B. Saroja Devi: ಹಿರಿಯ ನಟಿ ಬಿ. ಸರೋಜಾ ದೇವಿ ವಿಧಿವಶ

0
262

ಬೆಂಗಳೂರು: ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟಿಸಿದ್ದ ಹಿರಿಯ ನಟಿ ಬಿ. ಸರೋಜಾ ದೇವಿ ವಿಧಿವಶರಾಗಿದ್ದಾರೆ. ಅಭಿನಯ ಸರಸ್ವತಿ ಎಂದೇ ಖ್ಯಾತಿಗಳಿಸಿದ್ದ 87 ವರ್ಷದ ಬಿ. ಸರೋಜಾ ದೇವಿ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.

ಬೆಂಗಳೂರು ನಗರದ ಮಲ್ಲೇಶ್ವರದಲ್ಲಿರುವ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಸೋಮವಾರ ಅವರು ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದರು. ಅಂತ್ಯ ಸಂಸ್ಕಾರ ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಕುಟುಂಬ ಸದಸ್ಯರು ಇನ್ನಷ್ಟೇ ನೀಡಬೇಕಿದೆ.

ಬಿ. ಸರೋಜಾ ದೇವಿ ಜನವರಿ 7, 1938ರಲ್ಲಿ ಜನಿಸಿದ್ದರು. ಬೆಂಗಳೂರು ನಗರದ ಮಲ್ಲೇಶ್ವರದಲ್ಲಿರುವ ನಿವಾಸದಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗುತ್ತದೆ. ಪೊಲೀಸರು ಈಗಾಗಲೇ ತಯಾರಿಯನ್ನು ಕೈಗೊಂಡಿದ್ದಾರೆ. ನಟ ಜಗ್ಗೇಶ್ ಸೇರಿದಂತೆ ಹಲವಾರು ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಚಿತ್ರರಂಗದಲ್ಲಿ ಸುಮಾರು 6 ದಶಕಗಳ ಕಾಲ ಸೇವೆ ಸಲ್ಲಿಸಿರುವ ಬಿ. ಸರೋಜಾ ದೇವಿ ಕನ್ನಡ ಸೇರಿದಂತೆ 6 ಭಾಷೆಗಳ ಚಿತ್ರಗಳಲ್ಲಿ ನಟಿಸಿದ್ದರು. ಚಿತ್ರರಂಗದ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು.

ಬಿ. ಸರೋಜಾ ದೇವಿ ಮೊದಲ ಕನ್ನಡ ಚಿತ್ರ ಭೀಷ್ಮ ಹೊನ್ನಪ್ಪ ಭಾಗವತರ್ ನಿರ್ದೇಶನದ ‘ಮಹಾಕವಿ ಕಾಳಿದಾಸ’. ತಮಿಳು ಚಿತ್ರರಂಗದಲ್ಲಿ ಶಿವಾಜಿ ಗಣೇಶನ್ ಸೇರಿದಂತೆ ವಿವಿಧ ನಟರ ಜೊತೆ ಸರೋಜಾ ದೇವಿ ಅವರು ನಟಿಸಿದ್ದು, ಹಲವು ಹಿಟ್ ಚಿತ್ರಗಳನ್ನು ನೀಡಿದ್ದರು.

ಡಾ. ರಾಜ್‌ ಕುಮಾರ್ ಜೊತೆ ಬಬ್ರುವಾಹ, ಭಾಗ್ಯವಂತರು, ಅಮರ ಶಿಲ್ಪಿ ಜಕಣಾಚಾರಿ, ಭೂ ಕೈಲಾಸ, ಶ್ರೀನಿವಾಸ ಕಲ್ಯಾಣ ಸೇರಿದಂತೆ ಹಲವು ಚಿತ್ರಗಳಲ್ಲಿ ಸರೋಜಾ ದೇವಿ ಅವರು ನಟಿಸಿದ್ದರು.

