ರೆಡ್ಡಿ-ರಾಮುಲು ಒಗ್ಗಟ್ಟು ಪ್ರದರ್ಶನ: ಮುನಿಸು ಮರೆತು ಒಂದಾದ ಸ್ನೇಹಿತರು

0
68

ಕೊಪ್ಪಳ: ಮಾಜಿ ಸಚಿವರಾದ ಗಾಲಿ ಜನಾರ್ದನ ರೆಡ್ಡಿ ಮತ್ತು ಬಿ. ಶ್ರೀರಾಮುಲು ಇಂದು ಮತ್ತೇ ಒಂದಾಗಿದ್ದಾರೆ. ಇಬ್ಬರೂ ಕೂಡಿ ಒಗಟ್ಟು ಪ್ರದರ್ಶಿಸುವ ಮೂಲಕ ನಾವಿಬ್ಬರೂ ಒಂದೇ ಎನ್ನುವ ಸಂದೇಶವನ್ನು ನೀಡಿದ್ದಾರೆ.

ಶ್ರೀರಾಮುಲು ಅವರು, ಎರಡ್ಮೂರು ದಿನದ ಹಿಂದೆಯಷ್ಟೇ ನಾನು ಮತ್ತು ರೆಡ್ಡಿ ಒಂದಾಗಿದ್ದೇವೆ. ಎಲ್ಲರೂ ಸೇರಿ ಪಕ್ಷ ಸಂಘಟನೆ ಮಾಡುತ್ತೇವೆ. ಅವಕಾಶ ಸಿಕ್ಕರೆ ಜೊತೆ ಕಾಣಿಸುತ್ತೇವೆ ಎನ್ನುವ ಮಾತುಗಳನ್ನಾಡಿದ್ದರು. ಅದರಂತೆಯೇ ಮುನಿಸು ಮರೆತು, ಪಕ್ಷ ಬಲಿಷ್ಠಗೊಳಿಸಲು ರೆಡ್ಡಿ-ರಾಮುಲು ಒಂದಾಗಿದ್ದಾರೆ. ಅದಕ್ಕೆ ಸಾಕ್ಷಿ ಎನ್ನುವಂತೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಭಾನುವಾರ ನಡೆದ ಬಳ್ಳಾರಿ ವಿಭಾಗದ ಸಂಘಟನಾತ್ಮಕ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಒಂದು ಕೈಯಲ್ಲಿ ರೆಡ್ಡಿ ಮತ್ತು ಮತ್ತೊಂದು ಕೈಯಲ್ಲಿ ರಾಮುಲು ಕೈ ಹಿಡಿದು ಮೇಲೆತ್ತುವ ಮೂಲಕ ಒಗ್ಗಟ್ಟಿನ ಮಂತ್ರ ಬೋಧಿಸಿದರು.

ಸಂಡೂರು ಉಪಚುನಾವಣೆ ಆತ್ಮಾವಲೋಕನ ಸಭೆಯಲ್ಲಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಸೋಲಿಗೆ ರಾಮುಲು ಕಾರಣ ಎಂಬ ವಾದ ಮಂಡಿಸಿದ್ದ ಜನಾರ್ದನ ರೆಡ್ಡಿಗೆ ಬಹಿರಂಗವಾಗಿಯೇ ರಾಮುಲು ತೊಡೆತಟ್ಟಿದ್ದರು. ವೈಯಕ್ತಿಕವಾಗಿ ನೇರಾನೇರ ಟೀಕೆಗಳನ್ನು ಮಾಡಿದ್ದರು. ಇದರಿಂದ ರೆಡ್ಡಿ-ರಾಮುಲು ಒಂದಾಗುವುದು ಕಷ್ಟ ಎನ್ನುವ ವಾತಾವರಣ ಸೃಷ್ಟಿಯಾಗಿತ್ತು. ಇದು ಬಿಜೆಪಿಗೆ ತಲೆನೋವಾಗಿ ಪರಿಣಮಿಸಿತ್ತು. ಹಾಗಾಗಿ ಬಿಜೆಪಿ ರಾಷ್ಟಾçಧ್ಯಕ್ಷ ಜೆ.ಪಿ. ನಡ್ಡಾ ಕರೆ ಮಾಡಿ, ಮಾತನಾಡಿದ್ದು, ಸರಿಪಡಿಸುವ ಭರವಸೆ ನೀಡಿದ್ದರು. ಬಳಿಕ ರೆಡ್ಡಿ ಮತ್ತು ರಾಮುಲು ಮೌನಕ್ಕೆ ಶರಣಾದರು. ಕಳೆದ ಕೆಲ ದಿನದ ಹಿಂದಷ್ಟೇ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿಯಾಗಿ ಬಂದ ರಾಮುಲು ವರಸೆ ಬದಲಿಸಿದ್ದರು.

