಿಗೆ ನೇರ ಮಾತುಕತೆ ನಡೆಸುವುದು. ಯೂರೋಪ್, ಆಸಿಯಾನ್ ದೇಶಗಳು, ಆಫ್ರಿಕಾದೊಂದಿಗೆ ಹೆಚ್ಚು ವ್ಯಾಪಾರ ಸಂಬಂಧ ಬೆಳೆಸುವುದು. ಸಣ್ಣ ರಫ್ತುದಾರರಿಗೆ ಕೇಂದ್ರ ಆರ್ಥಿಕ ನೆರವು ನೀಡಬೇಕು. ಅಗತ್ಯ ಎನಿಸಿದರೆ ರಿಸರ್ವ್ ಬ್ಯಾಂಕ್ ಬಡ್ಡಿ ದರವನ್ನು ಪರಿಷ್ಕರಿಸಬೇಕು. ಭಾರತದ ಕಂಪನಿಗಳನ್ನು ಸಾಧ್ಯವಾದರೆ ಅಮೆರಿಕಕ್ಕೆ ಸ್ಥಳಾಂತರಿಸುವುದು. ಕೆಲವು ಕಂಪನಿಗಳು ಈಗಾಗಲೇ ವಿಯೆಟ್ನಾಂಗೆ ಹೋಗಿವೆ. ಅಲ್ಲಿ ಸುಂಕ ಶೇ. 20. ಅಲ್ಲದೆ ಚೀನಾದೊಂದಿಗೆ ಉತ್ತಮ ಸಂಬಂಧವಿದೆ.

ಇದರೊಂದಿಗೆ ಭಾರತ ತನ್ನ ಸ್ವದೇಶಿ ಮಾರುಕಟ್ಟೆಯನ್ನು ಬಲಪಡಿಸಬೇಕು. ಆಗ ಅಮೆರಿಕ ಸಂಧಾನಕ್ಕೆ ಬರುವುದು ಅನಿವಾರ್ಯವಾಗಲಿದೆ. ಅಮೆರಿಕ ತನ್ನ ಕೃಷಿ ಉತ್ಪನ್ನಗಳನ್ನು ಭಾರತದಲ್ಲಿ ಮಾರಾಟ ಮಾಡಲು ಬಯಸುತ್ತಿದೆ. ಇದಕ್ಕೆ ಅವಕಾಶ ನೀಡಿದರೆ ಭಾರತದ ಕೃಷಿ ಸಂಪತ್ತು ಹಾಳಾಗುತ್ತದೆ ಎಂದು ಅಧಿಕಾರಿಗಳೇ ಒಪ್ಪುತ್ತಿಲ್ಲ. ಅಮೆರಿಕದ ಈಗಿನ ಸುಂಕದ ನೀತಿ ಮುಂದುವರಿದಲ್ಲಿ ಭಾರತದ ಜಿಡಿಪಿ ಮೇಲೆ ಶೇ. 0,2-0.5 ಪ್ರಭಾವ ಬೀರಲಿದೆ. ಇದನ್ನು ರಾಜತಾಂತ್ರಿಕ ಸಂಬಂಧಗಳ ಮೂಲಕ ಸರಿತೂಗಿಸಬೇಕಿದೆ. ಹಿಂದೆ 2018-19 ರಲ್ಲಿ ಅಮೆರಿಕ ಭಾರತದ ಉಕ್ಕು, ಅಲ್ಯೂಮಿನಿಯಂ ಮೇಲೆ ಸುಂಕ ವಿಧಿಸಿತ್ತು ಮಾತುಕತೆ ಮೂಲಕ ಅದು ಕರಗಿಹೋಯಿತು. 2020ರಲ್ಲೂ ಸುಂಕ ಏರಿಕೆ ಪ್ರಯತ್ನ ನಡೆದಿತ್ತು.

ಭಾರತದ ಸ್ವದೇಶಿ ಮಾರುಕಟ್ಟೆ ಸಬಲವಾಗಿರುವುದರಿಂದ ಇವುಗಳ ಪ್ರಭಾವ ಕಡಿಮೆ. ಈಗಲೂ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಬಹುದು ಎಂಬ ಆಶಾಭಾವನೆ ಮೂಡಿದೆ. ಏನೇ ಸುಂಕ ವಿಧಿಸಿದರೂ ಭಾರತದ ಮಾರುಕಟ್ಟೆಯ ಮೇಲೆ ಎಲ್ಲ ದೇಶಗಳ ಕಣ್ಣಿರುವುದಂತೂ ನಿಜ. ಅದರಲ್ಲೂ ಭಾರತದ ಸೇನೆಗೆ ಬೇಕಾದ ಸಾಮಗ್ರಿಗಳನ್ನು ಸರಬರಾಜು ಮಾಡುವುದು ರಷ್ಯಾದ ಕೈಯಲ್ಲಿದ್ದು. ಅದನ್ನು ತನ್ನ ವಶಕ್ಕೆ ಪಡೆದುಕೊಳ್ಳಬೇಕೆಂಬುದು ಅಮೆರಿಕದ ತವಕ. ಅದಕ್ಕಾಗಿ ಸುಂಕದ ಸಮರವನ್ನು ಬಳಸಿಕೊಳ್ಳುತ್ತಿದೆ. ಅದರೆ ಅದಕ್ಕೆ ಬೇಕಿರುವುದು ಭಾರತದ ಮಾರುಕಟ್ಟೆಯೇ ಹೊರತು ಸುಂಕವಲ್ಲ. ಇದು ಭಾರತಕ್ಕೂ ಗೊತ್ತಿದೆ. ಪಹಲ್ಗಾಮ್ ಪ್ರಕರಣದ ನಂತರ ಭಾರತದ ಶಕ್ತಿ ಏನು ಎಂಬುದು ಎಲ್ಲ ದೇಶಗಳಿಗೆ ತಿಳಿದಿದೆ. ಅದರಿಂದ ಅಮೆರಿಕ ತನ್ನ ಸಮರ ವ್ಯಾಪಾರವನ್ನು ವೃದ್ಧಿಸಿಕೊಳ್ಳಲು ತವಕ ಪಡುತ್ತಿರುವುದು ಸುಸ್ಪಷ್ಟ. ತನ್ನ ವ್ಯಾಪಾರಕ್ಕಾಗಿ ಪಾಕ್ ಎತ್ತಿಕಟ್ಟುವ ಕೆಲಸವನ್ನೂ ಮಾಡುತ್ತಿದೆ. ಟ್ರಂಪ್‌ಗೆ ಬೇಕಿರುವುದು ವ್ಯಾಪಾರವೇ ಹೊರತು ಸುಂಕವಲ್ಲ. ಅದರಿಂದ ಸಂಧಾನದ ಬಾಗಿಲು ಇಷ್ಟು ಬೇಗ ಮುಚ್ಚುವುದಿಲ್ಲ.

Previous articleಕನ್ನಡ ಕಡ್ಡಾಯಕ್ಕೆ ವಿರೋಧ: ‘ಮಹಾ’ ಸಿಎಂಗೆ ಮೊರೆ ಹೋದ MES
Next articleLPG ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆ: ಆಗಸ್ಟ್ 1ರಿಂದಲೇ ಜಾರಿ

LEAVE A REPLY

Please enter your comment!
Please enter your name here