ಬೆಳಗಾವಿ: ಗಡಿನಾಡ ಬೆಳಗಾವಿಯಲ್ಲಿ ಕನ್ನಡ ಕಡ್ಡಾಯ ವಿರೋಧಿಸಿ ಎಂಇಎಸ್ ನಗರಸೇವಕ ರವಿ ಸಾಳುಂಕೆ ನೇತೃತ್ವದ ಗುಂಪು ಮಹಾರಾಷ್ಟ್ರ ಸಿಎಂ ದೇವೆಂದ್ರ ಫಡ್ನವೀಸ್‌ಗೆ ಮನವಿ ಪತ್ರ ಅರ್ಪಿಸಿದೆ.
ಕಳೆದ ಕೆಲ ದಿನಗಳ ಹಿಂದೆ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಕಾರಿನ ಮೇಲೆ ಕನ್ನಡ ನಾಮಫಲಕ ಸೇರಿದಂತೆ ಪಾಲಿಕೆಯಲ್ಲಿ ಕನ್ನಡ ಅನುಷ್ಠಾನಗೊಳಿಸುವ ಕೆಲಸವನ್ನು ಆಯುಕ್ತರು ಮಾಡಿದ್ದರು. ಪಾಲಿಕೆ ಸಭೆಯಲ್ಲಿ ರವಿ ಸಾಳುಂಕೆ ಕನ್ನಡ ಅನುಷ್ಠಾನಕ್ಕೆ ಅಡ್ಡಿಪಡಿಸಿ ಮರಾಠಿ ದಾಖಲೆ ಕೇಳಿದ್ದರಿಂದ ದೊಡ್ಡಮಟ್ಟದ ಕೋಲಾಹಲ ನಡೆದಿತ್ತು.
ಇದಾದ ನಂತರ ಎಂಇಎಸ್ ನೇತೃತ್ವದಲ್ಲಿ ಮಹಾರಾಷ್ಟ್ರ ಸಿಎಂಗೆ ಕನ್ನಡ ಕಡ್ಡಾಯದ ವಿರುದ್ಧ ಮನವಿ ಪತ್ರ ಅರ್ಪಿಸಿದ್ದಾರೆ, ಆದರೆ ಅದಕ್ಕೆ ಮಹಾರಾಷ್ಟ್ರ ಸಿಎಂ ಯಾವ ಉತ್ತರ ಕೊಟ್ಟರು ಎನ್ನುವುದು ಗೊತ್ತಾಗಿಲ್ಲ.
ಮನವಿ ಪತ್ರದಲ್ಲಿ ಏನಿದೆ?: ಬೆಳಗಾವಿಯಲ್ಲಿ `ಕನ್ನಡ ಕಡ್ಡಾಯ’ದ ಹೆಸರಿನಲ್ಲಿ ಮರಾಠಿ ಭಾಷಿಕರ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ. ಮಹಾನಗರ ಪಾಲಿಕೆಯ ಫಲಕಗಳು, ವಾಹನಗಳ ನಂಬರ್ ಪ್ಲೇಟುಗಳು, ಗಣೇಶೋತ್ಸವದ ಫಲಕಗಳನ್ನು ಕೇವಲ ಕನ್ನಡದಲ್ಲಿ ಹಾಕಲಾಗಿದೆ ಎಂದು ಸಾಳುಂಕೆ ಮನವಿ ಪತ್ರದಲ್ಲಿ ವಿವರಿಸಿದ್ದಾರೆ.
ಇದೆಲ್ಲದರ ನಡುವೆ ಕನ್ನಡ ಪರ ಸಂಘಟನೆಗಳು ಎಂಇಎಸ್‌ನ ರವಿ ಸಾಳುಂಕೆ ಸೇರಿದಂತೆ ಮೂವರು ನಗರಸೇವಕರ ಸದಸ್ಯತ್ವವನ್ನು ರದ್ದು ಮಾಡಬೇಕೆಂದು ಡಿಸಿಯವರಿಗೆ ಮನವಿ ಪತ್ರ ಅರ್ಪಿಸಿದ್ದರು.
