ಬೆಳಗಾವಿ: ಬೆಳಗಾವಿ-ಧಾರವಾಡ ರೈಲು ಮಾರ್ಗ ಅಭಿವೃದ್ಧಿ ವಿಚಾರದಲ್ಲಿ ಸಚಿವ ಸಂತೋಷ ಲಾಡ್ ಸ್ಪಂದಿಸುತ್ತಿಲ್ಲ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಆರೋಪಿಸಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತೋಷ ಲಾಡ್ ಅಸಹಕಾರದಿಂದಾಗಿ ಬೆಳಗಾವಿ-ಧಾರವಾಡ ನಡುವೆ ನೇರ ನೂತನ ರೈಲು ಮಾರ್ಗ ವಿಳಂಬವಾಗುತ್ತಿದೆ. ರಾಜ್ಯ ಸರ್ಕಾರದ ಸಹಕಾರ ಇಲ್ಲದೇ ಈ ರೈಲು ಯೋಜನೆ ವಿಳಂಬವಾಗುತ್ತಿದೆ. ಹುಬ್ಬಳ್ಳಿಯಲ್ಲಿ ಇನ್ನೂ 45 ಎಕರೆ ಜಮೀನು ಸ್ವಾಧೀನವಾಗಬೇಕು. ಈಗಾಗಲೇ ಎರಡ್ಮೂರು ಬಾರಿ ನಾನು ಮಾತಾಡಿದ್ದೇನೆ. ಅಲ್ಲದೇ, ಎಷ್ಟು ಸಲ ಸಂಪರ್ಕ ಮಾಡಿದರೂ ಸಚಿವ ಲಾಡ್ ಸ್ಪಂದನೆ ಮಾಡುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಂಸದ ಜಗದೀಶ್ ಶೆಟ್ಟರ ಅವರೂ ಕೂಡ ಮಾತಾಡಿದ್ದಾರೆ. ಆದರೂ ಪ್ರಯೋಜನವಾಗಿಲ್ಲ. ಹೀಗಾಗಿ, ಇನ್ನೊಂದು ಬಾರಿ ನಾನೇ ಅವರ ಜೊತೆಗೆ ಮಾತನಾಡುತ್ತೇನೆ ಎಂದು ರೈಲ್ವೆ ಸಚಿವ ವಿ. ಸೋಮಣ್ಣ ಹೇಳಿದರು.
ಈ ಯೋಜನೆಗೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಈಗಾಗಲೇ ನೂರರಷ್ಟು ಭೂಸ್ವಾಧೀನವಾಗಿದೆ. ಆದರೆ, ಸಚಿವ ಸಂತೋಷ ಲಾಡ್ ಏಕೆ ಹೀಗೆ ಮಾಡುತ್ತಿದ್ದಾರೆ ಗೊತ್ತಿಲ್ಲ. ಒಂದು ವೇಳೆ ಸ್ಪಂದನೆ ಮಾಡದಿದ್ದರೆ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಸಚಿವ ಸೋಮಣ್ಣ ಸ್ಪಷ್ಟಪಡಿಸಿದರು.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಮಾತಾಡಿದ್ದೇನೆ, ಧಾರವಾಡ ಜಿಲ್ಲಾಧಿಕಾರಿಗಳ ಜೊತೆಗೂ ಹತ್ತಾರು ಬಾರಿ ಮಾತಾಡಿದ್ದೇನೆ. ಅಲ್ಲದೇ, ಇಂದು ಧಾರವಾಡ ಜಿಲ್ಲಾಧಿಕಾರಿಗಳು ಸಿಕ್ಕಾಗ ನನ್ನದೇ ಭಾಷೆಯಲ್ಲಿ ಮಾತಾಡಿದ್ದೇನೆ. ಬೇರೆ ರಾಜ್ಯದಲ್ಲಿ ಎಷ್ಟು ಸಹಕಾರ ಕೊಡುತ್ತಿದ್ದಾರೆ ನೋಡಿ ಅಂತಾ ಹೇಳಿದ್ದೇನೆ. ಅವರು ಅಭಿವೃದ್ಧಿ ಕೆಲಸದ ಕಡೆ ನೋಡುತ್ತಿಲ್ಲ. ಬದಲಾಗಿ ಬೇರೆ ಕೆಲಸದಲ್ಲಿ ತಲ್ಲೀನರಾಗಿದ್ದಾರೆ ಎಂದು ಹರಿಹಾಯ್ದರು.
ಬೆಳಗಾವಿ, ಖಾನಾಪುರ ಸೇರಿ ಹಲವು ಕಡೆ ಮೇಲ್ಸೆತುವೆ ಕಾಮಗಾರಿ ಶಂಕುಸ್ಥಾಪನೆ ಮಾಡುತ್ತಿದ್ದೇವೆ. ದೇಶದಲ್ಲಿ ರೈಲ್ವೆ ನಿಲ್ದಾಣಗಳ ಚಿತ್ರಣ ಬದಲಾಗುತ್ತಿದೆ. ಪ್ರಧಾನಿ ಮೋದಿಯವರ ಕನಸಿನಂತೆ 2047 ವಿಕಸಿತ ಭಾರತದ ಕಡೆ ಹೆಜ್ಜೆ ಇಡ್ತಿದ್ದೇವೆ. ಸವದತ್ತಿ ರಾಮದುರ್ಗ ನಡುವಿನ ಹೊಸ ರೈಲಿಗೆ ಡಿಮ್ಯಾಂಡ್ ಇದ್ದು ಪರಿಶೀಲನೆ ಮಾಡುತ್ತೇವೆ. ಈಗಾಗಲೇ ಪುನಃ ಸರ್ವೆಗೆ ಆದೇಶ ಮಾಡಿದ್ದೇನೆ ಎಂದು ತಿಳಿಸಿದರು.
ಯೋಜನೆ ನಿಲ್ಲಿಸಲ್ಲ: “ಬೆಳಗಾವಿ-ಧಾರವಾಡ ನೇರ ರೈಲು ಮಾರ್ಗದ ಅಭಿವೃದ್ಧಿ ಯೋಜನೆಗೆ ಈಗಾಗಲೇ 937 ಕೋಟಿ ರೂ.ಗಳ ಅನುದಾನವನ್ನು ಮೀಸಲಿಡಲಾಗಿದೆ. ಯಾವುದೇ ಕಾರಣಕ್ಕೂ ಯೋಜನೆ ನಿಲ್ಲಿಸಲ್ಲ” ಎಂದು ವಿ. ಸೋಮಣ್ಣ ಹೇಳಿದರು.