ಬೆಂಗಳೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ 6,000 ವೈದ್ಯ ಪದವೀಧರರು ಗ್ರಾಮೀಣ ಸೇವೆ ಮಾಡುವುದರಿಂದ ವಿನಾಯಿತಿ ಪಡೆದಿದ್ದಾರೆ. ರಾಜ್ಯದಲ್ಲಿ 2024 ಮತ್ತು 2025ರಲ್ಲಿ ವೈದ್ಯ ಪದವಿ ಪೂರ್ಣಗೊಳಿಸಿದ 7,835 ಪದವೀಧರರ ಪೈಕಿ 6,063 ವೈದ್ಯರು ಗ್ರಾಮೀಣ ಸೇವೆಗೆ ಅರ್ಹತೆ ಹೊಂದಿದ್ದರೂ ಸಹ 6,063 ಮಂದಿ ವೈದ್ಯ ಪದವೀಧರರು ಕಡ್ಡಾಯ ಗ್ರಾಮೀಣ ಸೇವೆಯಿಂದ ವಿನಾಯಿತಿ ಪಡೆದಿದ್ದಾರೆ. 1,772 ಮಂದಿ ಪದವೀಧರರಿಗೆ ವಿವಿಧ ಹಳ್ಳಿಗಳಲ್ಲಿ ಸೇವೆ ಸಲ್ಲಿಸುವ ಅವಕಾಶವನ್ನು ಹಂಚಿಕೆ ಮಾಡಲಾಗಿದೆ.
ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸೋಮವಾರವೇ ಅಧಿಸೂಚನೆ ಹೊರಡಿಸಿದೆ. 2024 ಮತ್ತು 2025ರಲ್ಲಿ ಇಂಟರ್ನ್ಶಿಪ್ ಪೂರ್ಣಗೊಳಿಸಿದ ಸರ್ಕಾರಿ ಕಾಲೇಜು, ಖಾಸಗಿ ಕಾಲೇಜಿನ ಸರ್ಕಾರಿ ಖೋಟಾದ ವಿದ್ಯಾರ್ಥಿಗಳ ಮೆರಿಟ್ ಪಟ್ಟಿಯನ್ನು ಪ್ರಕಟಿಸಿರುವ ಇಲಾಖೆಯು, ವಿದ್ಯಾರ್ಥಿಗಳಿಗೆ ಗ್ರಾಮೀಣ ಸೇವೆಯನ್ನು ಮತ್ತು ಅವುಗಳ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಪಟ್ಟಿಯಲ್ಲಿ 7,574 ವಿದ್ಯಾರ್ಥಿಗಳಿಗೆ ಹಾಗೂ 261 ವಿದ್ಯಾರ್ಥಿಗಳಿಗೆ ಕಂಪ್ಯೂಟರೀಕೃತ ಹಂಚಿಕೆಯನ್ನು ಮಾಡಿದೆ.
ಆ ಪೈಕಿ ಸದ್ಯ ರಾಜ್ಯದ ವಿವಿಧ ಗ್ರಾಮೀಣ ಭಾಗದಲ್ಲಿ 1,772 ಹುದ್ದೆಗಳು ಮಾತ್ರ ನೇಮಕಾತಿಗೆ ಲಭ್ಯವಿದ್ದು, ಅಷ್ಟೇ ಹುದ್ದೆಗಳಿಗೆ ಆಯ್ಕೆಗೆ ಅವಕಾಶವಿದೆ. ಹಾಗಾಗಿ ಇನ್ನುಳಿದ 6,063 ವೈದ್ಯ ವಿದ್ಯಾರ್ಥಿಗಳು ಕಡ್ಡಾಯ ಗ್ರಾಮೀಣ ಸೇವೆಯಿಂದ ವಿನಾಯಿತಿ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.
ಈ ಗ್ರಾಮೀಣ ಸೇವೆಯನ್ನು ಆಯ್ಕೆ ಮಾಡಿಕೊಳ್ಳುವ ವೈದ್ಯ ಪದವೀಧರರಿಗೆ ಅವರು ಯಾವ ಇಲಾಖೆಗೆ ಒಳಪಡುವರೋ ಆ ಇಲಾಖೆ ನಿಗದಿತ ವೇತನವನ್ನು ಪಡೆಯಲಿದ್ದಾರೆ. ಸದ್ಯ ವೈದ್ಯಕೀಯ ಶಿಕ್ಷಣ ಇಲಾಖೆಗೆ ಸೇರಿದ ಆಸ್ಪತ್ರೆಗಳಲ್ಲಿ ಈ ವೈದ್ಯ ಪದವೀಧರರಿಗೆ ಮಾಸಿಕ 50,000 ರೂ. ದೊರೆತರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅನ್ವಯ ಮಾಸಿಕ 62,666 ರೂ. ವೇತನ ದೊರೆಯಲಿದೆ. ರಾಷ್ಟ್ರೀಯ ಆರೋಗ್ಯ ಮಿಷನ್‌ನ ವ್ಯಾಪ್ತಿಯ ಹುದ್ದೆಯಲ್ಲಿ ಕೆಲಸ ಮಾಡುವವರಿಗೆ ಮಾಸಿಕ 75,000 ರೂ. ವೇತನ ನಿಗದಿಯಾಗಿದೆ.
