VB-G RAM G: ರಾಜ್ಯಗಳನ್ನೇ ಮರೆತ ಕೇಂದ್ರ ಸರ್ಕಾರ

0
5

ಬೆಂಗಳೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ರದ್ದತಿ ಹಾಗೂ ಹೊಸ ಕಾಯ್ದೆ ಜಾರಿಗೆ ಸಂಬಂಧಿಸಿದಂತೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳ ಅಭಿಪ್ರಾಯ ಕೇಳದೇ ಏಕಪಕ್ಷೀಯವಾಗಿ ಹೊಸ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಸರ್ವಾಧಿಕಾರಿ ಧೋರಣೆಯನ್ನು ಪ್ರದರ್ಶಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ವಾಗ್ದಾಳಿ ನಡೆಸಿದರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ರದ್ದತಿ ಹಾಗೂ ಹೊಸ ಕಾಯ್ದೆ ಜಾರಿಗೆ ಸಂಬಂಧಿಸಿದಂತೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮನಮೋಹನ್ ಸಿಂಗ್ ಅವರ ಜನಪರ ಕಾಯ್ದೆಯನ್ನು ಹಿಂಪಡೆದುಕೊಳ್ಳುವ ಮೂಲಕ ಕಾರ್ಪೊರೇಟ್ ಕಂಪೆನಿಗಳಿಗೆ ಲಾಭ ಮಾಡಿಕೊಡುವ ಕೆಲಸವನ್ನು ಮೋದಿ ಸರ್ಕಾರ ಮಾಡುತ್ತಿದೆ ಎಂದರು.

ಇದನ್ನೂ ಓದಿ:  ಅಂಗಾಂಗ ದಾನದಲ್ಲಿ ಕರ್ನಾಟಕಕ್ಕೆ ರಾಷ್ಟ್ರ ಮಟ್ಟದಲ್ಲಿ 3ನೇ ಸ್ಥಾನ

ರಾಜ್ಯಗಳನ್ನೇ ಮರೆತ ಕೇಂದ್ರ ಸರ್ಕಾರ: ಮೋದಿ ಸರ್ಕಾರ ನರೇಗಾ ಕಾಯ್ದೆಯನ್ನು ಹಿಂಪಡೆದು, ಹೊಸದಾಗಿ ವಿಬಿ ಜಿ ರಾಮ್ ಜಿ ಹೆಸರಿನ ಕಾಯ್ದೆಯನ್ನು ಜಾರಿಗೆ ತರುವಾಗ ರಾಜ್ಯ ಸರ್ಕಾರಗಳನ್ನೂ, ಜನತೆಯನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ ನಿರ್ಧಾರ ಕೈಗೊಂಡಿದೆ. ಇದು ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ವಿರುದ್ಧವಾದ ನಡೆ ಎಂದು ಸಿದ್ದರಾಮಯ್ಯ ಹೇಳಿದರು.

ಯುಪಿಎ ಸರ್ಕಾರದ ಜನಪರ ಕಾನೂನುಗಳು: ಮನಮೋಹನ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರ ಉದ್ಯೋಗದ ಹಕ್ಕು, ಮಾಹಿತಿ ಹಕ್ಕು, ಶಿಕ್ಷಣದ ಹಕ್ಕು ಸೇರಿದಂತೆ ಹಲವು ಕ್ರಾಂತಿಕಾರಿ ಜನಪರ ಕಾನೂನುಗಳನ್ನು ಜಾರಿಗೆ ತಂದು ಜನರಿಗೆ ಅಧಿಕಾರ ನೀಡಿತ್ತು ಎಂದು ಸ್ಮರಿಸಿದರು.

ಇದನ್ನೂ ಓದಿ: 153 ಎಕರೆಗಳಲ್ಲಿ ‘ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನ’ – ಸಚಿವ ಸಂಪುಟದ ಒಪ್ಪಿಗೆ

ನರೇಗಾ ಕಾರ್ಮಿಕರ ಅಂಕಿ-ಅಂಶ: ದೇಶದಲ್ಲಿ ಸದ್ಯ 12.16 ಕೋಟಿ ನರೇಗಾ ಕಾರ್ಮಿಕರು ಇದ್ದು, ಅವರಲ್ಲಿ 6.21 ಕೋಟಿ ಮಹಿಳೆಯರು, ಪರಿಶಿಷ್ಟ ಜಾತಿಯವರು – ಶೇ.17, ಪರಿಶಿಷ್ಟ ವರ್ಗದವರು – ಶೇ.11 ಇದ್ದಾರೆ. ಕರ್ನಾಟಕದಲ್ಲಿ ಮಾತ್ರ 71.18 ಲಕ್ಷ ನರೇಗಾ ಕಾರ್ಮಿಕರು ಇದ್ದು, ಇದರಲ್ಲಿ 36.75 ಲಕ್ಷ ಮಹಿಳೆಯರು (ಶೇ.51.6) ಇದ್ದಾರೆ ಎಂದು ವಿವರಿಸಿದರು.

