ಇತಿಹಾಸದ ಪುಟದತ್ತ ನಿರ್ಗಮಿಸುತ್ತಿರುವ 2025ನ್ನು ನೆನೆಯುವಾಗ ಮನಸ್ಸಿನಲ್ಲಿ ನೋವು-ನಲಿವಿನ ಚಿತ್ರಗಳೆಲ್ಲ ಒಟ್ಟೊಟ್ಟಿಗೇ ಮೂಡುತ್ತವೆ. ಕನ್ನಡದ ಪ್ರಮುಖ ಕಾದಂಬರಿಕಾರ ಎಸ್. ಎಲ್. ಭೈರಪ್ಪ, ಕವಿ ಎಚ್.ಎಸ್. ವೆಂಕಟೇಶಮೂರ್ತಿ, ವೃಕ್ಷಮಾತೆ ಸಾಲುಮರದ ತಿಮ್ಮಕ್ಕ, ಜಾನಪದ ಹಾಡುಗಳ ಕಣಜ ಸುಕ್ರಿ ಗೌಡ, ಖ್ಯಾತ ಪತ್ರಕರ್ತರಾದ ಟಿ.ಜೆ.ಎಸ್. ಜಾರ್ಜ್ ಮುಂತಾದ ದಿಗ್ಗಜರು ಇನ್ನಿಲ್ಲವಾದರು. ಆಸ್ಸಾಂನ ಹೆಸರಾಂತ ಗಾಯಕ, ನಟ ಝುಬೀನ್ ಗರ್ಗ್ ಅವರ ಅಕಾಲಮರಣವಂತೂ ಅಭಿಮಾನಿಗಳನ್ನು ತೀವ್ರ ಶೋಕದಲ್ಲಿ ಮುಳುಗಿಸಿತು. ಒಟ್ಟಾರೆಯಾಗಿ ಇದು ಸುಖ-ದುಃಖಗಳ ಸಮ್ಮಿಶ್ರಣ ವರ್ಷವಾಯಿತು. ಈ ವರ್ಷದ ಇನ್ನಷ್ಟು ವಿವರಗಳು ಮುಂದಿವೆ.
- ಕರ್ನಾಟಕದ ಹೆಮ್ಮೆಯ ಪರಿಸರವಾದಿ, 350ಕ್ಕೂ ಹೆಚ್ಚು ಆಲದ ಮರಗಳನ್ನು ನೆಟ್ಟು, ಪೋಷಿಸಿ ಬೆಳೆಸಿ `ವೃಕ್ಷ ಮಾತೆ’ ಎಂದೇ ಹೆಸರಾಗಿದ್ದ ಪದ್ಮಶ್ರೀ ಸಾಲುಮರದ ತಿಮ್ಮಕ್ಕ (114)
- ಜಾನಪದ ಹಾಡುಗಳ ಕಣಜ, ಪದ್ಮಶ್ರೀ ಸುಕ್ರಿ ಬೊಮ್ಮ ಗೌಡ (88)
- ಪದ್ಮಭೂಷಣ, ಸರಸ್ವತಿ ಸಮ್ಮಾನ್ ಪುರಸ್ಕೃತ ಹಿರಿಯ ಲೇಖಕ, ಕನ್ನಡದ ಪ್ರಮುಖ ಕಾದಂಬರಿಕಾರ, ಚಿಂತಕ ಡಾ. ಎಸ್. ಎಲ್. ಭೈರಪ್ಪ (94)
- ಕಾವ್ಯ, ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ, ವಿಮರ್ಶೆ, ಚಲನಚಿತ್ರ ಮೊದಲಾದ ಪ್ರಕಾರಗಳಲ್ಲಿ ಕೃಷಿ ಮಾಡಿದ್ದ ಲೇಖಕ, ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ. ಹೆಚ್. ಎಸ್. ವೆಂಕಟೇಶಮೂರ್ತಿ (`ಎಚ್ಚೆಸ್ವಿ’)
- ಸಾಹಿತಿ, ವಿಮರ್ಶಕ ಮತ್ತು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ಜಿ. ಎಸ್. ಸಿದ್ಧಲಿಂಗಯ್ಯ (94)
- ಪದ್ಮಭೂಷಣ ಪುರಸ್ಕೃತ ಲೇಖಕ, ಖ್ಯಾತ ಪತ್ರಕರ್ತ, ಏಷ್ಯನ್ ವೀಕ್ ಮ್ಯಾಗ್‌ಜಿನ್ ಸಂಸ್ಥಾಪಕ ಟಿ.ಜೆ.ಎಸ್. ಜಾರ್ಜ್ (97)
- ಇತ್ತೀಚೆಗೆ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದ, `ವೀಣೆ ಬ್ರಹ್ಮ’ ಎಂದು ಗುರುತಿಸಿಕೊಂಡಿದ್ದ ವೀಣೆ ತಯಾರಕ ಪೆನ್ನ ಓಬಳಯ್ಯ (103)
- ಇಸ್ರೋ ಸಂಸ್ಥೆಯ ಮಾಜಿ ಅಧ್ಯಕ್ಷ, ವಿಜ್ಞಾನಿ, ಪದ್ಮವಿಭೂಷಣ ಡಾ. ಕೆ. ಕಸ್ತೂರಿರಂಗನ್ (84)
