ನವದೆಹಲಿ: ಕೇಂದ್ರ ಸರ್ಕಾರವು ಹಿಂಸಾಚಾರ ಪೀಡಿತ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಇನ್ನೂ 6 ತಿಂಗಳ ಕಾಲ ವಿಸ್ತರಿಸಲು ರಾಜ್ಯಸಭೆ ಅನುಮೋದನೆ ನೀಡಿದೆ. ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತವನ್ನು ಆರು ತಿಂಗಳ ಕಾಲ ವಿಸ್ತರಣೆಯ ಪ್ರಸ್ತಾವವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಮಂಡಿಸಿದ್ದು ಸದನವು ಅಂಗೀಕರಿಸಿದೆ.
ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ರಾಜೀನಾಮೆಯ ಬಳಿಕ, ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಿತ್ತು. ಮಣಿಪುರಕ್ಕೆ ಸಂಬಂಧಿಸಿದಂತೆ ಸಂವಿಧಾನದ 356ನೇ ವಿಧಿ ಅನ್ವಯ 2025ರ ಫೆಬ್ರವರಿ 13ರಂದು ರಾಷ್ಟ್ರಪತಿಗಳು ನೀಡಿದ ಸುಗ್ರೀವಾಜ್ಞೆಯನ್ನ 2025ರ ಆಗಸ್ಟ್ 13ರಿಂದ ಆರು ತಿಂಗಳ ಕಾಲ ಮುಂದುವರಿಸಲು ಸದನ ಒಪ್ಪಿಗೆ ನೀಡಬೇಕಿದೆ ಎಂದು ಸದನದಲ್ಲಿ ಮಂಡಿಸಲಾದ ನೋಟಿಸ್‌ನಲ್ಲಿ ತಿಳಿಸಲಾಗಿತ್ತು, ಆಗಸ್ಟ್ 13ರಿಂದ ಅನ್ವಯವಾಗುವಂತೆ 6 ತಿಂಗಳ ಕಾಲ ರಾಷ್ಟ್ರಪತಿ ಆಡಳಿತ ವಿಸ್ತರಣೆಯಾಗಲಿದೆ.
ರಾಜ್ಯದಲ್ಲಿ ಜನಪರ ಸರ್ಕಾರವನ್ನು ಸ್ಥಾಪಿಸುವಂತೆ ಆಗ್ರಹಿಸಿ ರಾಜ್ಯದ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ 21 ಶಾಸಕರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಏಪ್ರಿಲ್‌ನಲ್ಲಿ ಪತ್ರ ಬರೆದಿದ್ದರು. ಮಣಿಪುರ ಬಹುನಿರೀಕ್ಷೆಯಿಂದ ರಾಷ್ಟ್ರಪತಿ ಆಡಳಿತವನ್ನು ಸ್ವಾಗತಿಸಿತ್ತು. ಆದರೆ ಶಾಂತಿ ಮತ್ತು ಸಹಜ ಸ್ಥಿತಿ ನಿರ್ಮಾಣವಾಗುವಂತೆ ಯಾವುದೇ ಕ್ರಮ ಕೈಗೊಳ್ಳುತ್ತಿರುವುದು ಕಾಣಿಸುತ್ತಿಲ್ಲ ಎಂದು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗಿತ್ತು.
2023ರ ಹೈಕೋರ್ಟ್ ಆದೇಶದ ವಿರುದ್ಧವಾಗಿ ಬುಡಕಟ್ಟು ಸಮುದಾಯದ ಮೆರವಣಿಗೆಯೊಂದನ್ನು ಆಯೋಜಿಸಲಾಗಿತ್ತು ಈ ವೇಳೆ ಎರಡು ಸಮುದಾಯಗಳ ನಡುವೆ ಹಿಂಸಾಚಾರ ಏರ್ಪಟ್ಟಿತು. ಇಲ್ಲಿಂದ ಸತತವಾಗಿ ಜನಾಂಗೀಯ ಹಿಂಸಾಚಾರ ಶುರುವಾಗಿದೆ. ಪರಿಸ್ಥಿತಿ ನಿಯಂತ್ರಿಸುವಲ್ಲಿ ವಿಫಲವಾದ ಹಿನ್ನೆಲೆ ಮುಖ್ಯಮಂತ್ರಿ ಸ್ಥಾನಕ್ಕೆ ಬಿರೇನ್ ಸಿಂಗ್ ರಾಜೀನಾಮೆ ನೀಡಿದ್ದರು.