ಈ ಕುರಿತಂತೆ ಮಾತನಾಡಿರುವ ಶಾಸಕ ಜನಾರ್ದನ ರೆಡ್ಡಿ, “ಯಾವುದೋ ಒಂದು ಸಣ್ಣ ವಿಚಾರದಲ್ಲಿ ನಮ್ಮಿಬ್ಬರಿಗೂ ಮನಸ್ತಾಪವಾಗಿತ್ತು. ಆಗ ಬಳ್ಳಾರಿ ಕಾಂಗ್ರೆಸ್ ಮುಖಂಡರು ಎಲ್ಲ ಬಾರ್‌ನಲ್ಲಿ ಪಾರ್ಟಿ ಮಾಡಿದ್ದರು. ಆದರೆ, ಯಾವತ್ತೂ ನಾವಿಬ್ಬರೂ ಒಂದೇ. ಯಾರಾದರೂ ನನ್ನ-ಶ್ರೀರಾಮುಲು ನಡುವೆ ಮಧ್ಯಸ್ಥಿಕೆ ಮಾಡಬೇಕು ಅಂದುಕೊಂಡಿದ್ದರೆ ಅವರಷ್ಟು ಮೂರ್ಖರು ಬೇರೆ ಯಾರೂ ಇಲ್ಲ. ಶ್ರೀಕೃಷ್ಣ-ಕುಚೇಲರ, ಶ್ರೀರಾಮ- ಹನುಮಂತರ ನಡುವೆಯೂ ಜಗಳವಾಗಿತ್ತು. ಹಾಗೆ ಒಂದು ಕೆಟ್ಟ ಗಳಿಗೆಯಲ್ಲಿ ನಮ್ಮಿಬ್ಬರ ನಡುವೆ ಇದ್ದ ಭಿನ್ನಾಭಿಪ್ರಾಯ ಒಂದು ಕಪ್ ಬಿಸಿ ನೀರು ಕೈಗೆ ಕೊಡುವಷ್ಟರಲ್ಲೇ ಸರಿ ಆಗಲಿದೆ. ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ನಾನು ಮತ್ತು ಶ್ರೀರಾಮುಲು ಮತ್ತೇ ರಾಜ್ಯ ಪ್ರವಾಸ ಮಾಡಿ ಬಿಜೆಪಿ ಅಧಿಕಾರಕ್ಕೆ ತರುತ್ತೇವೆ” ಎಂದು ಹೇಳಿದರು.

ಮಾಜಿ ಸಚಿವರಾದ ಗಾಲಿ ಜನಾರ್ದನ ರೆಡ್ಡಿ ಮತ್ತು ಬಿ.ಶ್ರೀರಾಮುಲು ಮಧ್ಯ ಬಿರುಕು ಉಂಟಾಗಿ ಬಿಜೆಪಿಗೆ ನುಂಗಲಾರದ ತುತ್ತಾಗಿತ್ತು. ಈಗ ರೆಡ್ಡಿ ಮತ್ತು ರಾಮುಲು ಒಗ್ಗಟ್ಟು ಪ್ರದರ್ಶಿಸಿದ್ದು, ಬಿ.ವೈ. ವಿಜಯೇಂದ್ರ ಒಗ್ಗಟ್ಟಿನ ಮಂತ್ರ ಬೋಧಿಸಿದ್ದಾರೆ.

ಇನ್ನು ಈ ಕುರಿತಂತೆ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಚಿವರಾದ ಜನಾರ್ದನ ರೆಡ್ಡಿ-ರಾಮುಲು ಪಕ್ಷಕ್ಕೆ ದೊಡ್ಡ ಶಕ್ತಿಯಾಗಿದ್ದಾರೆ. ಇವರಿಬ್ಬರೂ ಒಗ್ಗಟ್ಟಾಗಿ ಹೋದರೆ ಬಿಜೆಪಿಗೆ ಹೆಚ್ಚು ಸ್ಥಾನ ದೊರೆಯುವುದರಲ್ಲಿ ಯಾವುದೇ ಸಂಶಯವೇ ಇಲ್ಲ. ರೆಡ್ಡಿ-ರಾಮುಲು ಇಬ್ಬರು ಒಂದಾಗಿದ್ದಾರೆ ಎಂದು ಹೇಳಿದರು.

Previous articleಆಡಳಿತರೂಢ ಶಾಸಕರಲ್ಲಿ ಕುದುರೆ ವ್ಯಾಪಾರ ಜೋರು
Next articleಯಾವುದೇ ಕ್ಷಣದಲ್ಲಾದ್ರೂ ಸರ್ಕಾರ ಪತನ: ಬಿಜೆಪಿ ಮಾಜಿ ಸಿಎಂ ಭವಿಷ್ಯ

LEAVE A REPLY

Please enter your comment!
Please enter your name here