ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದಿರಾ ಗಾಂಧಿಯವರ ಅರ್ಧದಷ್ಟು ಧೈರ್ಯವಾದರೂ ಇದ್ದಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳ್ಳು ಹೇಳುತ್ತಿದ್ದಾರೆಂದು ಸದನದಲ್ಲೇ ಘೋಷಿಸಲಿ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸವಾಲು ಹಾಕಿದ್ದಾರೆ.
ಆಪರೇಷನ್ ಸಿಂಧೂರ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆಯ ವೇಳೆ ಮಾತನಾಡಿದ ಅವರು, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿರುವುದಾಗಿ ಪದೇ ಪದೆ ಹೇಳಿ ಗೊಂದಲ ಸೃಷ್ಟಿಸಿದ್ದಾರೆ. ಅವರ ಹೇಳಿಕೆಯನ್ನು ಮೋದಿ ಸಾರ್ವಜನಿಕವಾಗಿ ನಿರಾಕರಿಸಲಿ ಎಂದರು.
ತಮ್ಮಿಂದಾಗಿಯೇ ಕದನ ವಿರಾಮ ಘೋಷಿಸಲಾಗಿದೆ ಎನ್ನುತ್ತಿರುವ ಟ್ರಂಪ್ ಮಾತು ನಿಜವಾಗಿರದಿದ್ದರೆ, ಸಾರ್ವಜನಿಕವಾಗಿ ಪ್ರಧಾನಿ ಇದು ಸುಳ್ಳು ಎಂದು ಹೇಳಲಿ. ಮೋದಿ ಅವರಿಗೆ ಇಂದಿರಾ ಗಾಂಧಿಯವರ ಅರ್ಧದಷ್ಟು ಧೈರ್ಯವಾದರೂ ಇದ್ದಲ್ಲಿ, ಟ್ರಂಪ್ ಹೇಳಿರುವುದು ಸುಳ್ಳು ಎಂದು ಸದನದಲ್ಲೇ ಘೋಷಿಸಲಿ ಎಂದು ಒತ್ತಾಯಿಸಿದರು.
ದಾಳಿಯ ಮಾಸ್ಟರ್ ಮೈಂಡ್ ಪಾಕ್ ಸೇನಾಧಿಕಾರಿ ಜನರಲ್ ಮುನೀರ್ ಪಹಲ್ಗಾಮ್ ದಾಳಿ ಬಳಿಕ ಡೊನಾಲ್ಡ್ ಟ್ರಂಪ್ ಜೊತೆಗೆ ಔತಣಕೂಟಕ್ಕೆ ಹೋಗುತ್ತಾರೆ. ಆದರೆ ಅಲ್ಲಿಗೆ ಹೋಗಲು ಪ್ರಧಾನಿ ನರೇಂದ್ರ ಮೋದಿಗೆ ಸಾಧ್ಯವಾಗಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಆಪರೇಷನ್ ಸಿಂಧೂರ ನಿರ್ವಹಿಸಿದ ರೀತಿಯನ್ನು ನೋಡಿದರೆ ಈ ಸರ್ಕಾರಕ್ಕೆ ಹೋರಾಡುವ ರಾಜಕೀಯ ಇಚ್ಛಾಶಕ್ತಿಯೇ ಇಲ್ಲ ಎನ್ನುವಂತಿದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿಯೇ ಯುದ್ಧ ನಿಲ್ಲಿಸುವಂತೆ ಸೇನೆಗೆ ಸೂಚಿಸಿತು ಎಂದು ಸರ್ಕಾರವನ್ನು ಕುಟುಕಿದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ನಾವೇ ಕದನ ವಿರಾಮಕ್ಕೆ ಕಾರಣ ಎಂದು ಹೇಳಿದರೂ, ಅವರನ್ನು ಸುಳ್ಳುಗಾರ ಎಂದು ಏಕೆ ಪ್ರಧಾನಿ ಕರೆಯಲಿಲ್ಲ ಎಂದು ಪ್ರಶ್ನಿಸಿದ ರಾಹುಲ್ ಆಪರೇಷನ್ ಸಿಂದೂರ್ ಮತ್ತು 1971ರ ಯುದ್ಧವನ್ನು ಹೋಲಿಸಿ ರಕ್ಷಣಾ ಸಚಿವ ರಾಜನಾಥ ಸಿಂಗ್ ತಪ್ಪು ಮಾಡಿದ್ದಾರೆ ಎಂದರು.
ಅಮೆರಿಕದ ಸೆವೆಂತ್ ಫ್ಲೀಟ್ ಹಿಂದೂ ಮಹಾಸಾಗರದಲ್ಲಿತ್ತು. ಆದರೆ ಆಗಿನ ಪ್ರಧಾನಿ ಇಂದಿರಾಗಾಂಧಿಯವರು, ಬಾಂಗ್ಲಾದೇಶಕ್ಕೆ ಏನು ಮಾಡಬೇಕೋ ಅದನ್ನು ನಾವು ಮಾಡುತ್ತೇವೆ ಎಂದರು. ಅದು ರಾಜಕೀಯ ಇಚ್ಛಾಶಕ್ತಿ ಎಂದು ಬಣ್ಣಿಸಿದರು.
ಈ ಕಾರ್ಯಾಚರಣೆಯನ್ನು ಪ್ರಧಾನಿ ತಮ್ಮ ಹೆಸರಿಗೆ ಚ್ಯುತಿ ಬರಬಾರದು ಎನ್ನುವ ಕಾರಣಕ್ಕಾಗಿ ಕೈಗೊಂಡರು ಎಂದು ಗಂಭೀರ ಆರೋಪ ಮಾಡಿದರು. ಈ ದಾಳಿಗಳ ಹಿಂದೆ ಇರುವುದು ಪಾಕ್ ಸೇನಾ ಮುಖ್ಯಸ್ಥ ಅಸೀಂ ಮುನೀರ್. ಇತ್ತೀಚೆಗೆ ಅವರು ಟ್ರಂಪ್ ಜೊತೆ ಡಿನ್ನರ್ ಕೂಟದಲ್ಲಿ ಪಾಲ್ಗೊಂಡಿದ್ದರು. ಈ ಕುರಿತು ಮೋದಿ ಏಕೆ ಏನೂ ಹೇಳಲಿಲ್ಲ ಎಂದು ಪ್ರಶ್ನಿಸಿದರು.