ಗ್ರಾಮೀಣ ಆರ್ಥಿಕತೆಗೆ ಹೊಡೆತ: ನರೇಗಾ ಕಾಯ್ದೆಯಡಿ ಗ್ರಾಮೀಣ ಜನರಿಗೆ ತಮ್ಮ ವಾಸಸ್ಥಳದಲ್ಲೇ ಕೂಲಿ ಕೆಲಸ ಸಿಗುತ್ತಿತ್ತು. ಇದರಿಂದ ಗ್ರಾಮೀಣ ಆರ್ಥಿಕತೆ ಬಲವಾಗುತ್ತಿತ್ತು. ಸ್ಥಳೀಯವಾಗಿ ಆಸ್ತಿ ಸೃಷ್ಟಿಯಾಗುತ್ತಿತ್ತು. ಉದ್ಯೋಗವನ್ನು ಕೇಳಿ ಪಡೆಯುವ ಹಕ್ಕು ಜನರಿಗೆ ಇತ್ತು ಆದರೆ ಹೊಸ ಕಾಯ್ದೆಯಲ್ಲಿ ಈ ಎಲ್ಲಾ ಅಂಶಗಳನ್ನು ತೆಗೆದು ಹಾಕಲಾಗಿದೆ ಎಂದು ಆರೋಪಿಸಿದರು.

ಇದನ್ನೂ ಓದಿ:  ಬಳ್ಳಾರಿ ಪ್ರಕರಣ: ಕಾಂಗ್ರೆಸ್ ಕಾರ್ಯಕರ್ತ ಸಾವು ಹಿನ್ನೆಲೆ ಸತ್ಯಶೋಧನೆಗೆ ಇಳಿದ ಕಾಂಗ್ರೆಸ್

ಹೊಸ ಕಾಯ್ದೆಯ ಅಪಾಯಗಳು: ಸಿಎಂ ವಿವರಿಸಿದಂತೆ, ಹೊಸ ಕಾಯ್ದೆಯಡಿ ಸರ್ಕಾರ ಅಧಿಸೂಚಿತ ಪ್ರದೇಶದಲ್ಲಿ ಮಾತ್ರ ಉದ್ಯೋಗ. ಗ್ರಾಮ ಪಂಚಾಯತ್‌ಗಳಿಗೆ ಯಾವುದೇ ಖಾತ್ರಿ ಇಲ್ಲ. ಕೃಷಿ ಅವಧಿಯ 60 ದಿನಗಳಲ್ಲಿ ಉದ್ಯೋಗ ನೀಡುವುದಿಲ್ಲ. ಹಣದುಬ್ಬರಕ್ಕೆ ಅನುಗುಣವಾಗಿ ಕೂಲಿ ಹೆಚ್ಚಳದ ಅವಕಾಶ ಇಲ್ಲ

ರಾಜ್ಯಗಳ ಮೇಲೆ ಹಣಕಾಸು ಹೊರೆ: ಹಿಂದಿನ ಕಾಯ್ದೆಯಲ್ಲಿ ಕೇಂದ್ರ ಸರ್ಕಾರವೇ ಶೇ.100 ಅನುದಾನ ನೀಡುತ್ತಿತ್ತು. ಆದರೆ ಹೊಸ ಕಾಯ್ದೆಯಲ್ಲಿ ಶೇ.60 ಕೇಂದ್ರ, ಶೇ.40 ರಾಜ್ಯ ಸರ್ಕಾರ ಭರಿಸಬೇಕಾಗಿದೆ. ಇದು ಸಂವಿಧಾನದ ಆರ್ಟಿಕಲ್ 258 ಮತ್ತು 280ಕ್ಕೆ ವಿರುದ್ಧ ಎಂದು ಸಿದ್ದರಾಮಯ್ಯ ಹೇಳಿದರು.

