ಕೆಐಎಡಿಬಿ ಹಗರಣ: ಓರ್ವನ ಬಂಧನ

ಧಾರವಾಡ: ಕೆಐಎಡಿಬಿಯ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ತಂಡದಿಂದ ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದ ರವಿ ಕುರಬೆಟ್ಟ ಎಂಬಾತನನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆಯಲಾಗಿದೆ.
ಕೆಐಎಡಿಬಿಯ ಭೂಸ್ವಾಧೀನ ಪರಿಹಾರದಲ್ಲಿ ರೈತರ ಹೆಸರಲ್ಲಿ ಕೋಟಿ ಕೋಟಿ ಲೂಟಿ ಮಾಡಿರುವ ಕುರಿತು ಹೋರಾಟ ಮಾಡಲಾಗಿತ್ತು.
ಈ ಹಗರಣದಲ್ಲಿ ರವಿ ಕುರಬೆಟ್ಟ ಸಹ ಭಾಗಿಯಾಗಿರುವ ಕುರಿತು ಇಡಿ ತಂಡ ತನಿಖೆ ನಡೆಸುತ್ತಿತ್ತು. ಈತನಿಗೆ 3 ಬಾರಿ ನೋಟಿಸ್ ನೀಡಿದ್ದರೂ ವಿಚಾರಣೆಗೆ ಹಾಜರಾಗಿರಲಿಲ್ಲ. ಬುಧವಾರ ವಿಚಾರಣೆಗೆ ಹಾಜರಾಗಿದ್ದ ರವಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತಿಳಿದು ಬಂದಿದೆ.
ಇಡಿಯಿಂದ ಈಗಾಗಲೇ 8 ಆರೋಪಿಗಳ ಬಂಧನವಾಗಿದ್ದು, ಈ ಪೈಕಿ 6 ಜನ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಇಬ್ಬರು ಪರಪ್ಪನ ಅಗ್ರಹಾರದಲ್ಲಿದ್ದಾರೆ.