ಓದಿದ್ದು ಕಾಮರ್ಸ್, ಮಾಡಿದ್ದು ಸಿಎ ಕೆಲಸ, ಆದರೆ ಕಟ್ಟಿ ನಿಲ್ಲಿಸಿದ್ದು ಬೌನ್ಸ್ ರೆಂಟಲ್ ಸ್ಕೂಟರ್‌ಗಳ ಸಾಮ್ರಾಜ್ಯ
ಹುಟ್ಟಿದ್ದು ಕರ್ನಾಟಕದ ಹಾಸನ, ಓದಿದ್ದು ಕಾಮರ್ಸ್, ಆಗಿದ್ದು ಸಿಎ. ಆದರೆ ಕಟ್ಟಿ ಬೆಳೆಸಿದ್ದು ಮಾತ್ರ ಇಡೀ ದೇಶವೇ ನಿಬ್ಬೆರಗಾಗಿ ನೋಡುವಂಥ, ಹಿಂದೆಲ್ಲೂ ಯಾರೂ ಕಾರ್ಯರೂಪಕ್ಕೆ ತಂದಿರದ್ದಂ ಅದ್ಭುತ ಸ್ಟಾರ್ಟ್ಪ್ ಉತ್ಪನ್ನ. ಇದು ಬೌನ್ಸ್ ರೆಂಟಲ್ ಸ್ಕೂಟರ್ ಸಂಸ್ಥೆಯ ಸಂಸ್ಥಾಪಕ, ಅಪ್ಪಟ ಕನ್ನಡಿಗ ವಿವೇಕಾನಂದ ಹಳ್ಳೇಕೆರೆ ಅವರ `ಉದ್ಯಮ ಸಾಧನೆ’ಯ ಕತೆ.
ತನ್ನದೇ ರೀತಿಯ ಹೊಸ ಮಾರ್ಕೆಟ್ ಮಾಡೆಲ್ ಸೃಷ್ಟಿಸಿಕೊಂಡು, ಜನರ ಗಮನ ಸೆಳೆಯುತ್ತಾ, ಬೆಂಗಳೂರಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಓಡಾಡುವ ಬೌನ್ಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ವಿವೇಕಾನಂದ ಹಳ್ಳೇಕೆರೆ ಅವರ ಕನಸಿನ ಉತ್ಪನ್ನಗಳು. ಬೈಕು ಹಾಗೂ ಕಾರುಗಳ ಬಗ್ಗೆ ತಮಗಿರುವ ಕ್ರೇಜನ್ನು ಕೇವಲ ತಮ್ಮ ಸ್ವಸಂತೋಷ ಪೂರ್ತಿಗೆ ಉಪಯೋಗಿಸಿಕೊಳ್ಳದೆ, ಅದಕ್ಕೆ ಜನೋಪಯೋಗಿ ಚಿಂತನೆಯ ಟಚ್ ಕೊಟ್ಟಿದ್ದು ವಿವೇಕ್ ಅವರ ನಿಜವಾದ ಸಾಧನೆ. ಅದರ ಫಲವೇ ಇಂದು ಕಾಣಸಿಗುವ ಬೌನ್ಸ್ ರೆಂಟಲ್ ಸ್ಕೂಟರ್‌ಗಳು.
ಪಯಣವೇ ರೋಚಕ: ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಕಾಮರ್ಸ್ ಓದಿದ ವಿವೇಕಾನಂದ ಹಳ್ಳೇಕೆರೆ ಅಲ್ಲೇ ತಮ್ಮ ಡಿಗ್ರಿ ಕೂಡ ಮುಗಿಸಿದ್ದಾಯ್ತು. ಸಿಎ ತಯಾರಿಯನ್ನೂ ಜತೆಜತೆಯಲ್ಲೇ ಶುರು ಮಾಡಿದ ಪರಿಣಾಮ ಅತಿ ಕಡಿಮೆ ಅವಧಿಯಲ್ಲಿ ಸಿಎಯನ್ನು ಕೂಡ ಮುಗಿಸಿ ಕಂಪನಿಯೊಂದರಲ್ಲಿ ಕೆಲಸಕ್ಕೂ ಸೇರಿದ್ದಾಯ್ತು. ಆದರೆ ಅದೇ ರೋಟಿನ್ ಕೆಲಸ ವಿವೇಕ ಅವರಿಗೆ ಬೋರ್ ತರಿಸಿತು.