ಪಂಚಾಯತ್ ಅಧಿಕಾರ ಕಿತ್ತುಕೊಳ್ಳುವ ಪ್ರಯತ್ನ: ಗ್ರಾಮ ಪಂಚಾಯತ್‌ಗಳಿಗೆ ಇದ್ದ ಸ್ವಾಯತ್ತ ಅಧಿಕಾರವನ್ನು ಕಿತ್ತುಕೊಂಡು, ಅವುಗಳನ್ನು ಕೇವಲ ಅನುಷ್ಠಾನ ಸಂಸ್ಥೆಗಳನ್ನಾಗಿ ಮಾಡಲಾಗುತ್ತಿದೆ. ಇದು ಒಕ್ಕೂಟ ವ್ಯವಸ್ಥೆ ಮತ್ತು ಸಂವಿಧಾನಕ್ಕೆ ವಿರುದ್ಧ ಎಂದು ಅವರು ಹೇಳಿದರು.

ಇದನ್ನೂ ಓದಿ: Toxicಗೆ ಮತ್ತಷ್ಟು ತಾರಾ ಮೆರಗು: ಯಶ್‌ ಜೊತೆ ಸುತಾರಿಯಾ ಸಾತ್‌

ಪ್ರಧಾನಿಗೆ ಪತ್ರ: ಹೊಸ ಕಾಯ್ದೆಯನ್ನು ಜಾರಿಗೊಳಿಸದಂತೆ ಕೋರಿ ಡಿಸೆಂಬರ್ 30ರಂದು ಪ್ರಧಾನಿಗೆ ಪತ್ರ ಬರೆದಿದ್ದೇನೆ. ಹೊಸ ಕಾಯ್ದೆ ರದ್ದುಪಡಿಸಬೇಕು. ನರೇಗಾ ಕಾಯ್ದೆ ಮರು ಜಾರಿಗೆ ತರಬೇಕು. ಮಹಿಳೆಯರು, ದಲಿತರು, ಆದಿವಾಸಿಗಳ ಉದ್ಯೋಗ ಹಕ್ಕು ಪುನರ್ ಸ್ಥಾಪಿಸಬೇಕು. ಪಂಚಾಯತ್‌ಗಳ ಸ್ವಾಯತ್ತತೆ ಮರುಸ್ಥಾಪಿಸಬೇಕು. ಎಂದು ರಾಜ್ಯ ಸರ್ಕಾರ ಕೇಂದ್ರವನ್ನು ಒತ್ತಾಯಿಸಲಿದೆ ಎಂದು ಸಿಎಂ ಸ್ಪಷ್ಟಪಡಿಸಿದರು.

ಗ್ರಾಮೀಣ ಬದುಕಿಗೆ ಮಾರಕ: ಹೊಸ ಕಾಯ್ದೆಯಿಂದ ನಿರುದ್ಯೋಗ ಹೆಚ್ಚಳ. ಮಹಿಳೆಯರ ಉದ್ಯೋಗ ಪಾಲುದಾರಿಕೆ ಇಳಿಕೆ. ದಲಿತ–ಆದಿವಾಸಿ ಕುಟುಂಬಗಳ ಮೇಲೆ ಹೆಚ್ಚಿನ ಒತ್ತಡ. ಗ್ರಾಮೀಣ ಜೀವನೋಪಾಯ ಕುಸಿತ ಸಂಭವಿಸಲಿದೆ ಎಂದು ಎಚ್ಚರಿಸಿದರು.

ಬಿಜೆಪಿ ಜನಪರ ಕಾನೂನು ವಿರೋಧಿ: 20 ವರ್ಷಗಳ ಹಿಂದೆ ನರೇಗಾ ಕಾಯ್ದೆ ಜಾರಿಯಾದಾಗಲೂ ಬಿಜೆಪಿ ವಿರೋಧಿಸಿತ್ತು. ಆಹಾರ ಭದ್ರತಾ ಕಾಯ್ದೆಯನ್ನೂ ಗೇಲಿ ಮಾಡಿತ್ತು. ಜನಪರ ಕಾನೂನುಗಳನ್ನು ನಾಶ ಮಾಡುವುದೇ ಬಿಜೆಪಿಯ ಧೋರಣೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.

Previous articleಹಾರ್ನ್‌ಬಿಲ್ ಪಕ್ಷಿಗಳ ಆವಾಸ ನಾಶ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