ರಾಜ್ಯದಲ್ಲಿ ಏನೋ ಆಗ್ತಾ ಇದೆ. ಇದನ್ನು ಪತ್ತೆ ಹಚ್ಚಬೇಕು ಎಂದು ಅನೇಕ ದಿನಗಳಿಂದ ಕನಸು ಕಂಡಿದ್ದ ಪಂ. ಲೇವಣ್ಣನವರು ಹೊರಗಡೆ ತಿರುಗಾಡಿ ಜನರನ್ನು ಮಾತನಾಡಿಸಿ ಮಾತ್ರ ಎಲ್ಲ ಸುದ್ದಿ ಗೊತ್ತಾಗುವುದು ಇಲ್ಲದಿದ್ದರೆ ಇಲ್ಲವೇ ಇಲ್ಲ ಎಂದು ಅನಿಸಿದ್ದೇ ತಡ… ಮೈ-ಕೈಗೆಲ್ಲ ವಿಭೂತಿ ಹಚ್ಚಿಕೊಂಡು ಕನ್ನಡಿ ಮುಂದೆ ನಿಂತು ಯಾರೂ ನನ್ನ ಗುರುತು ಹಿಡಿಯುತ್ತಿಲ್ಲ ಎಂದು ಕನ್ಫರ್ಮ್ ಮಾಡಿಕೊಂಡ. ಹೊರಗಡೆ ಬಂದವರೇ ಎಡಗಡೆ ತಿರುಗಿಕೊಂಡು ಬಲಕ್ಕೆ ಹೊರಳಿ ಮೂರನೇ ಕ್ರಾಸ್‌ಗುಂಟ ಹೋದಾಗ ಅಲ್ಲಿ ಮದ್ರಾಮಣ್ಣ ನಿಂತಿದ್ದರು. ಅವರ ಮುಂದೆ ನಿಂತು… ಏನ್ರೀ ಸಾಹೇಬರೇ ಏನಾಗ್ತಾ ಇದೆ ಎಂದು ಲೇವಣ್ಣ ಕೇಳಿದರು. ಅದಕ್ಕೆ ಮದ್ರಾಮಣ್ಣೋರು ಏನಿಲ್ಲ ಎರಡ್ಮೂರು ದಿನಗಳಿಂದ ಯಾಕೋ ಟೊಂಯ್.. ಟೊಂಯ್ ಅನ್ನುತ್ತಿದೆ ಎಂದು ಹೇಳಿ ಕಾರು ನಿಲ್ಲಿಸಿ ಹತ್ತಿ ಹೋದರು. ಎಲಾ ಇವ್ನ ಅಂದುಕೊಂಡು ೫೦೦ ಮೀಟರ್ ಹೋಗಿದ್ದರೋ ಇಲ್ಲವೋ ಬಿಳಿ ಸಫಾರಿ ಹಾಕಿಕೊಂಡು ಒಬ್ಬರು ಬರುವುದು ಕಾಣಿಸಿತು. ಅಯ್ಯ… ಸಿಟ್ಯೂರಪ್ಪೋರು ಬರ್ತಾ ಇದಾರೆ ಅವರನ್ನು ಕೇಳಿದರಾಯಿತು ಎಂದು ಎದುರಿಗೆ ಬಂದ ಅವರನ್ನು ನಿಲ್ಲಿಸಿ ಏನ್ಸಾರ್… ಏನಾಗ್ತಾ ಇದೆ ಎಂದು ಕೇಳಿದಾಗ… ಇಲ್ಲಿಲ್ಲ ನಾನು ಡೆಲ್ಲಿಗೆ ಹೋಗಲ್ಲ ಸ್ವಾಮೀ… ನನಗೇ ಬಹಳ ಕೆಲಸಗಳಿವೆ ಎಂದು ಹೇಳಿ ಮುಂದೆ ಹೋದರು. ನಾ ಏನು ಕೇಳಿದರೆ ಇವರೇನು ಹೇಳುತ್ತಾರೆ ನೋಡು ಎಂದು ಅಲ್ಲಿಂದ ಸುಮ್ಮನೇ ಹೋಗಬೇಕಾದರೆ… ಸಿಟ್ಯೂರಪ್ಪರ ಮಗ ಗುಜೇಂದ್ರ ಎದುರಿಗೆ ಬಂದ… ಅವರನ್ನು ನಿಲ್ಲಿಸಿ ಏನಾಗ್ತಾ ಇದೆ ಎಂದು ಕೇಳಿದಾಗ… ಅಯ್ಯೋ ಗುತ್ನಾಳ್ ಹಂಗಂತ ಕೇಳು ಅಂದ್ನಾ? ಒಂದ್ ತಿಳ್ಕೊಳ್ಳಿ ನಂಗೇನೂ ಆಗಲ್ಲ ಎಂದು ಹೇಳಿದ. ಇನ್ನು ಕನಕ ಬಂಡೇಸಿ ಅವರ ಮನೆಯ ಹತ್ತಿರ ಹೋಗಿ ಗೇಟ್ ಶಬ್ದ ಮಾಡಿದಾಗ ಅವರೇ ಬಂದು ತೆಗೆದರು.. ಏನು ಆಗ್ತಾ ಇದೆ ಎಂದು ಕೇಳಿದಾಗ… ಪ್ರಾರ್ಥನೆ ಆಗ್ತಾ ಇದೆ. ದೊಡ್ಡ ಸ್ವಾಮೇರನ್ನು ಭೇಟಿಯಾಗುವುದಕ್ಕೆ ಡೆಲ್ಲಿಗೆ ಹೋಗ್ತಾ ಇದೀವಿ… ಈಗಂತೂ ಏನೂ ಆಗ್ತಾ ಇಲ್ಲ. ಬಂದ ಮೇಲೆ ಫ್ರೀ ಮಾಡ್ಕೊಂಡು ಬಾ ನಾ ಹೇಳುತ್ತೇನೆ ಎಂದು ಹೇಳಿದ. ಅಷ್ಟರಲ್ಲಿ ಸುಮಾರಣ್ಣೋರು ಹೋಗುತ್ತಿದ್ದ ಕಾರನ್ನು ನಿಲ್ಲಿಸಿ ಏನಾಗ್ತಾ ಇದೆ ಎಂದು ಕೇಳಿದಾಗ… ನೋಡಿ ಬ್ರದರ್ ಎಂದು ಹೇಳುತ್ತಿದ್ದಂತೆ.. ಅಯ್ಯೋ ನನ್ನ ಗುರುತು ಹಿಡಿದ ಎಂದು ಅಲ್ಲಿಂದ ತಿರುಗಿ ನೋಡದ ಹಾಗೆ ಮನೆ ಕಡೆ ಹೆಜ್ಜೆ ಹಾಕಿದರು ಲೇವಣ್ಣ.