ಬಿ. ಸರೋಜಾ ದೇವಿ ಅವರಿಗೆ ಬಾಲ್ಯದಿಂದಲೇ ಲಲಿತ ಕಲೆಗಳ ಬಗ್ಗೆ ಅಪಾರವಾದ ಆಸಕ್ತಿ ಇತ್ತು. ತಂದೆ ಭೈರಪ್ಪ, ತಾಿ ರುದ್ರಮ್ಮ ಬಳಿ ನೃತ್ಯ ಕಲಿಯುವ ಆಸೆಯನ್ನು ಹೇಳಿಕೊಂಡಿದ್ದರು. ಕುಟುಂಬದ ಬೆಂಬಲವೂ ಸಿಕ್ಕಿತ್ತು. 14ನೇ ವಯಸ್ಸಿನಲ್ಲಿ ಅವರು ಕಾರ್ಯಕ್ರಮವೊಂದರಲ್ಲಿ ಹಾಡುವಾಗ ಬಿ. ಆರ್. ಕೃಷ್ಣಮೂರ್ತಿ ಚಿತ್ರರಂಗಕ್ಕೆ ಬರುವ ಪ್ರಸ್ತಾಪ ಮಾಡಿದ್ದರು.

17ನೇ ವಯಸ್ಸಿಗೆ ಸರೋಜಾ ದೇವಿ ಅವರು ಚಿತ್ರರಂಕ್ಕೆ ಪಾದಾರ್ಪಣೆ ಮಾಡಿದರು. ಕನ್ನಡ ಮಾತ್ರವಲ್ಲ ತಮಿಳು, ತೆಲಗು, ಹಿಂದಿ ಸೇರಿದಂತೆ ಸುಮಾರು 200 ಚಿತ್ರಗಳಲ್ಲಿ ಬಿ. ಸರೋಜಾ ದೇವಿ ನಟಿಸಿದ್ದರು. ಕನ್ನಡಲ್ಲಿ ದಿ. ಪುನೀತ್ ರಾಜ್‌ಕುಮಾರ್ ಅಭಿನಯ ‘ನಟಸಾರ್ವಭೌಮ’ ಸರೋಜಾ ದೇವಿ ಅವರು ನಟಿಸಿದ ಕೊನೆಯ ಚಿತ್ರವಾಗಿದೆ.

ಗಣ್ಯರಿಂದ ಸಂತಾಪ: ಬಿ. ಸರೋಜಾ ದೇವಿ ನಿಧನಕ್ ರಾಜಕೀಯ, ಸಿನಿಮಾ ಕ್ಷೇತ್ರದ ಹಲವಾರು ಗಣ್ಯರು ಸಂತಾಪವನ್ನು ಸೂಚಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದು, ‘ಕನ್ನಡದ ಹಿರಿಯ ನಟಿ ಬಿ. ಸರೋಜಾ ದೇವಿ ಅವರ ನಿಧನವಾರ್ತೆ ನೋವುಂಟುಮಾಡಿದೆ. ಕನ್ನಡ ಚಿತ್ರರಂಗವು ಸೇರಿದಂತೆ ತಮಿಳು, ತೆಲುಗು ಮತ್ತು ಹಿಂದಿಯ ಸುಮಾರು 200 ಚಿತ್ರಗಳಲ್ಲಿ ನಟಿಸಿ, ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿದ್ದರು. ಸರೋಜಾದೇವಿ ಎಂದಾಕ್ಷಣ ಕಿತ್ತೂರು ಚೆನ್ನಮ್ಮ, ಬಬ್ರುವಾಹನ, ಅಣ್ಣತಂಗಿ ಮುಂತಾದ ಚಿತ್ರಗಳಲ್ಲಿನ ಅವರ ಮನೋಜ್ಞ ಅಭಿನಯ ಕಣ್ಣಮುಂದೆ ಬರುತ್ತದೆ. ಸದಭಿರುಚಿಯ ಚಿತ್ರಗಳ‌ ಮೂಲಕ ಹಲವು ದಶಕಗಳ‌ ಕಾಲ ಸಿನಿಪ್ರಿಯರನ್ನು ರಂಜಿಸಿದ್ದ ಅವರ ಅಗಲಿಕೆ ಭಾರತೀಯ ಚಿತ್ರರಂಗಕ್ಕಾದ ಬಹುದೊಡ್ಡ ನಷ್ಟ. ಸರೋಜಾದೇವಿಯವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸುವೆ. ಅವರ ದುಃಖತಪ್ತ ಕುಟುಂಬವರ್ಗ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು’ ಎಂದು ತಿಳಿಸಿದ್ದಾರೆ.