ಆ ನಂತರ ಕೆಲಸ ಬಿಟ್ಟರು, ತಾವೇ ಕಟ್ಟಿದ ಸಿಎ ಫೋರಮ್‌ನಲ್ಲಿ ಮುಂದಿನ 3 ವರ್ಷ ಕೆಲಸ ಮಾಡಿದರು. ಆದರೆ ಅಲ್ಪಸಮಯದಲ್ಲೇ ಇದೂ ಬೇಸರ ತರಿಸಿದಾಗ ಹುಟ್ಟಿದ್ದೇ ರೆಂಟಲ್ ಬೈಕ್‌ಗಳ ಉದ್ಯಮ ಶುರು ಮಾಡುವ ಚಿಂತನೆ. ಹೀಗೇ ಒಂದು ದಿನ ದೇಶದ ಎಲ್ಲೆಲ್ಲಿ ಈ ರೆಂಟಲ್ ಬೈಕ್ ಕಂಪನಿಗಳಿವೆ ಎಂದು ರಿಸರ್ಚ್ ಮಾಡಲು ಕುಳಿತ ವಿವೇಕ ಅವರ ಕಣ್ಣಿಗೆ ಬಿದ್ದದ್ದು ಹೆಚ್ಚಾನು ಹೆಚ್ಚು 2ರಿಂದ 3 ಕಂಪನಿಗಳು ಮಾತ್ರ. ಇಂಥ ದೊಡ್ಡ ದೇಶದಲ್ಲಿ ಬೆರಳೆಣಿಕೆಯಷ್ಟು ರೆಂಟಲ್ ಬೈಕ್ ಕಂಪನಿಗಳಾ? ಇದು ನಿಜಕ್ಕೂ ವಿವೇಕ ಅವರ ಹುಬ್ಬೇರುವಂತೆ ಮಾಡಿತು. ಆಗ ಶುರುವಾದದ್ದೇ `ವಿಕೆಡ್‌ರೈಡ್’ ಎಂಬ ಬೈಕ್ ರೆಂಟಲ್ ಸಂಸ್ಥೆ. ಅದು 2014. ಬೌನ್ಸ್‌ಗೂ ಕೆಲ ವರ್ಷ ಮುಂಚೆಯೇ ಶುರುವಾದ ಲಕ್ಸುರಿ ಬೈಕ್‌ಗಳನ್ನು ಬಾಡಿಗೆಗೆ ಕೊಡುವ ಕಂಪನಿ ಇದು.
ಆದರೆ ಈ ಲಕ್ಸುರಿ ಬೈಕ್‌ಗಳ ಬಾಡಿಗೆ ಕೊಡುವ ವಿಚಾರ ಕೆಲವೇ ಸಮಯದಲ್ಲಿ ಸ್ಕೂಟಿ ರೆಂಟಲ್ ಕಂಪನಿಯೊಂದನ್ನು ಮಾಡಲು ವಿವೇಕರಿಗೆ ಪ್ರೋತ್ಸಾಹ ನೀಡಿತು. ಆದರೆ ಇದಕ್ಕೆ ರೆಂಟಲ್ ಮೊಟರ್‌ಸೈಕಲ್‌ಗೆ ಸಂಬಂಧಿಸಿದ ಲೈಸೆನ್ಸ್ ಪಡೆಯುವುದು ಅಗತ್ಯ ವಾಗಿತ್ತು ಮತ್ತು ಅದು ಅತ್ಯಂತ ಕಷ್ಟದ ಕೆಲಸವಾಗಿತ್ತು ಕೂಡ.
ಈ ಬಗ್ಗೆ ವಿವೇಕಾನಂದ ಹಳ್ಳೇಕೆರೆ ಅವರೇ ಹೀಗೇ ಹೇಳುತ್ತಾರೆ: `ಲೈಸನ್ಸ್ ಪಡೆಯುವುದೇ ನಮ್ಮ ಮುಂದಿದ್ದ ಬಹುದೊಡ್ಡ ಸವಾಲಾಗಿತ್ತು. ಇದಕ್ಕಾಗಿ ಬಹಳ ಕಷ್ಟಪಟ್ಟೆವು. ಬೆಂಗಳೂರು ಸೇರಿದಂತೆ ಇತರ ಕಡೆ ಲೈಸೆನ್ಸ್ ಸಿಗಲು ಹೆಚ್ಚೂ ಕಡಿಮೆ 2 ವರ್ಷವೇ ಬೇಕಾಯಿತು. ನಮ್ಮ ಅದೃಷ್ಟಕ್ಕೆ ಜೈಪುರದಲ್ಲಿ ಮೊದಲ ಲೈಸೆನ್ಸ್ ನಮಗೆ ಸಿಕ್ತು. ಕರ್ನಾಟಕದಲ್ಲಿ ದಿನಗಟ್ಟಲೇ ಸುತ್ತಿದರೂ ಆಗದಿದ್ದ ಲೈಸೆನ್ಸ್ ಕೆಲಸ ಜೈಪುರದಲ್ಲಿ ಒಂದೇ ದಿನದಲ್ಲಿ ಆಗಿತ್ತು.