2024ರಲ್ಲಿ ಜಾರಿಗೆ ತರಲಾದ ಕರ್ನಾಟಕ ವೈದ್ಯಕೀಯ ಕೋರ್ಸ್ ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವೆ (ಕೌನ್ಸೆಲಿಂಗ್), ಹಂಚಿಕೆ ಮತ್ತು ಪ್ರಮಾಣೀಕೃತ) ತಿದ್ದುಪಡಿ ವಿಧೇಯಕದ ಅನ್ವಯ ವೈದ್ಯ ಪದವೀಧರರು ಆನ್‌ಲೈನ್ ಕೌನ್ಸೆಲಿಂಗ್‌ನಲ್ಲಿ 1 ವರ್ಷದ ಗ್ರಾಮೀಣ ಸೇವೆಗಾಗಿ ತಮ್ಮ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬಹುದು. ಇಲ್ಲವೇ ಆ ಸೇವೆಯಿಂದ ಹೊರಗುಳಿಯಲು ಅವಕಾಶ ಕಲ್ಪಿಸಲಾಗಿದೆ. ಈ ಆನ್‌ಲೈನ್ ವ್ಯವಸ್ಥೆಯು ಅಭ್ಯರ್ಥಿಗಳ ಆಯ್ಕೆಗೆ ಅನುಗುಣವಾಗಿ ಅವರ ಗ್ರಾಮೀಣ ಸೇವಾ ಸ್ಥಳವನ್ನು ಹಂಚಿಕೆ ಮಾಡುವುದು ಮತ್ತು ಹೊರಗುಳಿಸುವುದನ್ನು ಮಾಡುತ್ತದೆ.
ಈ ಹಿಂದೆ 2012ರಲ್ಲಿ ಸರ್ಕಾರಿ, ಸರ್ಕಾರಿ ಅನುದಾನಿತ, ಖಾಸಗಿ ಮತ್ತು ಡೀಮ್ಡ್ ವೈದ್ಯಕೀಯ ಕಾಲೇಜುಗಳಲ್ಲಿ ವೈದ್ಯ ಪದವಿ ಪೂಣಗೊಳಿಸಿದವರು ಕಡ್ಡಾಯವಾಗಿ ಒಂದು ವರ್ಷ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಲೇಬೇಕಿತ್ತು. ಆದರೆ, ಈ ಕಾನೂನನ್ನು ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೆಟ್ಟಿಲು ಏರಿದ್ದರಿಂದ 2020ರಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯವು ಕಾಯ್ದೆಯಲ್ಲಿದ್ದ `ತರಬೇತಿ’ ಪದವನ್ನು ತೆಗೆದುಹಾಕಿತ್ತಲ್ಲದೆ, ತಿದ್ದುಪಡಿಗೆ ಸೂಚಿಸಿತ್ತು.
ಈ ಮಧ್ಯೆ ಪ್ರತಿ ವರ್ಷ ರಾಜ್ಯದಲ್ಲಿ ವೈದ್ಯ ಪದವಿ ಪೂರ್ಣಗೊಳಿಸುವವರ ಸಂಖ್ಯೆಯಷ್ಟು ರಾಜ್ಯದ ಗ್ರಾಮೀಣ ಭಾಗದಲ್ಲಿ ವೈದ್ಯ ಹುದ್ದೆಗಳು ಇಲ್ಲದಿರುವುದು ಸಹಜವಾಗಿಯೇ ಕಡ್ಡಾಯದ ಕಾನೂನು ಜಾರಿಗೆ ತೊಡಕಾಗಿತ್ತು. ಆ ಹಿನ್ನೆಲೆಯಲ್ಲಿ ಆ ಕಾಯ್ದೆಗೆ 2024ರಲ್ಲಿ ತಿದ್ದುಪಡಿ ತಂದು ಕಡ್ಡಾಯ ಗ್ರಾಮೀಣ ಸೇವೆಯನ್ನು ತೆಗೆದು ವೈದ್ಯ ಪದವೀಧರರ ಆಯ್ಕೆಗೆ ಅನುಗುಣವಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
























