ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್ ಜಾಮೀನು ಅರ್ಜಿ: ಗುರುವಾರ ತೀರ್ಪು?

0
13

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಮತ್ತು ಎ2 ಆರೋಪಿಗಳಾದ ಪವಿತ್ರಾಗೌಡ ಮತ್ತು ನಟ ದರ್ಶನ ಸೇರಿ ಇತರ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್‌ ಗುರುವಾರ ತೀರ್ಪು ನೀಡುವ ಸಾಧ್ಯತೆ ಇದೆ.

ಕಳೆದ ಡಿಸೆಂಬರ್ 13ರಂದು ಕರ್ನಾಟಕ ಹೈಕೋರ್ಟ್‌ ಕೊಲೆ ಪ್ರಕರಣದ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತ್ತು. ಆರೋಪಿಗಳಾದ ನಟ ದರ್ಶನ್, ಪವಿತ್ರಗೌಡ, ಲಕ್ಷ್ಮಣ, ನಾಗರಾಜು ಮತ್ತು ಅನುಕುಮಾರ್ ಸೇರಿದಂತೆ 7 ಪ್ರಮುಖ ಆರೋಪಿಗಳಿಗೆ ಜಾಮೀನು ಮಂಜೂರಾಗಿತ್ತು.

ರಾಜ್ಯ ಹೈಕೋರ್ಟ್‌ ನೀಡಿ‌ದ್ದ ಜಾಮೀನು ಆದೇಶವನ್ನು ಪ್ರಶ್ನಿಸಿ ಬೆಂಗಳೂರು ನಗರ ಪೊಲೀಸರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ಸುಪ್ರೀಂ ಕೋರ್ಟ್‌ ಸುದೀರ್ಘ ವಾದ-ವಿವಾದ ಪರಿಶೀಲಿಸಿ ಆಗಸ್ಟ್‌ 14ಕ್ಕೆ ತೀರ್ಪು ಕಾಯ್ದಿರಿಸಿತ್ತು.

ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ, ನ್ಯಾಯಮೂರ್ತಿ ಆರ್. ಮಹದೇವನ್ ಅವರಿದ್ದ ಪೀಠ ಜುಲೈ 24 ರಂದು ಕೊನೆಯ ವಿಚಾರಣೆ ನಡೆಸಿ ಈ ವೇಳೆ ನಿಮ್ಮ ವಾದ-ಪ್ರತಿವಾದವನ್ನು ಮೂರು ಪುಟಗಳಲ್ಲಿ ಸಂಕ್ಷಿಪ್ತವಾಗಿ ಒಂದು ವಾರದಲ್ಲಿ ತಿಳಿಸಿ ಎಂದು ಸೂಚಿಸಿತ್ತು.

ವಿಚಾರಣೆ ವೇಳೆ ಹೈಕೋರ್ಟ್ ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಬೇಸರ ವ್ಯಕ್ತಪಡಿಸಿತ್ತು. ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿದ್ದೇವೆ. ಹೈಕೋರ್ಟ್‌ ಸೂಕ್ತವಾಗಿ ತನ್ನ ವಿವೇಚನೆ ಬಳಸಿಲ್ಲ ಎಂದು ನ್ಯಾ. ಪಾರ್ದಿವಾಲ ಅಭಿಪ್ರಾಯಪಟ್ಟಿದ್ದರು.

ರೇಣುಕಾಸ್ವಾಮಿ ಅಪಹರಣಕ್ಕೆ ಸೂಚನೆ ನೀಡಿದ್ದೇನೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಹೀಗಾಗಿ ಹೈಕೋರ್ಟ್‌ ನೀಡಿದ ಜಾಮೀನನ್ನು ರದ್ದುಗೊಳಿಸಬಾರದು ಎಂದು ನಟ ದರ್ಶನ್‌ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದು, ಲಿಖಿತ ರೂಪದ ಕಾರಣಗಳನ್ನು ನೀಡಿದ್ದರು. ಅದರಲ್ಲಿ ಸಾಕ್ಷಿ ಕೊರತೆ ಸೇರಿದಂತೆ ಹಲವು ಕಾರಣಗಳೊಂದಿಗೆ ಜಾಮೀನು ಏಕೆ ರದ್ದು ಮಾಡಬಾರದು ಎಂಬ ಅಂಶವನ್ನು ದರ್ಶನ್‌ ಪರ ವಕೀಲರು ನೀಡಿದ್ದರು.

ಇತ್ತ ಪವಿತ್ರಾ ಗೌಡ ಅವರು ಕೌಟುಂಬಿಕ ಕಾರಣ ಸೇರಿದಂತೆ ಇನ್ನಿತರ ಕಾರಣಗಳನ್ನೂ ತಿಳಿಸಿದ್ದರು. ಅಲ್ಲದೇ ಬೆಂಗಳೂರು ಪೊಲೀಸರ ಪರ ವಕೀಲರು ನ್ಯಾಯಾಲಯಕ್ಕೆ ಲಿಖಿತ ರೂಪದಲ್ಲಿ ವಾದವನ್ನು ಸಲ್ಲಿಸಿದ್ದರು.

ಪ್ರಕರಣದ ಹಿನ್ನೆಲೆ: ನಟಿ ಪವಿತ್ರಾ ಗೌಡ ಅವರಿಗೆ ಚಿತ್ರದುರ್ಗದ ರೇಣುಕಾಸ್ವಾಮಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದ ಎಂಬ ಆರೋಪದ ಮೇಲೆ ರೇಣುಕಾಸ್ವಾಮಿಯನ್ನು ಅಪಹರಿಸಿ ಬೆಂಗಳೂರಿನ ಶೆಡ್‌ನಲ್ಲಿ ಮೂರು ದಿನಗಳ ಕಾಲ ಬಂಧಿಸಿ, ಚಿತ್ರಹಿಂಸೆ ನೀಡಲಾಗಿತ್ತು. ಆ ನಂತರ ರೇಣುಕಾಸ್ವಾಮಿ ಶವವನ್ನು ಶೆಡ್‌ನಿಂದ ಹೊರತಂದು ಚರಂಡಿಗೆ ಎಸೆದಿದ್ದಾರೆ ಎಂದು ನಟ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ 17 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಬಳಿಕ ಹೈಕೋರ್ಟ್‌ ಪ್ರಕರಣ ವಿಚಾರಣೆಯನ್ನು ನಡೆಸಿ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತ್ತು. ಆದರೆ ಈ ಜಾಮೀನು ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದೆ. ರಾಜ್ಯ ಸರ್ಕಾರದ ಮನವಿಯ ಮೇರೆಗೆ ಸುಪ್ರೀಂ ಕೋರ್ಟ್ ಜನವರಿ 24ರಂದು ನಟಿ ಪವಿತ್ರಾ ಗೌಡ ಹಾಗೂ ಪ್ರಕರಣದ ಇತರ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿತ್ತು.

Previous articleಸ್ಯಾಂಡಲ್‌ವುಡ್‌ ಹಿರಿಯ ನಿರ್ದೇಶಕ ಎಸ್. ಮುರಳಿ ಮೋಹನ್ ನಿಧನ
Next articleಶಿಕ್ಷಣ ಇಲಾಖೆಯ ಹತ್ತಾರು ಸಮಸ್ಯೆಗೆ ಶೀಘ್ರ ಪರಿಹಾರ

LEAVE A REPLY

Please enter your comment!
Please enter your name here