ಇದಾದ ಕೆಲವೇ ದಿನಗಳಲ್ಲಿ ಅಂದ್ರೆ ಈ ವರ್ಷ ಫೆಬ್ರವರಿ 13ರಂದು 6 ತಿಂಗಳ ಕಾಲ ರಾಷ್ಟ್ರಪತಿ ಆಳ್ವಿಕೆ ಹೇರಲಾಯಿತು. ಗಂಭೀರ ರಾಜಕೀಯ ಅಸ್ಥಿರತೆ ಮತ್ತು ಕಾನೂನು-ಸುವ್ಯವಸ್ಥೆ ಕುರಿತ ಆತಂಕಗಳ ಮಧ್ಯೆ, ರಾಷ್ಟ್ರಪತಿ ದ್ರೌಪದಿ ಮುರ್ಮು, ರಾಜ್ಯಪಾಲರ ವರದಿಯ ಆಧಾರದ ಮೇಲೆ ಫೆಬ್ರವರಿಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿದ್ದರು.
ಸಂವಿಧಾನದ 356ನೇ ವಿಧಿಯಡಿ, ರಾಷ್ಟ್ರಪತಿಯು ರಾಜ್ಯದ ಆಡಳಿತ ಕಾರ್ಯಗಳನ್ನು ರಾಜ್ಯಪಾಲರ ಮೂಲಕ ನೇರವಾಗಿ ನಿಯಂತ್ರಿಸುತ್ತಾರೆ. ಮಣಿಪುರ ವಿಧಾನಸಭೆಯ ಅಧಿಕಾರವನ್ನು ಸಂಸತ್‌ಗೆ ವರ್ಗಾಯಿಸಲಾಗಿದ್ದು, ರಾಜ್ಯ ಸರ್ಕಾರದ ಅಧಿಕಾರವನ್ನು ಅಮಾನತುಗೊಳಿಸಲಾಗಿದೆ. ಈ ಆದೇಶದಂತೆ, ರಾಜ್ಯಪಾಲರ ಅಧಿಕಾರವನ್ನು ರಾಷ್ಟ್ರಪತಿಯು ವಹಿಸಿಕೊಂಡಿದ್ದಾರೆ ಮತ್ತು ರಾಜ್ಯದ ಶಾಸಕಾಂಗದ ಅಧಿಕಾರವನ್ನು ಸಂಸತ್ ತೆಗೆದುಕೊಂಡಿದೆ.
ರಾಜ್ಯದ ಎಲ್ಲಾ ಕಾನೂನುಗಳು ಮತ್ತು ನಿರ್ಧಾರಗಳನ್ನು ಈಗ ಕೇಂದ್ರದ ಅಧಿಕಾರದಡಿ ಸಂಸತ್ ಅಥವಾ ರಾಷ್ಟ್ರಪತಿಯಿಂದ ತೆಗೆದುಕೊಳ್ಳಲಾಗುತ್ತದೆ. ರಾಜಕೀಯ ಅಸ್ಥಿರತೆ ಮತ್ತು ಎರಡು ವರ್ಷಗಳಿಂದ ರಾಜ್ಯದಲ್ಲಿ ಮುಂದುವರಿದ ಹಿಂಸಾಚಾರದಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ 1951ರಿಂದ ಇದು 11ನೇ ಬಾರಿಗೆ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ.