ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಕೈಗಾ ಪರಮಾಣು ವಿದ್ಯುತ್ ಸ್ಥಾವರದ ಬಳಿಕ ರಾಜ್ಯದಲ್ಲಿ 2ನೇ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆ ಸಂಬಂಧ ಮಹತ್ವದ ನಿರ್ಧಾರ ಕೈ ಗೊಳ್ಳಲಾಗಿದೆಯಾದರೂ ಈಗಾಗಲೇ ಸೂಕ್ತ ಸ್ಥಳ ನಿಗದಿ ಸಂಬಂಧ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ (ಎನ್‌ಟಿಪಿಸಿ)ಕ್ಕೆ ಪ್ರಾಥಮಿಕ ವರದಿ ನೀಡುವಂತೆ ಸೂಚಿಸಲು ತೀರ್ಮಾನಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್.ಕೆ. ಪಾಟೀಲ್ ಹೇಳಿದರು.
ಎನ್‌ಟಿಪಿಸಿ ಈಗಾಗಲೇ ಗುರುತಿಸಿರುವ ವಿಜಯಪುರ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳು ಮಾತ್ರವಲ್ಲದೇ ಇಡೀ ರಾಜ್ಯವನ್ನು ಒಂದು ಘಟಕವನ್ನಾಗಿ ಪರಿಗಣಿಸಿ ರಾಜ್ಯದ ಯಾವ ಸ್ಥಳ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಸೂಕ್ತ ಎಂಬುದರ ಕುರಿತಂತೆ ಕಾರ್ಯಸಾಧ್ಯತಾ ಪ್ರಾಥಮಿಕ ವರದಿ ನೀಡುವಂತೆ ಎನ್‌ಟಿಪಿಸಿಗೆ ಸೂಚಿಸಲಾಗಿದೆ.
ಆದರೆ ರಾಜ್ಯ ಸರಕಾರ ಇಂತಹುದೇ ಸ್ಥಳಗಳನ್ನು ಆಯ್ದು ಅಧ್ಯಯನ ನಡೆಸುವಂತೆ ಯಾವುದೇ ನಿರ್ದಿಷ್ಟ ಸೂಚನೆ ನೀಡುವುದಿಲ್ಲ. ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಯೋಗ್ಯವಾದ ಸ್ಥಳಗಳನ್ನು ಗುರುತಿಸಿ ಅಧ್ಯಯನ ನಡೆಸಿ ವರದಿ ನೀಡಲು ಮಾತ್ರ ಸೂಚಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಕೊಪ್ಪಳ ಜಿಲ್ಲೆಯ ಕೆಲವು ಗ್ರಾಮಗಳಿಗೆ ಇತ್ತೀಚೆಗೆ ಎನ್‌ಟಿಪಿಸಿ ಅಧಿಕಾರಿಗಳು ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದ ಬೆನ್ನಲ್ಲೇ ಸ್ಥಳೀಯ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಎನ್‌ಟಿಪಿಸಿ ಗುರುತಿಸಿದ ನಿರ್ದಿಷ್ಟ ಸ್ಥಳಗಳ ಪೈಕಿ ಒಂದು ಸ್ಥಳ ಆಯ್ಕೆ ಮಾಡುವ ಬದಲು ಇಡೀ ರಾಜ್ಯವನ್ನು ಗಮನದಲ್ಲಿಟ್ಟುಕೊಂಡು ಹೊಸದಾಗಿ ಅಧ್ಯಯನ ನಡೆಸಲು ಸೂಚನೆ ನೀಡಿದೆ.
ಎನ್‌ಟಿಪಿಸಿಯ ಪ್ರಸ್ತಾವದಲ್ಲಿ ಏನಿದೆ?: ವಿಜಯಪುರ ಜಿಲ್ಲೆಯ ಮಣ್ಣೂರು, ಕೊಪ್ಪಳ ಜಿಲ್ಲೆಯ ಕುಕನಪಲ್ಲಿ ಹಾಗೂ ರಾಯಚೂರು ಜಿಲ್ಲೆಯ ಹಲ್ಕವಟಗಿ ಗ್ರಾಮಗಳಲ್ಲಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಎನ್‌ಟಿಪಿಸಿ 2024ರ ನವೆಂಬರ್ 4ರಂದು ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.
ಉದ್ದೇಶಿತ ಯೋಜನೆ 2 ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಸ್ಥಾವರವಾಗಿದೆ. ಇದಕ್ಕೆ 1,200 ಎಕರೆ ಭೂಮಿ ಅಗತ್ಯವಿದೆ. 4 ಸಾವಿರ ಮೆಗಾವ್ಯಾಟ್‌ಗೆ 1,600 ಎಕರೆ ಮತ್ತು 6 ಸಾವಿರ ಮೆಗಾವ್ಯಾಟ್‌ಗೆ 2 ಸಾವಿರ ಎಕರೆ ಭೂಮಿ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಪೂರಕವಾಗಿ ಕಾಲೋನಿ ಸ್ಥಾಪಿಸಲು ಹೆಚ್ಚುವರಿ 150 ಎಕರೆ ಜಮೀನು ಬೇಕಾಗುತ್ತದೆ. ಅಲ್ಲದೇ ಸ್ಥಾವರದ ಸಾಮರ್ಥ್ಯಕ್ಕೆ ತಕ್ಕಂತೆ 2 ರಿಂದ 6 ಟಿಎಂಸಿ ಅಡಿ ನೀರು ಬೇಕಾಗುತ್ತದೆ.