ಬಾಗಲಕೋಟೆ: ಪರೀಕ್ಷೆಯಲ್ಲಿ ನಕಲು ಮಾಡಿದ ಆರೋಪಕ್ಕೆ ಮನನೊಂದು ವಿದ್ಯಾರ್ಥಿನಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮುಧೋಳ ನಗರದ ಶಾರದಾ ಖಾಸಗಿ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ ಸೈನ್ಸ್ ಓದುತ್ತಿದ್ದ ತೇಜಸ್ವಿನಿ ದೊಡ್ಡಮನಿ (17) ಮೃತ ವಿದ್ಯಾರ್ಥಿನಿ. ತೇಜಸ್ವಿನಿ ದೊಡ್ಡಮನಿ, ಕಳೆದ ವಾರ ಫೆಬ್ರವರಿ 27 ರಂದು ರಸಾಯನಶಾಸ್ತ್ರ ವಿಷಯದ ವಾರ್ಷಿಕ ಪರೀಕ್ಷೆ ನಡೆಯಿತು.
ಪರೀಕ್ಷೆ ಬರೆಯುತ್ತಿದ್ದ ವೇಳೆ ವಿದ್ಯಾರ್ಥಿನಿ ನಕಲು ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಿದ ಪರೀಕ್ಷಾ ಮೇಲ್ವಿಚಾರಕರು ವಿದ್ಯಾರ್ಥಿನಿಯನ್ನು ಪ್ರಶ್ನಿಸಿದ್ದರು. ಘಟನೆ ಬಗ್ಗೆ ವಿದ್ಯಾರ್ಥಿನಿ ತನ್ನ ಪೋಷಕರ ಬಳಿ ದೂರು ನೀಡಿ ಮರುದಿನ ಅವರನ್ನು ಕಾಲೇಜಿಗೆ ಪೋಷಕರೊಂದಿಗೆ ಬಂದು ಕಾಲೇಜು ಸಿಬ್ಬಂದಿಯನ್ನು ಪ್ರಶ್ನಿಸಿದ್ದರು. ಈ ವೇಳೆ, ಆ ನಕಲು ಮಾಡಿರುವುದಕ್ಕೆ ಸಾಕ್ಷ್ಯವಾಗಿ ಸಿಸಿಟಿವಿ ದೃಶ್ಯಾವಳಿ ತೋರಿಸುವುದಾಗಿ ಹೇಳಿದ ಸಿಬ್ಬಂದಿಗಳು, ವಿದ್ಯಾರ್ಥಿನಿಗೆ ಬುದ್ದಿ ಹೇಳಿದ್ದರು ಎಂದು ತಿಳಿದುಬಂದಿದೆ. ಆ ಬಳಿಕ, ಕಾಲೇಜಿನಿಂದ ವಿದ್ಯಾರ್ಥಿ ಹೊರಗೆ ಓಡಿ ಹೋಗಿದ್ದರು. ಆಕೆಗಾಗಿ ಪೋಷಕರು ಮತ್ತು ಕಾಲೇಜು ಸಿಬ್ಬಂದಿ ಹುಡುಕಾಟ ನಡೆಸಿದರೂ, ಆಕೆ ಪತ್ತೆ ಆಗಿರಲಿಲ್ಲ. ಬಳಿಕ, ಪೋಷಕರು ಮುಧೋಳ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ದೂರು ದಾಖಲಿಸಿದ್ದರು. ಪೋಷಕರು ಹಾಗೂ ಪೊಲೀಸರು ವಿದ್ಯಾರ್ಥಿನಿಗಾಗಿ ಹುಡುಕಾಟ ನಡೆಸಿದ್ದು, ಇಂದು ಮಹಾರಾಣಿ ಕೆರೆಯಲ್ಲಿ ತೇಜಸ್ವಿನಿ ಶವವಾಗಿ ಪತ್ತೆಯಾಗಿದ್ದಾಳೆ.