ನವದೆಹಲಿ: ಶ್ರಾವಣ ಮಾಸದ ಆರಂಭದಲ್ಲಿಯೇ ಸಿಹಿಸುದ್ದಿ. ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಕಡಿತಗೊಳಿಸಿವೆ. ಆಗಸ್ಟ್ 1ರ ಶುಕ್ರವಾರದಿಂದಲೇ ಹೊಸ ದರ ಅನ್ವಯವಾಗಲಿದೆ.
ವಾಣಿಜ್ಯ ಬಳಕೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆ ರೂ. 33.50 ಪೈಸೆ ಕಡಿತಗೊಳಿಸಲಾಗಿದೆ. ಇದರಿಂದಾಗಿ ಹೋಟೆಲ್ ಸೇರಿದಂತೆ ವಾಣಿಜ್ಯ ಸಿಲಿಂಡರ್ ಬಳಕೆ ಮಾಡುವ ಜನರಿಗೆ ಕೊಂಚ ನೆಮ್ಮದಿ ಸಿಕ್ಕಿದೆ. ಪ್ರತಿ ತಿಂಗಳ ಮೊದಲ ದಿನ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಪರಿಷ್ಕರಣೆ ಮಾಡಲಾಗುತ್ತದೆ.
ಬೆಂಗಳೂರಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 1,738 ರೂ. ಇದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೆಲೆ ಆಗಸ್ಟ್ 1ರಿಂದ 33.5 ರೂ.ಗಳಷ್ಟು ಇಳಿದು 1,631.50 ರೂಪಾಯಿಗೆ ತಲುಪಿದೆ. ಆಯಾ ರಾಜ್ಯದ ಸ್ಥಳೀಯ ತೆರಿಗೆಗಳು ಹಾಗೂ ಸಾಗಾಣಿಕೆ ವೆಚ್ಚವನ್ನು ಆಧರಿಸಿ, ರಾಜ್ಯದಿಂದ ರಾಜ್ಯಕ್ಕೆ ಅನಿಲ ಸಿಲಿಂಡರ್‌ಗಳ ದರದಲ್ಲಿ ವ್ಯತ್ಯಾಸವಾಗುತ್ತದೆ.
ಭಾರತದಲ್ಲಿ ಒಟ್ಟು ಎಲ್‌ಪಿಜಿ ಬಳಕೆಯ ಸುಮಾರು ಶೇ 90 ಗೃಹ ಬಳಕೆಗೆ ಸಂಬಂಧಿಸಿದೆ. ಆದರೆ ವಾಣಿಜ್ಯ ಸಿಲಿಂಡರ್‌ಗಳ ದರ ಕಡಿತವು ವ್ಯಾಪಾರ ಕ್ಷೇತ್ರದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ತೈಲ ಕಂಪನಿಗಳು ಪ್ರತಿ ತಿಂಗಳ ಆರಂಭದಲ್ಲಿ ಎಲ್‌ಪಿಜಿ ಸಿಲಿಂಡರ್ ದರವನ್ನು ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆ ಮತ್ತು ವಿನಿಮಯ ದರದ ಆಧಾರದ ಮೇಲೆ ಪರಿಷ್ಕರಿಸುತ್ತವೆ. ಇತ್ತೀಚಿನ ತಿಂಗಳುಗಳಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಹಲವಾರು ಕಡಿತಗಳು ಕಂಡಿವೆ.
ಜುಲೈ ಆರಂಭದಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 58.5 ರೂ.ಗಳಷ್ಟು ಕಡಿಮೆ ಮಾಡಲಾಗಿತ್ತು. ಆಗ ದೆಹಲಿಯಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 1,665 ರೂ. ಆಗಿತ್ತು. ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಸತತ ಐದನೇ ತಿಂಗಳೂ ಸಹ ಇಳಿಕೆಯಾಗಿದೆ. ಏಪ್ರಿಲ್‌ನಲ್ಲಿ 41 ರೂಪಾಯಿ ಹಾಗೂ ಮೇ ತಿಂಗಳಲ್ಲಿ 14.50 ರೂಪಾಯಿ ಮತ್ತು ಜುಲೈ-ಜೂನ್ ತಿಂಗಳಲ್ಲಿ ಅನಿಲ ಬೆಲೆಯನ್ನು 24 ರೂ. ಮತ್ತು ಕಡಿಮೆ ಮಾಡಿದ್ದವು.
ವಾಣಿಜ್ಯ ಸಿಲಿಂಡರ್ ಬಲೆ ಇಳಿಕೆಯಿಂದಾಗಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ರಸ್ತೆಬದಿಯ ಆಹಾರ ಮಳಿಗೆಗಳು ಮತ್ತು ಇತರ ವಾಣಿಜ್ಯ ಸಂಸ್ಥೆಗಳಿಗೆ ಕೊಂಚ ನೆಮ್ಮದಿಯ ಭಾವ ಮೂಡಿದೆ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ದೈನಂದಿನ ಕಾರ್ಯಾಚರಣೆಗೆ ಬಳಸುವ ವ್ಯಾಪಾರಿಗಳಿಗೆ ಈ ಕಡಿತವು ವೆಚ್ಚವನ್ನು ಕಡಿಮೆಗೊಳಿಸಿ, ಉತ್ತಮ ಸೇವೆಯನ್ನು ಒದಗಿಸಲು ಅಥವಾ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಉತ್ಪನ್ನಗಳನ್ನು ನೀಡಲು ಸಹಾಯಕವಾಗಲಿದೆ.
ಗೃಹ ಬಳಕೆಯ ಸಿಲಿಂಡರ್‌ಗಳ ಬೆಲೆ ಸ್ಥಿರವಾಗಿರುವುದರಿಂದ, ಗೃಹಿಣಿಯರಿಗೆ ಈ ಬದಲಾವಣೆಯಿಂದ ಯಾವುದೇ ಪರಿಣಾಮ ಬೀರದು. ಗೃಹ ಬಳಕೆಯ 14.2 ಕೆಜಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಗೃಹ ಬಳಕೆಯ ಸಿಲಿಂಡರ್ ಬೆಲೆಯನ್ನು ಕೊನೆಯದಾಗಿ ಏಪ್ರಿಲ್‌ನಲ್ಲಿ 50 ರೂಪಾಯಿ ಏರಿಸಲಾಗಿತ್ತು. ಅದಾದ ಬಳಿಕ ಯಾವುದೇ ಪರಿಷ್ಕರಣೆ ಮಾಡಿಲ್ಲ, ಪ್ರಸ್ತುತ ಗೃಹ ಬಳಕೆ ಸಿಲಿಂಡರ್ 853 ರೂಪಾಯಿ ಇದ್ದು, ಮುಂದಿನ ಬಾರಿ ಇಳಿಕೆಯಾಗಲಿದೆಯೇ ಎಂದು ನೋಡಬೇಕಾಗಿದೆ.