RCB ಸಂಭ್ರಮಾಚರಣೆ ವೇಳೆ ಕಾಲ್ತುಳಿತ: ಇಬ್ಬರು ಅಭಿಮಾನಿಗಳ ಸಾವು

0
26

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಐಪಿಎಲ್ 2025 ಟ್ರೋಫಿ ಗೆದ್ದು ಐತಿಹಾಸಿಕ ವಿಜಯ ಸಾಧಿಸಿದ ಬೆನ್ನಲ್ಲೇ ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ವಿಜಯೋತ್ಸವದಲ್ಲಿ ಭಾರೀ ದುರಂತ ಸಂಭವಿಸಿದೆ. ವಿಜಯೋತ್ಸವದ ಸಂಭ್ರಮದಲ್ಲಿ ಉಂಟಾದ ಭಾರೀ ಜನಸಂದಣಿಯಿಂದಾಗಿ ಕಾಲ್ತುಳಿತ ಸಂಭವಿಸಿ ಇಬ್ಬರು ಯುವಕರು ದುರ್ಮರಣ ಹೊಂದಿದ್ದಾರೆ. ಮೂವರಿಗೆ ಗಂಭೀರ ಗಾಯಗಳಾಗಿದ್ದು, ಹಲವರು ಅಸ್ವಸ್ಥರಾಗಿದ್ದಾರೆ ಎಂದು ವರದಿಯಾಗಿದೆ.

ಐಪಿಎಲ್ ಟ್ರೋಫಿಯನ್ನು ಮೊದಲ ಬಾರಿಗೆ ಗೆದ್ದ ಆರ್‌ಸಿಬಿ ತಂಡದ ವಿಜಯೋತ್ಸವದಲ್ಲಿ ಭಾಗವಹಿಸಲು ಮತ್ತು ಆಟಗಾರರನ್ನು ಹತ್ತಿರದಿಂದ ವೀಕ್ಷಿಸಲು ಸಾವಿರಾರು ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತಲ ಪ್ರದೇಶ ಮತ್ತು ರಸ್ತೆಗಳಲ್ಲಿ ಜಮಾಯಿಸಿದ್ದರು. ಜನರ ಅನಿರೀಕ್ಷಿತ ದಟ್ಟಣೆಯಿಂದಾಗಿ ಜನಸಂದಣಿಯ ನಿಯಂತ್ರಣ ತಪ್ಪಿದ್ದು, ಕೆಲವೆಡೆ ನೂಕುನುಗ್ಗಲು ಉಂಟಾಗಿ ಕಾಲ್ತುಳಿತಕ್ಕೆ ಕಾರಣವಾಗಿದೆ, ಪ್ರಾಥಮಿಕ ವರದಿಗಳ ಪ್ರಕಾರ, ಈ ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವರು ಉಸಿರಾಟದ ತೊಂದರೆ ಮತ್ತು ಅಸ್ವಸ್ಥತೆಯಿಂದ ಬಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Previous articleRCB ಸಂಭ್ರಮಾಚರಣೆ ಜನಸಾಗರದ ನಡುವೆ ಹಲವರು ಅಸ್ವಸ್ಥ
Next articleಮಲಿನಗೊಂಡ ನಂದಿನಿ ಸಮಸ್ಯೆ: ಉಸ್ತುವಾರಿ ಸಚಿವರ ಭೇಟಿ