ಸೆಪ್ಟೆಂಬರ್, ಅಕ್ಟೋಬರ್ ತಿಂಗಳಿನಲ್ಲಿ ಖರ್ಗೆ ಪ್ರಧಾನಿಯಾಗುವ ಸಾಧ್ಯತೆ!

1
140

ಹುಬ್ಬಳ್ಳಿ: “ಸೆಪ್ಟೆಂಬರ್, ಅಕ್ಟೋಬರ್ ತಿಂಗಳಿನಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಮಹತ್ತರ ಬದಲಾವಣೆಯಾಗಲಿದೆ. ಮೋದಿ ಅವರು ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಆಗ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಾಗಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರಧಾನಮಂತ್ರಿ ಆಗುವ ಯೋಗವಿದೆ” ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅಭಿಪ್ರಾಯಪಟ್ಟರು.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, “ಬಿಜೆಪಿಯ ಕೆಲ ನಾಯಕರು `ದಲಿತ ನಾಯಕರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿ’ ಎಂದು ಕಾಂಗ್ರೆಸ್ ಸರ್ಕಾರವನ್ನು ವ್ಯಂಗ್ಯ ಮಾಡುತ್ತಿದ್ದಾರೆ. ಅವರು ಮಾಡಿರುವ ವ್ಯಂಗ್ಯ ಮುಂದಿನ ದಿನಗಳಲ್ಲಿ ಸತ್ಯವಾದರೂ ಆಗಬಹುದು. 75 ವರ್ಷ ವಯಸ್ಸಾದವರು ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ ಭಾಗವತ ಅವರೇ ಹೇಳಿದ್ದಾರೆ. ಅವರ ಮಾತಿಗೆ ಮೋದಿ ಬೆಲೆಕೊಟ್ಟು ಅಧಿಕಾರದಿಂದ ಕೆಳಗಿಳಿಯಲಿದ್ದಾರೆ ಎಂದು ಭಾವಿಸಿದ್ದೇನೆ” ಎಂದರು.

“ಜೆಡಿಯು ಮತ್ತು ಟಿಡಿಪಿ ಎರಡೂ ಬಿಜೆಪಿ ಪರ ಇದ್ದ ಪಕ್ಷಗಳಲ್ಲ. 240 ಸದಸ್ಯರ ಬಲ ಹೊಂದಿರುವ ಬಿಜೆಪಿ ನಾಯಕ, ಪ್ರಧಾನಿ ಮೋದಿ ಅವರು ವಯೋಕಾರಣದಿಂದ ಅಧಿಕಾರದಿಂದ ಕೆಳಗಿಳಿದರೆ, ಜೆಡಿಯು ಮತ್ತು ಟಿಡಿಪಿ ಪಕ್ಷಗಳು ಬಿಜೆಪಿಗೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆಯುತ್ತವೆ. ಆಗ ಬಿಜೆಪಿ ಸರ್ಕಾರ ತಂತಾನೆ ಬೀಳಲಿದ್ದು, ಸರ್ಕಾರ ರಚನೆಗೆ ಕಾಂಗ್ರೆಸ್ ಪಕ್ಷಕ್ಕೆ ಅವಕಾಶ ದೊರೆಯಬಹುದು” ಎಂದರು.

“ಕಾಂಗ್ರೆಸ್ ಯಾವಾಗಲೂ ಅಧಿಕಾರಕ್ಕೆ ಹಪಹಪಿ ಪಡುವ ಪಕ್ಷವಲ್ಲ. ಈ ಹಿಂದೆಯೂ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಂತೆ ಸೋನಿಯಾ ಗಾಂಧಿ ಅವರನ್ನು ಆಹ್ವಾನಿಸಲಾಗಿತ್ತು. ಆದರೆ, ಅವರು ಡಾ. ಮನಮೋಹನ ಸಿಂಗ್ ಅವರನ್ನು ಪ್ರಧಾನಿಯನ್ನಾಗಿ ಮಾಡಿದರು. ತ್ಯಾಗಕ್ಕೆ ಹೆಸರುವಾಸಿಯಾಗಿರುವ ಗಾಂಧಿ ಕುಟುಂಬದವರು ಈ ಬಾರಿಯೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿಯನ್ನಾಗಿ ಮಾಡಿದರೂ ಅಚ್ಚರಿ ಇಲ್ಲ” ಎಂದರು.

“ಕೇಂದ್ರದಲ್ಲಿ ಬದಲಾವಣೆ ಆಗಬಹುದು. ಆದರೆ, ರಾಜ್ಯ ಸರ್ಕಾರ ಪೂರ್ಣಾವಧಿಗೆ ಸುಸ್ಥಿರ ಆಡಳಿತ ನೀಡಲಿದೆ. ಇನ್ನೂ 2.10 ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ” ಎಂದು ಸ್ಪಷ್ಟಪಡಿಸಿದರು.

ಹಣಕಾಸಿನ ಸ್ಥಿತಿಗತಿ ಬಗ್ಗೆ ಶ್ವೇತಪತ್ರ: “ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿಗತಿಯ ಬಗ್ಗೆ ವಿಪಕ್ಷಗಳು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ಜನರಿಗೆ ಸರಿಯಾದ ಮಾಹಿತಿ ನೀಡುವ ಉದ್ದೇಶದಿಂದ ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ಹಣಕಾಸಿನ ಸ್ಥಿತಿಗತಿಯ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ಮುಖ್ಯಮಂತ್ರಿಗಳಿಗೆ ಸಲಹೆ ನೀಡಲಾಗುವುದು” ಎಂದು ಬಸವರಾಜ ರಾಯರಡ್ಡಿ ಹೇಳಿದರು.

“ರಾಜ್ಯ ಸರ್ಕಾರ ದಿವಾಳಿಯಾಗಿದೆ. ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ವಿಪಕ್ಷಗಳು ನಿರಂತರವಾಗಿ ಆರೋಪಿಸುತ್ತಿವೆ. ಇವರ ಆರೋಪಕ್ಕೆ ಜನತೆ ಕಿವಿಗೊಡುವ ಅವಶ್ಯಕತೆ ಇಲ್ಲ. ರಾಜ್ಯದ ಅಭಿವೃದ್ಧಿಗಾಗಿ ಕಳೆದ ಬಜೆಟ್‌ನಲ್ಲಿ 83 ಸಾವಿರ ಕೋಟಿ ರೂ. ಮೀಸಲಿರಿಸಿದ್ದೇವೆ. ಇಷ್ಟು ಹಣವನ್ನ ಹಿಂದಿನ ಯಾವ ಸರ್ಕಾರಗಳೂ ಮೀಸಲು ಇಟ್ಟಿರಲಿಲ್ಲ” ಎಂದರು.

Previous articleಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಪತ್ನಿಗೆ ಬಿಗ್ ರಿಲೀಫ್ ಕೊಟ್ಟ ಸುಪ್ರೀಂಕೋರ್ಟ್
Next articleಶಾಸಕರಿಗೆ ಅನುದಾನ ಹಂಚಿಕೆ: ಯಾರಿಗೆ ಎಷ್ಟು?

1 COMMENT

LEAVE A REPLY

Please enter your comment!
Please enter your name here