ಮೇಯರ್‌ಗೆ ಮನವಿ: ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಕಡ್ಡಾಯವಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಎಂಇಎಸ್ ಸದಸ್ಯರು ನೇರವಾಗಿ ಬೆಳಗಾವಿ ಮೇಯರ್ ಮಂಗೇಶ್ ಪವಾರ್ ಅವರನ್ನು ಭೇಟಿ ಮಾಡಿ ಕನ್ನಡ ಕಡ್ಡಾಯ ಅನುಷ್ಠಾನ ಹಿಂಪಡೆಯಲು ಈ ಹಿಂದೆಯೇ ಒತ್ತಾಯ ಮಾಡಿದ್ದರು.
ಇದರ ಮರುದಿನವೇ ಗಡಿನಾಡ ಬೆಳಗಾವಿಯಲ್ಲಿ ಮತ್ತೇ ಎಂಇಎಸ್ ಪುಂಡಾಟಿಕೆಗೆ ಬ್ರೆಕ್ ಹಾಕುವ ನಿಟ್ಟಿನಲ್ಲಿ ಕಿತ್ತೂರು ಕರ್ನಾಟಕ ಸೇನೆ ಸಂಘಟನೆ ಮುಖಂಡ ಮಹಾದೇವ ತಳವಾರ ನೇತೃತ್ವದಲ್ಲಿ ಈ ಕುರಿತಂತೆ ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರು, ಪೊಲೀಸ್ ಆಯುಕ್ತರು ಸೇರಿದಂತೆ ಮೇಯರ್, ಉಪಮೇಯರ್‌ಗೆ ಮನವಿ ಸಲ್ಲಿಸಿದ್ದರು. ಅಲ್ಲದೇ ಮಹಾನಗರ ಪಾಲಿಕೆಯಲ್ಲಿ ಕನ್ನಡ ಅನುಷ್ಠಾನ ಸರಿಯಾಗಿ ಉತ್ತಮವಾಗಿ ನಡೆದಿದೆ. ಮೇಯರ್, ಉಪಮೇಯರ್ ಅವರು ಬಳಸುವ ಪಾಲಿಕೆಯ ವಾಹನದ ಮೇಲೆ ಸಂಪೂರ್ಣ ಕನ್ನಡ ನಂಬರ ಪ್ಲೇಟ, ನಾಮಫಲಕವನ್ನು ಅಳವಡಿಸಲಾಗಿದೆ. ಇದು ಹೆಮ್ಮೆಯ ಸಂಗತಿ ಎಂದು ಅಭಿನಂದಿಸಿದ್ದರು.
ಪಾಲಿಕೆ ಸಾಮಾನ್ಯ ಸಭೆಯಲ್ಲೂ ಗದ್ದಲ: ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯ ಆರಂಭದಲ್ಲಿಯೇ ಅಜೆಂಡಾದಲ್ಲಿನ ವಿಷಯ ಬದಿಗೊತ್ತಿದ ಎಂಇಎಸ್ ಸದಸ್ಯ ರವಿ ಸಾಳುಂಕೆ ಮರಾಠಿಯಲ್ಲಿ ದಾಖಲೆ ಕೊಡಿ ಎಂದು ವಾದ ಮಾಡತೊಡಗಿದ್ದರು. ಎಂಇಎಸ್ ಸದಸ್ಯರ ಬೇಡಿಕೆಗೆ ಕೆರಳಿದ ಸರ್ಕಾರಿ ನಾಮ ನಿರ್ದೇಶಿತ ಸದಸ್ಯ ರಮೇಶ ಸೊಂಟಕ್ಕಿ ಸೇರಿದಂತೆ ಬಿಜೆಪಿಯ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ವಾದ-ವಿವಾದ ಜೋರಾಗಿ ಸಭೆಯಲ್ಲಿ ಕಾವೇರಿದ ವಾತಾವರಣ ನಿರ್ಮಾಣವಾಗಿತ್ತು. ಪರಿಸ್ಥಿತಿ ಹತೋಟಿಗೆ ತರಲು ಮೇಯರ್ ಶ್ರಮಪಟ್ಟರು. ಆದರೆ, ಆಕ್ರೋಶ ಹೆಚ್ಚಾದ ಕಾರಣ ಸಭೆಯನ್ನು ಕೆಲ ಹೊತ್ತು ಮುಂದೂಡಿದ್ದರು.