ಜೈಪುರದ ಲೈಸನ್ಸ್ ಬಂದ ಮೇಲೆ ಕ್ರಮೇಣ ಬೆಂಗಳೂರಲ್ಲೂ ಶುರು ಮಾಡಿದೆವು. ಜತೆಗೆ ಪ್ರವಾಸಿ ತಾಣಗಳಾದ ಗೋಕರ್ಣ, ಮಣಿಪಾಲ್ ಬೆಳಗಾವಿಯಲ್ಲೂ ನಮ್ಮ ಕೆಲಸ ಪ್ರಾರಂಭವಾಯ್ತು.’ ಆದರೆ ಇಲ್ಲಿಯವರೆಗೂ ಇನ್ನೂ ಬೌನ್ಸ್ ಶುರುವಾಗಿರಲಿಲ್ಲ: ಭಾರತದಲ್ಲಿ ದ್ವಿಚಕ್ರ ವಾಹನ ಓಡಿಸಲು ಬರುವ ಬಹುತೇಕರ ಹತ್ತಿರ ಲೈಸೆನ್ಸ್ ಇರುತ್ತದೆ. ಜತೆಗೆ ಎಲ್ಲರಿಗೂ ಸ್ಕೂಟಿ ಓಡಿಸಲು ಬರುತ್ತದೆ ಹಾಗೂ ಹೆಚ್ಚಾನುಹೆಚ್ಚು ಜನ ಸಾರ್ವಜನಿಕ ಸಾರಿಗೆಯಲ್ಲೇ ಓಡಾಡುವುದರಿಂದ ಅವರಿಗೊಂದು ಪರ್ಯಾಯವನ್ನೂ ಕೊಟ್ಟಂತಾಗುತ್ತದೆ ಎಂದು ಯೋಚಿಸುತ್ತಾರೆ ವಿವೇಕ & ಟೀಂ. ಅದಕ್ಕಾಗೇ ಒಂದು ಆ್ಯಪ್ ಕೂಡ ರೆಡಿಯಾಗುತ್ತದೆ.
ಈ ಎಲ್ಲದರ ಮಧ್ಯೆ ಸ್ಕೂಟಿಗೆ ಕೀ ಇಡುವುದರಿಂದ ಅದು ಗ್ರಾಹರಿಗೂ ಸಮಸ್ಯೆ ಮಾಡುವುದರ ಜತೆಗೆ ಕಂಪನಿಯ ಲೆಕ್ಕಾಚಾರಕ್ಕೂ ಸರಿಹೊಂದುವುದಿಲ್ಲವೆಂದು ನಿರ್ಧರಿಸಿದ ವಿವೇಕ & ಟೀಂ, ಕೆಲವೇ ಸಮಯದಲ್ಲಿ ದೇಶದ ಮೊಟ್ಟಮೊದಲ ಕೀಲೆಸ್ ರೆಂಟಲ್ ಸ್ಕೂಟಿಯನ್ನು ಹೊರತರುತ್ತಾರೆ. ಇಂಥ ಒಂದು ವ್ಯವಸ್ಥೆ ಜಗತ್ತಿನಲ್ಲೇ ಮೊದಲು. ಇದು ದೇಶದ ಸಂಪರ್ಕ ಉದ್ದಿಮೆ ವಲಯದಲ್ಲಿ ಹೊಸ ಕ್ರಾಂತಿಯೊಂದನ್ನು ಸೃಷ್ಟಿಸಿದ್ದು ಮಾತ್ರ ಸುಳ್ಳಲ್ಲ.
