ಯಾವುದೇ ಕ್ಷಣದಲ್ಲಾದ್ರೂ ಸರ್ಕಾರ ಪತನ: ಬಿಜೆಪಿ ಮಾಜಿ ಸಿಎಂ ಭವಿಷ್ಯ

0
85

ಹುಬ್ಬಳ್ಳಿ: “ಮುಖ್ಯಮಂತ್ರಿ ಸ್ಥಾನಕ್ಕಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೊಡ್ಡಮಟ್ಟದಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ತಿಳಿದ ಸಿದ್ದರಾಮಯ್ಯ ಮೈಸೂರಿನಲ್ಲಿ ಸರ್ಕಾರದ ಸಾಧನ ಸಮಾವೇಶದ ಹೆಸರಲ್ಲಿ, ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಇಬ್ಬರ ಮಧ್ಯೆ ತೀವ್ರ ಗುದ್ದಾಟ ಏರ್ಪಟ್ಟಿದೆ. ಯಾವುದೇ ಸಂದರ್ಭದಲ್ಲಿ ಸರ್ಕಾರ ಪತನವಾಗಬಹುದು” ಎಂದು ಸಂಸದ ಜಗದೀಶ ಶೆಟ್ಟರ್ ಅಭಿಪ್ರಾಯಪಟ್ಟರು.

ಸುದ್ದಿಗಾರರಗೊಂದಿಗೆ ಮಾತನಾಡಿದ ಅವರು, “ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಸಿದ್ದರಾಮಯ್ಯ ತಂತ್ರಗಾರಿಕೆ ನಡೆಸುತ್ತಿದ್ದರೆ ತಾನು ಮುಖ್ಯಮಂತ್ರಿಯಾಗಲೇಬೇಕು ಎಂದು ಡಿ.ಕೆ. ಶಿವಕುಮಾರ್ ಹರಸಾಹಪಡುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ದೊಡ್ಡಮಟ್ಟದಲ್ಲಿ ಮುಖ್ಯಮಂತ್ರಿಯಾಗಲು ಪ್ರಯತ್ನ ಮಾಡುತ್ತಿದ್ದಾರೆ. ಮೈಸೂರು ಸಮಾವೇಶದಲ್ಲಿ ಅಸಮಾಧಾನಗೊಂಡ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಭಾಷಣ ಮಾಡುವ ಮೊದಲೇ ವೇದಿಕೆಯಿಂದ ನಿರ್ಗಮಿಸಿದರು. ಇವರಿಬ್ಬರ ಗುದ್ದಾಟದಿಂದ ಸರ್ಕಾರ ಐದು ವರ್ಷ ಪೂರ್ಣಗೊಳಿಸುವುದು ಅನುಮಾನವಾಗಿದೆ” ಎಂದು ಭವಿಷ್ಯ ನುಡಿದರು.

“ಮನೆಯಲ್ಲಿ ಕುಳಿತಿರುವವರಿಗೆ ಸ್ವಾಗತ ಮಾಡಲು ಆಗುವುದಿಲ್ಲ ಎನ್ನುವ ಮೂಲಕ ಸಿದ್ದರಾಮಯ್ಯ ಬಹಿರಂಗವಾಗಿಯೇ ಡಿ.ಕೆ. ಶಿವಕುಮಾರ್ ಅವರಿಗೆ ಸವಾಲ್ ಹಾಕಿದ್ದಾರೆ. ಹೈಕಮಾಂಡ್ ಕೊಟ್ಟ ಮಾತಿನಂತೆ ನಡೆದುಕೊಳ್ಳುವುದೋ, ಇಲ್ಲವೋ ಎನ್ನುವ ಸಂಶಯ ಡಿ.ಕೆ. ಶಿವಕುಮಾರ ಅವರನ್ನು ಕಾಡುತ್ತಿದೆ” ಎಂದು ಹೇಳಿದರು.

ಕುರ್ಚಿಗಾಗಿ ಅಭಿವೃದ್ಧಿ ಮರೆತಿದ್ದಾರೆ: “ಕುರ್ಚಿಗಾಗಿ ನಡೆಯುತ್ತಿರುವ ಆಂತರಿಕ ಭಿನ್ನಾಭಿಪ್ರಾಯದಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಕಾನೂನು ಸುವ್ಯವಸ್ಥೆ ಹದೆಗೆಟ್ಟಿದೆ. ಮುಂದಿನ ತಿಂಗಳು ನಡೆಯಲಿರುವ ಅಧಿವೇಶನದಲ್ಲಿ ಶಾಸಕರು ಗಲಾಟೆ ಮಾಡಬಾರದು ಎಂದು 50 ಕೋಟಿ ರೂ. ಅನುದಾನ ನೀಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಸರ್ಕಾರದ ಖಜಾನೆ ಖಾಲಿಯಾಗಿದ್ದು, ಸಣ್ಣ ಹಾಗೂ ಬೀದಿ ವ್ಯಾಪಾರಸ್ಥರಿಂದಲೂ ಹಣ ವಸೂಲಿಗೆ ಮುಂದಾಗಿದ್ದಾರೆ” ಎಂದು ಆರೋಪಿಸಿದರು.

ಸುರ್ಜೇವಾಲ್ ಸೂಪರ್ ಸಿಎಂ ಬಿಲ್ಡಪ್: “ಎಐಸಿಸಿ ಕಾರ್ಯದರ್ಶಿ ರಣದೀಪ್‌ಸಿಂಗ್ ಸುರ್ಜೇವಾಲ್ ಅವರು ರಾಜ್ಯ ಕಾಂಗ್ರೆಸ್‌ನ ಉಸ್ತುವಾರಿಯಾಗಿ ಕೆಲಸ ಮಾಡಬೇಕೇ ಹೊರತು, ಸರ್ಕಾರದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ಶಾಸಕರಿಗೆ ಅನುದಾನ ಕೊಡಿಸುವುದು, ಸಚಿವರ ಕಾರ್ಯವೈಖರಿ ಕುರಿತು ಪರಿಶೀಲನೆ ನಡೆಸುವುದು ಅವರ ಕೆಲಸವಲ್ಲ. ಅದು ಸಂವಿಧಾನ ಬಾಹಿರ ನಡೆಯಾಗಿದೆ. ತಾವೇ ಸೂಪರ್ ಸಿಎಂ ಎನ್ನುವ ಹಾಗೆ ವರ್ತಿಸುತ್ತಿದ್ದಾರೆ” ಎಂದು ಸಂಸದ ಶೆಟ್ಟರ್ ಆರೋಪಿಸಿದರು.

Previous articleರೆಡ್ಡಿ-ರಾಮುಲು ಒಗ್ಗಟ್ಟು ಪ್ರದರ್ಶನ: ಮುನಿಸು ಮರೆತು ಒಂದಾದ ಸ್ನೇಹಿತರು
Next articleಭಗವಂತ ಖೂಬಾ ನನ್ನ ವಿರೋಧಿ ʻಟೀಮ್‌ ಕ್ಯಾಪ್ಟನ್ʼ

LEAVE A REPLY

Please enter your comment!
Please enter your name here