KPSCಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ: ಜವಾಬ್ದಾರಿಯುತ ಆಯೋಗ ರಚಿಸಿ

0
26

KPSC ಪುನರ್ ರಚನೆ ಕುರಿತು ಡಿ. ವಿ. ಸದಾನಂದ ಗೌಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ಬೆಂಗಳೂರು: KPSCಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ ಹೊಸ, ಪಾರದರ್ಶಕ ಮತ್ತು ಜವಾಬ್ದಾರಿಯುತ ಆಯೋಗವನ್ನು ರಚಿಸಬೇಕು ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಡಿ. ವಿ. ಸದಾನಂದ ಗೌಡ ಕೆಪಿಎಸ್‌ಸಿ ಪುನರ್ ರಚನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರವನ್ನು ಬರೆದಿದ್ದಾರೆ.
ಈ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಪತ್ರದ ವಿವರ: ಡಿ. ವಿ. ಸದಾನಂದ ಗೌಡರು ತಮ್ಮ ಪತ್ರದಲ್ಲಿ ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸುತ್ತಿರುವ ನೇಮಕಾತಿ ಪರೀಕ್ಷೆಗಳಲ್ಲಿನ ನಿರಂತರ ಅಶುದ್ಧತೆಗಳು ಸಾವಿರಾರು ಪ್ರತಿಭಾನ್ವಿತ ಯುವಕರ ಭವಿಷ್ಯವನ್ನು ಅಂಧಕಾರಕ್ಕಿಳಿಸುತ್ತಿವೆ. ಇತ್ತೀಚಿನ ಕನ್ನಡ ಅನುವಾದ ದೋಷಗಳು ಮಾತ್ರವಲ್ಲ, ಈ ಹಿಂದಿನ ಅನೇಕ ಪರೀಕ್ಷೆಗಳಲ್ಲೂ ನಡೆದ ಅಕ್ರಮಗಳು, ಅಶಿಸ್ತಿನ ಕೆಲಸ ಹಾಗೂ ಆಯೋಗದ ನಿರ್ಲಕ್ಷ್ಯ ದೃಢವಾಗಿ ಆಕ್ಷೇಪಾರ್ಹ.
ನಾನು ಇತ್ತೀಚೆಗೆ ಕಲ ವಿದ್ಯಾರ್ಥಿಗಳ ಮಾತುಗಳನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಯೋಗ್ಯತೆ ಹಾಗೂ ಶ್ರಮದ ಮೇಲೆ ನಮ್ಮ ಭವಿಷ್ಯ ನಿರ್ಮಿಸಿಕೊಳ್ಳಲು ಹೊರಟಿದ್ದೇವೆ, ಆದರೆ ಸರ್ಕಾರ ಮತ್ತು ಆಯೋಗದ ನಿರ್ಲಕ್ಷ್ಯದಿಂದ ನಮ್ಮ ಕನಸುಗಳು ಕಿತ್ತುಕೊಳ್ಳಲಾಗುತ್ತಿದೆ ಎಂಬ ಅವರ ನೋವಿನ ಮಾತು ಬಹಳ ಖೇದಖರವಾಗಿದೆ. ಅವರ ಆಕ್ರೋಶ ಮತ್ತು ನಿರಾಸೆ ಪರಿಗಣನೆಗೆ ಒಳಗಾಗಲೇಬೇಕು. ಇದು ಕೆಲವೊಬ್ಬರ ವೈಯಕ್ತಿಕ ಸಮಸ್ಯೆಯಾಗಿರುವುದಿಲ್ಲ, ಇದು ಕರ್ನಾಟಕದ ಇಡೀ ಯುವಜನತೆಗೆ ಹೊಡೆತವಾಗಿದೆ.
