TCS: ಉದ್ಯೋಗ ಕಡಿತದ ಬಳಿಕ ಟಿಸಿಎಸ್‌ನಿಂದ ಮತ್ತೊಂದು ಸುದ್ದಿ

0
102

ಬೆಂಗಳೂರು; ಭಾರತದ ಅತಿ ದೊಡ್ಡ ಐಟಿ ಕಂಪನಿಗಳಲ್ಲಿ ಒಂದಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) 12 ಸಾವಿರಕ್ಕೂ ಅಧಿಕ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸುವ ಸುದ್ದಿ ಐಟಿ ವಲಯದಲ್ಲಿ ಸಂಚಲನ ಮೂಡಿಸಿದೆ. ಈಗ ಕಂಪನಿ ಕಡೆಯಿಂದ ಮತ್ತೊಂದು ಸುದ್ದಿ ಬಂದಿದ್ದು, ಹಿರಿಯ ಉದ್ಯೋಗಿಗಳಿಗೆ ಸಂಕಷ್ಟ ತಂದಿದೆ.

Economic Times ಈ ಕುರಿತು ವಿವರವಾದ ವರದಿಯನ್ನು ಪ್ರಕಟಿಸಿದೆ. ಟಿಸಿಎಸ್ ವಿಶ್ವದಾದ್ಯಂತ ಅನುಭವಿ ಟೆಕ್ಕಿಗಳ ನೇಮಕಾತಿಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಿದೆ. ಅಲ್ಲದೇ ವಾರ್ಷಿಕ ವೇತನ ಹೆಚ್ಚಳವನ್ನು ಸಹ ತಡೆಹಿಡಿಯಲಿದೆ ಎಂದು ಹೇಳಿದೆ.

ವಿಶ್ವದಾದ್ಯಂತ ಶೇ 2ರಷ್ಟು ಉದ್ಯೋಗಿಗಳ ಸಂಖ್ಯೆ ಕಡಿತಗೊಳಿಸುವ ತೀರ್ಮಾನ ಪ್ರಕಟಿಸಿದ್ದ ಟಿಸಿಎಸ್ 12 ಸಾವಿರ ಉದ್ಯೋಗವನ್ನು ಭಾರತದಲ್ಲಿ ಕಡಿತ ಮಾಡುವ ವಿಚಾರದಲ್ಲಿ ಸುದ್ದಿ ಮಾಡಿತ್ತು. ಈಗ ವೇತನ ಹೆಚ್ಚಳ, ಅನುಭವಿಗಳ ನೇಮಕಾತಿಗೆ ತಡೆ ಹಾಕಿದೆ.

ಹಲವು ನಿಯಮಗಳ ಬದಲಾವಣೆ: ಟಿಸಿಎಸ್ ತನ್ನ ಆಂತರಿಕ ಆಡಳಿತದಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ. ಬೆಂಚ್ ನಿಯಮವನ್ನು ಪರಿಷ್ಕರಣೆ ಮಾಡಿದ್ದು, ಬೆಂಚ್‌ನಲ್ಲಿರುವ ಉದ್ಯೋಗಿಗಳು 35 ದಿನದಲ್ಲಿ ಹೊಸ ಪ್ರಾಜೆಕ್ಟ್‌ ಹುಡುಕಿಕೊಳ್ಳಬೇಕು ಇಲ್ಲವೇ ಕಂಪನಿಯಿಂದ ಹೊರ ಹೋಗಬೇಕು ಎಂದು ಸೂಚಿಸಿದೆ.

ವರದಿಗಳ ಪ್ರಕಾರ ಪುಣೆ, ಹೈದರಾಬಾದ್, ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ಈಗಾಗಲೇ ಬೆಂಚ್‌ನಲ್ಲಿರುವ ಉದ್ಯೋಗಿಗಳನ್ನು ಮನೆಗೆ ಕಳಿಸಲಾಗುತ್ತಿದೆ. ಹೊಸ ನಿಯಮಗಳ ಕುರಿತು ಈಗಾಗಲೇ ಆಂತರಿಕ ಸಂದೇಶಗಳ ಮೂಲಕ ಉದ್ಯೋಗಿಗಳಿಗೆ ಮಾಹಿತಿ ನೀಡಲಾಗಿದೆ.

ವಿಶ್ವದ ವಿವಿಧ ದೇಶಗಳ ಆರ್ಥಿಕ ನೀತಿಗಳು, ಕಂಪನಿಯ ವೆಚ್ಚವನ್ನು ಕಡಿಮೆ ಮಾಡಲು ಹಲವಾರು ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಕಂಪನಿ ಹೇಳಿದೆ. ಹೊಸ ನೇಮಕಾತಿಯ ದಿನಗಳನ್ನು 65 ದಿನಗಳಿಗೆ ಏರಿಸಲಾಗಿದೆ.

ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಕಂಪನಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಬೇಕಿದೆ. ಕಾರ್ಯಾಚರಣೆ ವಿಧಾನವನ್ನು ಪರಿಷ್ಕರಣೆ ಮಾಡಲಾಗುತ್ತದೆ ಎಂದು ಕಂಪನಿಯ ಸಿಒಇ ಜೂನ್‌ನಲ್ಲಿಯೇ ತಿಳಿಸಿದ್ದರು. 2026ರ ಮೊದಲ ತ್ರೈಮಾಸಿಕದಲ್ಲಿ ಕಂಪನಿ 9.4ರಷ್ಟು ಲಾಭವನ್ನುಗಳಿಕೆ ಮಾಡಿತ್ತು.

12 ಸಾವಿರ ಉದ್ಯೋಗಿಗಳ ಕಡಿತ ಘೋಷಣೆ ಮಾಡಿದ ಬಳಿಕ ಕಂಪನಿಯ ಷೇರುಗಳು ಶೇ 12ರಷ್ಟು ಕುಸಿತ ಕಂಡಿದ್ದವು. ಎಐ ಅನ್ನು ಕಾರ್ಯ ವಿಧಾನದಲ್ಲಿ ಅಳವಡಿಕೆ ಮಾಡಿಕೊಳ್ಳಲು ಕಂಪನಿ ಮುಂದಾಗಿದ್ದು, ಅದರ ಭಾಗವಾಗಿಯೇ ಉದ್ಯೋಗ ಕಡಿತ ಮಾಡಲಾಗುತ್ತಿದೆ ಎಂಬ ಸುದ್ದಿಗಳು ಇವೆ.

ಸಿಇಒ ಕೃತಿ ವಾಸನ್ ಮಾತನಾಡಿ, “ತಂತ್ರಜ್ಞಾನ ಬಳಕೆ, ಕೃತಕ ಬುದ್ಧಿಮತ್ತೆಗಳ ಬಳಕೆ ಹೆಚ್ಚಾಗುತ್ತಿದೆ. ಇದು ಈಗ ಮತ್ತು ಮುಂದಿನ ದಿನಗಳಲ್ಲಿ ಉದ್ಯಮದ ಸ್ವರೂಪ ಬದಲಿಸಲಿವೆ. ಆದ್ದರಿಂದ ನಾವು ಉದ್ಯೋಗಿಗಳಿಗೆ ಬೇಕಾದ ಕೌಶಲ್ಯಗಳೇನು?, ಅವರ ಸಾಮರ್ಥ್ಯಗಳೇನು? ಎಂದು ತಿಳಿದು ಕೆಲಸ ಮಾಡಿಸಲಿದ್ದೇವೆ” ಎಂದು ಹೇಳಿದ್ದರು.

ಟಿಸಿಎಸ್ ಜಾಗತಿಕವಾಗಿ 6,13,069 ಉದ್ಯೋಗಿಗಳನ್ನು ಹೊಂದಿದೆ. ಈಗ ಘೋಷಣೆ ಮಾಡಿರುವ ಉದ್ಯೋಗ ಕಡಿತ ಹಿರಿಯ ಮತ್ತು ಮಧ್ಯಮ ಶ್ರೇಣಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ಅಲ್ಲದೇ ಟಿಸಿಎಸ್‌ ನಿರ್ಧಾರ ದೇಶದ ಇನ್ನೂ ಅನೇಕ ಐಟಿ ಕಂಪನಿಗಳ ಮೇಲೆ ಪ್ರಭಾವ ಬೀರಲಿದೆ ಎಂದು ವಿವಿಧ ವರದಿಗಳು ಹೇಳುತ್ತಿವೆ.

Previous articleನಿಂಬೆ ನಂತರ ಮತ್ತೊಂದು ಹಣ್ಣಿಗೆ ಜಿಐ ಟ್ಯಾಗ್ ಪಡೆಯಲು ಸಜ್ಜಾದ ವಿಜಯಪುರ
Next articleಆ.5ಕ್ಕೆ ಬೆಂಗಳೂರಲ್ಲಿ ನಡೆಯಬೇಕಿದ್ದ ರಾಹುಲ್ ಗಾಂಧಿ ಪ್ರತಿಭಟನೆ ಮುಂದೂಡಿಕೆ

LEAVE A REPLY

Please enter your comment!
Please enter your name here