ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಳಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ಎ2 ಆರೋಪಿ ನಟ ದರ್ಶನ್ ಅವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ದರ್ಶನ ಪತ್ನಿ ವಿಜಯಲಕ್ಷ್ಮಿ ಅವರ ಹೊಸಕೆರೆಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿದ್ದ ಮನೆಯಲ್ಲಿ ದರ್ಶನ್ ಅವರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿ ಏಳು ಜನ ಆರೋಪಿಗಳ ಜಾಮೀನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು. ಎ1 ಆರೋಪಿ ಪವಿತ್ರಾ ಗೌಡ, ಎ2 ಆರೋಪಿ ದರ್ಶನ್ ಸೇರಿ 7 ಜನರ ಜಾಮೀನು ರದ್ದಾಗುತ್ತಿದ್ದಂತೆ ಪೊಲೀಸರು ಆರೋಪಿಗಳ ಬಂಧನಕ್ಕೆ ಮುಂದಾಗಿದ್ದರು.
ಬೆಂಗಳೂರಿನ ಆರ್‌ಆರ್ ನಗರದಲ್ಲಿನ ಎ1 ಆರೋಪಿ ಪವಿತ್ರಾ ಗೌಡ ನಿವಾಸಕ್ಕೆ ತೆರಳಿದ್ದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದರು. ಅಲ್ಲದೇ ನಟ ದರ್ಶನ್ ಆಪ್ತ ಎ14 ಪ್ರದೂಷ್, ಎ5 ನಾಗರಾಜ್ ಮತ್ತು ಎ6 ಲಕ್ಷ್ಮಣ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ದರ್ಶನ ಅವರನ್ನು ಪತ್ನಿ ಮನೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ದರ್ಶನ ಬಂಧನಕ್ಕಾಗಿ ಮೈಸೂರಿನಲ್ಲಿರುವ ದರ್ಶನ ಮನೆ, ಫಾರ್ಮ್ ಹೌಸ್ ಸೇರಿದಂತೆ ಇತರೆ ಸ್ಥಳಗಳಲ್ಲಿ ಪೊಲೀಸರು ಬೀಟ್ ಆರಂಭಿಸಿದ್ದರು. ಆದರೆ ದರ್ಶನ್ ಸದ್ಯ ತಮಿಳುನಾಡಿನಲ್ಲಿ ಇದ್ದಾರೆ. ಸಂಜೆ ವೇಳೆಗೆ ಬೆಂಗಳೂರಿಗೆ ಬರುತ್ತಾರೆ ಆ ಬಳಿಕ ಪೊಲೀಸರಿಗೆ ಶರಣಾಗಲಿದ್ದಾರೆ ಎಂದು ಹೇಳಲಾಗುತಿತ್ತು.
ಇದೆಲ್ಲದರ ಮಧ್ಯೆ ʻಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡನ್ನು ಬಿಡುಗಡೆ ಮಾಡಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದ ದರ್ಶನ್ ಕೋರ್ಟ್ ತೀರ್ಪಿನಿಂದ ಮತ್ತೆ ನೆಮ್ಮದಿ ಕಳೆದು ಕೊಂಡಿದ್ದಾರೆ. ಕುಟುಂಬದೊಂದಿಗೆ ನೆಮ್ಮದಿಯಿಂದ ಇದ್ದ ದರ್ಶನ್‌ಗೆ ಮತ್ತೇ ಜೈಲೂಟವೇ ಗತಿಯಾದಂತಾಗಿದೆ.
ಕೋರ್ಟ್ ಹೇಳಿದ್ದೇನು?: ಇದೊಂದು ಮಹತ್ವದ ತೀರ್ಪು ಎಂದು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿಯೇ ಹೇಳಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಎ1 ಪವಿತ್ರಾ ಗೌಡ, ಎ2 ದರ್ಶನ್, ಎ6 ಜಗದೀಶ್, ಎ7 ಅನು ಕುಮಾರ್, ಎ14 ಪ್ರದೋಶ್, ಎ11 ನಾಗರಾಜು ನಾಗ, ಎ12 ಲಕ್ಷ್ಮಣ್ ಜಾಮೀನು ರದ್ದುಗೊಂಡಿದೆ.
ಸರ್ಕಾರ ತನ್ನ ಮೇಲ್ಮನವಿಯಲ್ಲಿ ದರ್ಶನ್‌ಗೆ ಈ ಹಿಂದೆ ಕೂಡ ಅಪರಾಧ ಹಿನ್ನೆಲೆ ಇದೆ. ಬೆನ್ನು ನೋವು ಎಂದು ನ್ಯಾಯಾಲಯಕ್ಕೆ ಹಾಜರಾಗುವುದರಿಂದ ವಿನಾಯಿತಿ ಪಡೆದಿದ್ದಾರೆ. ಆದರೆ ಮರು ದಿನ ಚಿತ್ರ ಪ್ರದರ್ಶನದಲ್ಲಿ ಭಾಗಿಯಾಗಿದ್ದಾರೆ ಎಂದು ಸರ್ಕಾರ ವಾದಿಸಿತ್ತು.
ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದ್ದು ಸರಿ ಇಲ್ಲ. ದಾಖಲೆಗಳಿಗೆ ವಿರುದ್ಧವಾಗಿ ತೀರ್ಪು ನೀಡಲಾಗಿದೆ. ಕೊಲೆ ಮಾಡಲು ಬಳಸಿದ ಆಯುಧಗಳು ಮಾರಕವಲ್ಲ ಎಂದು ತೀರ್ಪಿನಲ್ಲಿ ಹೇಳಿದೆ.
ಆದರೆ, ಮೃತಪಟ್ಟ ವ್ಯಕ್ತಿಯ ಮೈ ಮೇಲಿನ ಗಾಯಗಳು ಇದನ್ನು ಸುಳ್ಳು ಎಂದು ಹೇಳುತ್ತಿವೆ. ಸಾಕ್ಷಿಗಳ ಹೇಳಿಕೆಯನ್ನು ತಡವಾಗಿ ದಾಖಲಿಸಲಾಗಿದೆ ಎಂದು ಅನುಮಾನಿಸಲಾಗಿದೆ ಎಂದು ಹೇಳಿರುವ ಕೋರ್ಟ್, ಸಾಕ್ಷಿಗಳ ವಿಚಾರಣೆಯನ್ನು ನಡೆಸಿ, ಪ್ರಕರಣದ ವಿಚಾರಣೆ ನಡೆಸಿ ಎಂದು ನಿರ್ದೇಶನ ನೀಡಿದೆ.