ಆದರೆ ಕೊವಿಡ್ ಸಮಯದಲ್ಲಿ ಎಲ್ಲರಂತೆ ಬೌನ್ಸ್ಗೂ ಹೊಡೆತ ಬಿದ್ದದ್ದು ಆಶ್ಚರ್ಯದ ವಿಷಯವೇನಲ್ಲ. ಈ ಸಂದರ್ಭವನ್ನು ಅತ್ಯಂತ ಚಾಕಚಕ್ಯತೆಯಿಂದ ಬಳಸಿಕೊಂಡ ತಂಡ ಬಹುತೇಕ ಎಲ್ಲಾ ಸ್ಕೂಟರ್‌ಗಳನ್ನು ಮಾರಿಬಿಟ್ಟಿತು. ಪೆಟ್ರೋಲ್ ಆಧಾರಿತ ಸ್ಕೂಟಿಗಳ ಬದಲಿಗೆ ಎಲೆಕ್ರ್ಟಿಕ್ ಸ್ಕೂಟರ್‌ಗಳನ್ನು ರೋಡಿಗಿಳಿಸಿದರು ವಿವೇಕ ಹಳ್ಳೇಕೆರೆ.
ಅದಕ್ಕೆ ಅವರು ಕೊಟ್ಟ ಹೆಸರೇ ಬೌನ್ಸ್ ಇನ್ಫಿನಿಟಿ. ಇವತ್ತಿಗೂ ಬೆಂಗಳೂರಿನ ರಸ್ತೆಗಳಲ್ಲಿ ನೋಡಿದ ಕಡೆಯೆಲ್ಲ ಕಾಣಸಿಗುವ ಸಾವಿರಾರು ಸಂಖ್ಯೆಯ ಹಳದಿ ಬೌನ್ಸ್ ಸ್ಕೂಟರ್‌ಗಳು ಕಾಲಕ್ಕೆ ತಕ್ಕಂತೆ ಎಲೆಕ್ಟಿçಫೈ ಆಗಿವೆ, ಜನರ ಎಲ್ಲಕ್ಕಿಂತ ಹೆಚ್ಚಾಗಿ ಮಧ್ಯಮ ವರ್ಗದವರ ಸಂಪರ್ಕ ಸಾಧನಗಳಾಗಿವೆ.
ಮೊದಲು ಸ್ಕ್ಯಾಮ್ ಅಂದ್ರು, ಆಮೇಲೆ ನಂಬಿ ಬೆಳೆಸಿದ್ರು: ಮೊದಲಿಗೆ ಕೆಲವೇ ಕೆಲವು ಸ್ಕೂಟರ್‌ಗಳ ಮೂಲಕ ನಾವು ಬೌನ್ಸ್ ಲಾಂಚ್ ಮಾಡಿದಾಗ ಬಸ್ ಸ್ಟಾಂಡ್‌ಗಳಿಗೆ ಹೋಗಿ ಜನರಿಗೆ ನಮ್ಮ ಉತ್ಪನ್ನದ ಬಗ್ಗೆ ಹೇಳುತ್ತಿದ್ದೆವು. ಬೌನ್ಸ್ ಆ್ಯಪ್‌ನಲ್ಲಿ ಲೈಸನ್ಸ್ ಅಪ್ಲೋಡ್ ಮಾಡಿ ಈ ಸ್ಕೂಟರ್‌ನ ನೀವು ಎಲ್ಲಿಗೆ ಬೇಕಾದರೂ ಒಯ್ಯಬಹುದು ಹಾಗೂ ಎಲ್ಲಿ ಬೇಕಾದರೂ ಬಿಡಬಹುದು ಎಂದು ನಾವು ಮೊದಮೊದಲು ಜನಕ್ಕೆ ಹೇಳಿದಾಗ, ಇದೊಂದು ಸ್ಕಾö್ಯಮ್ ಎಂದು ಯಾರೂ ನಂಬುತ್ತಿರಲಿಲ್ಲ. ಆದರೆ ನಿಧಾನವಾಗಿ ಜನರಿಗೆ ನಮ್ಮ ಬಗ್ಗೆ ತಿಳಿಯುತ್ತಾ ಹೋಯ್ತು, ಬೆಳಯುತ್ತಾ ಹೋದ್ವಿ.
ವಿವೇಕ ಹಳ್ಳೇಕೆರೆ | ಬೌನ್ಸ್ ಸಂಸ್ಥಾಪಕ

