ನಟ ಕಿಚ್ಚ ಸುದೀಪ ಟ್ವೀಟ್ ಮಾಡಿ,’ಅಭಿನಯ ಸರಸ್ವತಿ ಎಂದೇ ಹೆಸರಾದ ಬಹುಭಾಷಾ ತಾರೆ ಶ್ರೀಮತಿ ಸರೋಜ ದೇವಿ ಅವರು ತಮ್ಮ ಮೋಹಕತೆಯೊಂದಿಗೆ ಹೊರಟಿದ್ದಾರೆ. ಹಲವು ಭಾಷೆಗಳ ಪ್ರೌಡಿಮೆ ಹೊಂದಿದ್ದ ಅವರು ಅನೇಕ ದಿಗ್ಗಜರೊಂದಿಗೆ ನಟಿಸಿ ತಾನೇ ಪಾತ್ರವಾಗಿ ಬೆಳ್ಳಿತೆರೆಯಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಪಾರಿಜಾತ ಪುಷ್ಪವೊಂದು ತನ್ನ ಪರಿಮಳದೊಂದಿಗೆ ತುಂಬು ಜೀವನ ನೆಡೆಸಿ ನಮ್ಮನ್ನು ಆಗಲಿ ಹೊರಟಿದೆ. ಕಲಾ ಸರಸ್ವತಿಗೆ ವಿನಯಪೂರ್ವಕ ನಮನ’ ಎಂದು ಹೇಳಿದ್ದಾರೆ.

ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ,’ಕನ್ನಡ ಚಿತ್ರರಂಗದ ಹೆಸರಾಂತ ಹಿರಿಯ ನಟಿ ಪದ್ಮಶ್ರೀ ಹಾಗೂ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದ ಶ್ರೀಮತಿ ಬಿ. ಸರೋಜಾದೇವಿ ಅವರ ಅಗಲಿಕೆಯ ಸುದ್ದಿ ಕೇಳಿ ಮನಸ್ಸಿಗೆ ತುಂಬ ದುಃಖವಾಯಿತು. ಅವರು ಕನ್ನಡ ಮಾತ್ರವಲ್ಲದೆ, ಹಿಂದಿ, ತಮಿಳು, ತೆಲುಗು ಚಿತ್ರರಂಗದಲ್ಲಿಯೂ ಅತ್ಯಂತ ಪ್ರಭಾವ ಬೀರುವ ಅಭಿನಯವನ್ನು ನೀಡಿದ್ದರು’ ಎಂದು ಹೇಳಿದ್ದಾರೆ.

‘ನೂರಾರು ಚಲನಚಿತ್ರಗಳಲ್ಲಿ ತಮ್ಮ ವಿಭಿನ್ನ ಪಾತ್ರಗಳ ಮೂಲಕ ಭಾರತೀಯ ಚಿತ್ರರಂಗದ ಹೆಮ್ಮೆಯ ನಟಿಯಾಗಿ ಗುರುತಿಸಿಕೊಂಡವರು. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕುಟುಂಬದ ಸದಸ್ಯರಿಗೆ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಓಂ ಶಾಂತಿ’ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಗಂಗಾವತಿ ಶಾಸಕ, ಬಿಜೆಪಿ ನಾಯಕ ಗಾಲಿ ಜನಾರ್ದನ ರೆಡ್ಡಿ ಸಂತಾಪ ಸೂಚಿಸಿದ್ದು, “ಅಭಿನಯ ಸರಸ್ವತಿ, ಪದ್ಮಭೂಷಣ, ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ.ಸರೋಜಾ ದೇವಿಯವರ ನಿಧನದ ಸುದ್ದಿ ಅತೀವ ದುಃಖ ತರಿಸಿದೆ. ಆರು ದಶಕಗಳ ಕಾಲ ಕನ್ನಡ ಹಾಗೂ ಐದು ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ತಮ್ಮ ಅತ್ಯದ್ಭುತ ನಟನೆಯ ಮೂಲಕ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗ ಮಾತ್ರವಲ್ಲದೆ, ಭಾರತ ಚಿತ್ರರಂಗಕ್ಕೂ ತುಂಬಲಾರದ ನಷ್ಟವಾಗಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ, ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ದುಃಖವನ್ನು ಬರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಹೇಳಿದ್ದಾರೆ.

Previous articleಪಂಚತಂತ್ರದ ಗುರುವ ನೆನೆಯುತ್ತಾ…
Next articleಮಾದಕದ್ರವ್ಯ ಸಾಗಾಟ: ಕಲಬುರಗಿ ಕಾಂಗ್ರೆಸ್‌ ಮುಖಂಡ ಬಂಧನ, ಪಕ್ಷದಿಂದ ಉಚ್ಛಾಟನೆ