- ಖ್ಯಾತ ಹಿಂದುಸ್ಥಾನಿ ಗಾಯಕ, ಶಿಕ್ಷಣತಜ್ಞ ಅಶೋಕ ಹುಗ್ಗಣ್ಣವರ (64)
- ಪ್ರಸಿದ್ಧ ಮನೋಹರ ಗ್ರಂಥ ಮಾಲ ಪ್ರಕಾಶನದ ಸಂಪಾದಕ, ನಿವೃತ್ತ ಆಂಗ್ಲ ಪ್ರಾಧ್ಯಾಪಕ ಡಾ. ರಮಾಕಾಂತ ಜೋಶಿ (89)
- ಹಿರಿಯ ಸಾಹಿತಿ, ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಪಂಚಾಕ್ಷರಿ ಹಿರೇಮಠ (92)
- ಬೇಂದ್ರೆ ಸಾಹಿತ್ಯದ ಮೇಲೆ ಸಂಶೋಧನೆ ಮಾಡಿ `ಬೇಂದ್ರೆ ಕೃಷ್ಣಪ್ಪ’ ಎಂದೇ ಹೆಸರಾಗಿದ್ದ ನಾಡೋಜ ಡಾ. ಜಿ. ಕೃಷ್ಣಪ್ಪ (77)
- ವಿಜ್ಞಾನ ಬರಹಗಾರ, ನಿವೃತ್ತ ಪ್ರಾಧ್ಯಾಪಕ ಎಸ್. ಬಾಲಚಂದ್ರರಾವ್ (81)
- ಸಾಮಾಜಿಕ ಚಿಂತಕ, ಮೈಸೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿ (ಹಂಗಾಮಿ) ಮುಝಾಫರ್ ಅಸ್ಸಾದಿ (63)
- ಹಿರಿಯ ಕನ್ನಡ ಹಾಗೂ ತುಳು ಭಾಷಾ ವಿದ್ವಾಂಸ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ. ವಾಮನ ನಂದಾವರ (81)
- ಖ್ಯಾತ ಖಗೋಳಶಾಸ್ತ್ರಜ್ಞ, ವಿಜ್ಞಾನ ಬರಹಗಾರ ಡಾ. ಜಯಂತ ವಿಷ್ಣು ನಾರಳೀಕರ (87)
- ಪದ್ಮಶ್ರೀ ಪುರಸ್ಕೃತ ಯೋಗಗುರು ಸ್ವಾಮಿ ಶಿವಾನಂದ ಬಾಬಾ (129)
- ಲೇಖಕ, ಅಂಕಣಕಾರ, ಚಿತ್ರನಿರ್ಮಾಪಕ, ಪತ್ರಕರ್ತ ಪ್ರೀತಿಶ್ ನಂದಿ (73)
- ಪ್ರಸಿದ್ಧ ಹಿಂದುಸ್ಥಾನಿ ಗಾಯಕ ಪಂ. ಪ್ರಭಾಕರ ಕಾರೇಕರ್ (80)
- ಆಸ್ಸಾಂನ ಪ್ರಖ್ಯಾತ ಗಾಯಕ, ಸಂಗೀತ ನಿರ್ದೇಶಕ ಹಾಗೂ ನಟ ಝುಬೀನ್ ಗರ್ಗ್ (52)
- ಕನ್ನಡ, ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ 16 ಸಾವಿರಕ್ಕೂ ಹೆಚ್ಚು ಚಿತ್ರಗೀತೆಗಳನ್ನು ಹಾಡುವ ಮೂಲಕ ಮೂಲಕ ಕೇಳುಗರ ಹೃದಯ ಸೂರೆಗೊಂಡಿದ್ದ ಮಲಯಾಳಂ ಹಿನ್ನೆಲೆ ಗಾಯಕ ಪಿ. ಜಯಚಂದ್ರನ್ (80)
- ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಾಡಪ್ರಭು ಕೆಂಪೇಗೌಡರ ಬೃಹತ್ ಪ್ರತಿಮೆ, ಗುಜರಾತಿನಲ್ಲಿರುವ ವಿಶ್ವದ ಅತಿ ಎತ್ತರದ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ವಿನ್ಯಾಸಗೊಳಿಸಿದ್ದ ಶಿಲ್ಪಿ ರಾಮ್ ಸುತಾರ್ (100)
- ಲಂಡನ್ ಮೂಲದ ಸಿತಾರ್ ವಾದಕ, ಕಾಶ್ಮೀರ ಶೈವಸಿದ್ಧಾಂತದ ಮಹಾನ್ ವಿದ್ವಾಂಸ ಡಾ. ಮಾರ್ಕ್ ಡಿಕ್ಝ್ಕೋವ್ಸ್ಕಿ (74)









