RSS ನಿಷೇಧದ ಬೇಡಿಕೆ: ಪ್ರಿಯಾಂಕ್ ಖರ್ಗೆ ಪತ್ರ – ಯತ್ನಾಳ್ ಟಾಂಗ್

0
36

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ಸರ್ಕಾರಿ ಸ್ಥಳಗಳಲ್ಲಿ ನಡೆಯುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್.ಎಸ್.ಎಸ್.) ಶಾಖೆಗಳು, ಪಥಸಂಚಲನಗಳು ಮತ್ತು ಸಭೆಗಳನ್ನು ನಿಷೇಧಿಸಲು ಬೇಡಿಕೆ ಇಟ್ಟಿದ್ದಾರೆ.

ಈ ಪತ್ರದ ಹಿನ್ನೆಲೆ ಸಾಮಾಜಿಕ ಹಾಗೂ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಚಿವರ ಈ ನಿಲುವಿಗೆ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿ ಪ್ರಿಯಾಂಕ್ ಖರ್ಗೆಗೆ ಟಾಂಗ್ ನೀಡಿದ್ದಾರೆ.

“ಜಗತ್ತಿನ ಅತ್ಯಂತ ದೊಡ್ಡ ಸ್ವಯಂಸೇವಕರ ಪಡೆ ಹೊಂದಿರುವ ಆರ್.ಎಸ್.ಎಸ್. ನ ನಿಷೇಧಕ್ಕೆ ಕರೆ ನೀಡಿರುವುದು ಅವರ ಬೌದ್ಧಿಕ ದಾರಿದ್ರ್ಯತನ ತೋರಿಸುತ್ತದೆ,” ಎಂದು ಯತ್ನಾಳ್ ಟೀಕಿಸಿದ್ದಾರೆ. ಅವರು ತಮ್ಮ ಪೋಸ್ಟ್‌ನಲ್ಲಿ, “ಪ್ರಕೃತಿ ವಿಕೋಪ, ರೈಲು ದುರಂತ, ಕೋವಿಡ್ ಅಥವಾ ಭೂಕಂಪದಂತಹ ಸಂಕಷ್ಟಗಳ ಸಮಯದಲ್ಲಿ ಮೊದಲು ನೆರವಿಗೆ ಧಾವಿಸುವವರು ಸಂಘದ ಸ್ವಯಂಸೇವಕರು. ಸೇವಾ ಮನೋಭಾವ, ಶಿಸ್ತು, ರಾಷ್ಟ್ರಪ್ರೇಮದ ಪ್ರತಿರೂಪವೇ ಆರ್.ಎಸ್.ಎಸ್.,” ಎಂದು ಬರೆದಿದ್ದಾರೆ.

ಯತ್ನಾಳ್ ಮುಂದುವರೆದು, “ನಿಷೇಧಗೊಳಿಸಬೇಕಾದರೆ ದೇಶವಿರೋಧಿ ಸಂಘಟನೆಗಳಾದ ಎಸ್‌ಡಿಪಿಐ ನಿಷೇಧಿಸಲಿ. ಧಾರ್ಮಿಕ ಹಬ್ಬಗಳಲ್ಲಿ ಕಾನೂನು ಉಲ್ಲಂಘನೆ, ಪ್ರಾಣಿಬಲಿ ಹಾಗೂ ಮದರಸಗಳಲ್ಲಿ ನಡೆಯುವ ದ್ವೇಷಪ್ರೇರಿತ ಪಾಠಗಳ ವಿರುದ್ಧ ಕ್ರಮ ಕೈಗೊಳ್ಳಲಿ,” ಎಂದು ಪ್ರಿಯಾಂಕ್ ಖರ್ಗೆಗೆ ಸಲಹೆ ನೀಡಿದ್ದಾರೆ.

ಅವರು ಪ್ರಿಯಾಂಕ್ ಖರ್ಗೆ ಅವರ ಪ್ರತಿನಿಧಿ ಜಿಲ್ಲೆ ಕಲಬುರ್ಗಿಯನ್ನು ಉಲ್ಲೇಖಿಸಿ, “ಏಳು ದಶಕಗಳಿಂದ ಹಿಂದುಳಿದ ಪ್ರದೇಶ ಎಂದು ಕರೆಯಲ್ಪಡುವ ಕಲಬುರ್ಗಿಯನ್ನು ಮಾದರಿ ಜಿಲ್ಲೆ ಮಾಡಲಿ,” ಎಂದಿದ್ದಾರೆ.

ಯತ್ನಾಳ್ ಅವರ ಈ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟುಹಾಕಿದ್ದು, ಖರ್ಗೆಯ ಪತ್ರಕ್ಕೆ ಸರ್ಕಾರದ ಪ್ರತಿಕ್ರಿಯೆ ಇನ್ನೂ ಲಭ್ಯವಾಗಿಲ್ಲ.

Previous articleಸುರಕ್ಷಿತ ಚಿಕಿತ್ಸೆಗೊಂದು ರಕ್ಷಾಕವಚ: ಅರಿವ ಮರೆಸುವ ಅರಿವಳಿಕೆ
Next articleಸಮ್ಮೋಹಕ ಕಲಾತ್ಮಕ ಕೃತಿಗೆ ನೊಬೆಲ್‌ ಸಾಹಿತ್ಯ ಪ್ರಶಸ್ತಿ

LEAVE A REPLY

Please enter your comment!
Please enter your name here