ಈ ಎಲ್ಲಾ ಗೊಂದಲಕ್ಕೆ ಸರ್ಕಾರವೇ ಹೊಣೆ. KPSCಯನ್ನು ಸರಿಪಡಿಸುತ್ತೇವೆ, ದೋಷಗಳನ್ನು ತಿದ್ದುತ್ತೇವೆ ಎಂದು ನೀಡಿದ ಭರವಸೆಗಳು ಕೇವಲ ಮಾತಾಗಿವೆ. ಒಂದು ಪರೀಕ್ಷೆಯನ್ನು ಸರಿಯಾಗಿ ನಡೆಸಿದ ಕಾರಣಕ್ಕೆ ಆಯೋಗವನ್ನು ಹೊಗಳಲು ಸಾಧ್ಯವಿಲ್ಲ. KPSCಯ ನಿರಂತರ ಅವ್ಯವಸ್ಥೆ ಮತ್ತು ಆಡಳಿತಾತ್ಮಕ ವೈಫಲ್ಯವನ್ನು ನೋಡಿದರೆ, ಈ ಆಯೋಗವನ್ನು ಇನ್ನಷ್ಟು ಮುಂದುವರಿಸಲು ಯಾವುದೇ ಅರ್ಥವಿಲ್ಲ.
ನಾನು ಕರ್ನಾಟಕ ಸರ್ಕಾರವನ್ನು ಹಾಗೂ KPSCಯನ್ನು ತೀವ್ರವಾಗಿ ಖಂಡಿಸುತ್ತೇನೆ. ಈ ಆಯೋಗದ ಕಚೇರಿಯಲ್ಲಿ ನಡೆಯುತ್ತಿರುವ ಹಗರಣಗಳು ಮತ್ತು ಕೇವಲ ರಾಜಕೀಯ ನೆಲೆಯಿಂದ ನೇಮಕವಾಗುತ್ತಿರುವ ಅಧಿಕಾರಿಗಳು ಈ ವಿಫಲತೆಗೆ ಜವಾಬ್ದಾರಿಗಳಾಗಿದ್ದಾರೆ. ಇದನ್ನು ಸುಧಾರಿಸಲು ಕೆಲವರನ್ನು ಅಮಾನತು ಮಾಡುವ ಮಟ್ಟಿಗೆ ಮಾತ್ರ ಸೀಮಿತವಾದ ಕಮ ಬೇಡ, KPSCಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ ಹೊಸ, ಪಾರದರ್ಶಕ ಮತ್ತು ಜವಾಬ್ದಾರಿಯುತ ಆಯೋಗವನ್ನು ರಚಿಸಬೇಕು.
ಈ ಪರೀಕ್ಷೆಗಳ ಪೂರಕವಾಗಿ ಸರ್ಕಾರ ವಿದ್ಯಾರ್ಥಿಗಳಿಗೆ ಸ್ಪಷ್ಟವಾದ ಹಕ್ಕುಗಳನ್ನು ಒದಗಿಸಬೇಕು. ಒಮ್ಮೆ ಮಾತ್ರವಲ್ಲ, ಎರಡು ಬಾರಿ ಅಲ್ಲ, ಏಷ್ಟೋ ಬಾರಿ ಈ ಆಯೋಗ ತಪ್ಪು ಮಾಡಿದೆ. ಪ್ರತ್ಯೇಕ ನ್ಯಾಯಾಂಗ ತನಿಖೆ ನಡೆಸಿ, ವೈಫಲ್ಯಕ್ಕೆ ಹೊಣೆಗಾರರನ್ನು ಪತ್ತೆಹಚ್ಚಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಕರ್ನಾಟಕದ ಪ್ರತಿಭಾನ್ವಿತ ಯುವಕರು ಸರ್ಕಾರದ ಅವ್ಯವಸ್ಥೆಗೆ ಬಲಿಯಾಗಬಾರದು ಎಂದಿದ್ದಾರೆ.

Previous articleಮಾರ್ಚ್ 7ರಂದು ರಾಜ್ಯ ಬಜೆಟ್ ಮಂಡನೆ: ಸಿಎಂ ಸಿದ್ದರಾಮಯ್ಯ
Next articleಗ್ಯಾರಂಟಿ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