Home Advertisement
Home ಸುದ್ದಿ ರಾಜ್ಯ ರಾಜ್ಯ ಸಾರಿಗೆ ಬಸ್‌, ನಿಲ್ದಾಣಗಳಲ್ಲಿ ತಂಬಾಕು ಜಾಹೀರಾತು ಸಂಪೂರ್ಣ ನಿಷೇಧ

ರಾಜ್ಯ ಸಾರಿಗೆ ಬಸ್‌, ನಿಲ್ದಾಣಗಳಲ್ಲಿ ತಂಬಾಕು ಜಾಹೀರಾತು ಸಂಪೂರ್ಣ ನಿಷೇಧ

0
4

ಬೆಂಗಳೂರು: ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ಬಸ್‌ಗಳು ಹಾಗೂ ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆಯನ್ನು ಉತ್ತೇಜಿಸುವ ಯಾವುದೇ ರೀತಿಯ ಜಾಹೀರಾತುಗಳನ್ನು ಸಂಪೂರ್ಣವಾಗಿ ನಿಷೇಧಿಸಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆದೇಶ ಹೊರಡಿಸಿದ್ದಾರೆ.

ಈ ಸಂಬಂಧ ಶುಕ್ರವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC), ಬೆಂಗಳೂರು ಮಹಾನಗರ ಸಾರಿಗೆ ನಿಗಮ (BMTC), ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NEKRTC) ಹಾಗೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKRTC) ಸೇರಿದಂತೆ ನಾಲ್ಕೂ ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಸಚಿವರು ಅಧಿಕೃತ ಟಿಪ್ಪಣಿ ರವಾನಿಸಿದ್ದಾರೆ.

ಸಾರಿಗೆ ಸಂಸ್ಥೆಗಳ ಬಸ್‌ಗಳಲ್ಲಿ ಅಥವಾ ಬಸ್ ನಿಲ್ದಾಣಗಳ ಆವರಣದಲ್ಲಿ ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದನೆ ನೀಡುವಂತಹ ಯಾವುದೇ ನೇರ ಅಥವಾ ಪರೋಕ್ಷ ಜಾಹೀರಾತುಗಳನ್ನು ಇನ್ನು ಮುಂದೆ ಪ್ರಚಾರ ಮಾಡುವಂತಿಲ್ಲ ಎಂದು ಸಚಿವರು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಜಾಹೀರಾತುಗಳು ಯುವಜನರನ್ನು ಹಾಗೂ ಸಾಮಾನ್ಯ ನಾಗರಿಕರನ್ನು ತಪ್ಪು ದಾರಿಗೆ ಒಯ್ಯುವ ಅಪಾಯವಿದೆ ಎಂಬ ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಈಗಾಗಲೇ ಬಸ್‌ಗಳು ಅಥವಾ ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳಿಗೆ ಸಂಬಂಧಿಸಿದ ಜಾಹೀರಾತು ಫಲಕಗಳು, ಸ್ಟಿಕ್ಕರ್‌ಗಳು ಅಥವಾ ದೃಶ್ಯ ಮಾಧ್ಯಮಗಳು ಅಳವಡಿಸಲ್ಪಟ್ಟಿದ್ದರೆ, ಅವುಗಳನ್ನು ತೆರವುಗೊಳಿಸಲು ನಿಗದಿತ ಕಾಲಮಿತಿಯನ್ನು ತಕ್ಷಣವೇ ನಿಗದಿಪಡಿಸಬೇಕು ಎಂದು ಸಚಿವರು ನಿರ್ದೇಶಿಸಿದ್ದಾರೆ. ಆ ಅವಧಿಯೊಳಗೆ ಸಂಬಂಧಪಟ್ಟ ಜಾಹೀರಾತು ಸಂಸ್ಥೆಗಳಿಗೆ ಸೂಚನೆ ನೀಡಿ, ಜಾಹೀರಾತುಗಳನ್ನು ಕಡ್ಡಾಯವಾಗಿ ತೆಗೆದುಹಾಕುವಂತೆ ಆದೇಶಿಸಬೇಕೆಂದು ತಿಳಿಸಿದ್ದಾರೆ.

ಸಾರ್ವಜನಿಕ ಆರೋಗ್ಯದ ಮೇಲೆ ತಂಬಾಕು ಉತ್ಪನ್ನಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕ್ರಮ ಮಹತ್ವದ್ದಾಗಿದೆ. ಬಸ್ ಹಾಗೂ ಬಸ್ ನಿಲ್ದಾಣಗಳು ಪ್ರತಿದಿನ ಲಕ್ಷಾಂತರ ಜನರು ಬಳಸುವ ಸಾರ್ವಜನಿಕ ಸ್ಥಳಗಳಾಗಿರುವುದರಿಂದ, ಇಂತಹ ಸ್ಥಳಗಳಲ್ಲಿ ತಂಬಾಕು ಜಾಹೀರಾತುಗಳಿಗೆ ಅವಕಾಶ ನೀಡಬಾರದು ಎಂಬ ಅಭಿಪ್ರಾಯವನ್ನು ಸರ್ಕಾರ ಸ್ಪಷ್ಟಪಡಿಸಿದೆ.

ಇದೇ ವಿಷಯದ ಕುರಿತು ದಿನಾಂಕ 15-01-2026ರಂದು ‘ಸಂಯುಕ್ತ ಕರ್ನಾಟಕ’ ದಿನಪತ್ರಿಕೆಯಲ್ಲಿ ಹರ್ಷ ಕುಲಕರ್ಣಿ ಅವರು ಲೇಖನ ಬರೆದು ಜಾಗೃತಿ ಮೂಡಿಸಿದ್ದರು. ಆ ಲೇಖನದಲ್ಲೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ತಂಬಾಕು ಜಾಹೀರಾತುಗಳ ವಿರುದ್ಧ ಕಠಿಣ ಕ್ರಮ ಅಗತ್ಯವೆಂದು ಒತ್ತಿ ಹೇಳಲಾಗಿತ್ತು. ಇದೀಗ ಸರ್ಕಾರದ ಈ ಆದೇಶ ಆ ಚರ್ಚೆಗೆ ಸ್ಪಷ್ಟವಾದ ಕಾರ್ಯರೂಪ ನೀಡಿದಂತಾಗಿದೆ.

Previous articleಸಿನಿಮಾ ಕ್ಷೇತ್ರದಲ್ಲೂ ಛಾಪು ಮೂಡಿಸಿದ್ದ ಸಿ.ಜೆ. ರಾಯ್
Next articleತುಮಕೂರು ಪಿಎಸ್‌ಐ ಲೋಕಾಯುಕ್ತರ ಬಲೆಗೆ